Bengaluru

ಜೂನ್‌ ಒಳಗೆ ಕೊಪ್ಪಳ ನೀರಾವರಿ ಯೋಜನೆ ಪೂರ್ಣಗೊಳಿಸಿ; ಸಚಿವ ಕಾರಜೋಳ ಸೂಚನೆ

ಬೆಂಗಳೂರು: ಕೃಷ್ಣಾ ಮೇಲ್ದಂಡೆ ಯೋಜನೆಯ ಹಂತ 3 ರಡಿಯ 9 ಉಪ-ಯೋಜನೆ ಗಳಲ್ಲಿ ಒಂದಾಗಿರುವ ಕೊಪ್ಪಳ ಏತ ನೀರಾವರಿ ಯೋಜನೆಯ ಸಂಪೂರ್ಣ ಕಾಮಗಾರಿಯನ್ನು ಜೂನ್ ವೇಳೆಗೆ ಪೂರ್ಣಗೊಳಿಸಲು ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಇಂದು‌ ಇಲಾಖಾಧಿಕಾರಿಗಳ ಸಭೆಯಲ್ಲಿ ನಿರ್ದೇಶನ ನೀಡಿದರು.

ಕೊಪ್ಪಳ ಏತ ನೀರಾವರಿ ಮೊದಲನೆಯ ಹಂತದಲ್ಲಿ ಎರಡು ಹಂತದ ಲಿಫ್ಟ್ ಕಾಮಗಾರಿಯನ್ನು 1050 ಕೋಟಿ ರೂಪಾಯಿಗಳ ಅಂದಾಜು ವೆಚ್ಚದಲ್ಲಿ, ಎರಡನೇ ಹಂತದಲ್ಲಿ ದ್ವಿತೀಯ ಹಂತದ ಪಂಪಿಂಗ್ ಘಟಕಗಳನ್ನು 1864 ಕೋಟಿ ರೂಪಾಯಿ ವೆಚ್ಚದಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ. ಈ ಯೋಜನೆಗೆ 11.565 ಟಿಎಂಸಿ ಮತ್ತು ಹೆರಕಲ್ ಏತ ನೀರಾವರಿ‌ ಯೋಜನೆಯ 1.25 ಟಿಎಂಸಿ ಸೇರಿದಂತೆ ಒಟ್ಟು 12.815 ಟಿಎಂಸಿ‌ ನೀರನ್ನು ಬಳಕೆ ಮಾಡಿಕೊಂಡು, 1,12,015 ಹೆಕ್ಟೇರ್ ಪ್ರದೇಶಕ್ಕೆ ಸೂಕ್ಷ್ಮ ಹನಿ ನೀರಾವರಿಯನ್ನು ಆಳವಡಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಮುಕ್ತಾಯ ಹಂತದಲ್ಲಿರುವ ಕಾಮಗಾರಿ ಸಣ್ಣ ಪುಟ್ಟ ಅಡಚಣೆಗಳನ್ನು ನಿವಾರಿಸಿಕೊಂಡು ಜೂನ್ ವೇಳೆ ಮುಕ್ತಾಯಗೊಳಿಸಿ, ಇದೇ ನೀರಾವರಿ ವರ್ಷದಲ್ಲಿ ನೀರು ಒದಗಿಸಲು ಪ್ರಾರಂಭಿಸಬೇಕು. ಇಲ್ಲದಿದ್ದಲ್ಲಿ, ಕೆಲಸ ಅಪೂರತಣ ಉಳಿಸುವ ಗುತ್ತಿಗೆದಾರರಿಗೆ ವೆಚ್ಚ ಮತ್ತು ದಂಡ ಸಹಿತ ವಸೂಲಿ ಮಾಡಲು ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಿದರು.

ಈ ಸಭೆಯಲ್ಲಿ ಗಣಿ ಮತ್ತು ಭೂ ವಿಜ್ಞಾನ ಸಚಿವ ಹಾಲಪ್ಪ ಆಚಾರ್, ಕೊಪ್ಪಳ ಸಂಸದರಾದ ಕರಡಿ ಸಂಗಣ್ಣ ಉಪಸ್ಥಿತರಿದ್ದರು. ಇಲಾಖೆಯ ಅಪಾರ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್, ಕೃಷ್ಣಾ ಭಾಗ್ಯ ಜಲ ನಿಗಮದ ತಾಂತ್ರಿಕ ನಿರ್ದೇಶಕ ರಾಜೇಂದ್ರ, ಮುಖ್ಯ ಇಂಜಿನಿಯರ್ ಅಶೋಕ್ ವಸ್ನಾದ್ ಮುಂತಾದ ಹಿರಿಯ ಅಧಿಕಾರಿಗಳು ಹಾಜರಿದ್ದರು‌.

Share Post