Bengaluru

ಹೆಚ್ಚುವರಿಯಾಗಿ 2 ಲಕ್ಷ ಟನ್‌ ರಾಗಿ ಖರೀದಿಗೆ ನೋಂದಣಿ; ಸಿಎಂ ಬಸವರಾಜ ಬೊಮ್ಮಾಯಿ

ಬೆಂಗಳೂರು: ರಾಜ್ಯದಲ್ಲಿ ರೈತರಿಂದ ಹೆಚ್ಚುವರಿಯಾಗಿ 2 ಲಕ್ಷ ಟನ್‌ ರಾಗಿ ಖರೀದಿ ಮಾಡಲು ಆದೇಶ ಹೊರಡಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ರಾಗಿ ಬೆಳೆಯುವ ಪ್ರಮುಖ ಜಿಲ್ಲೆಗಳಲ್ಲಿ ನಾಳೆಯಿಂದಲೇ ನೋಂದಣಿ ಆರಂಭಿಸಲು ಆದೇಶ ಹೊರಡಿಸಲಾಗಿದೆ. ನೋಂದಣಿಯ ಬಳಿಕ ರಾಗಿ ಖರೀದಿ ಶುರುವಾಗಲಿದೆ ಎಂದು ಸಿಎಂ ಸ್ಪಷ್ಟಪಡಿಸಿದರು.

ಬಜೆಟ್‌ ಘೋಷಣೆಯ ಯೋಜನೆಗಳ ಬಗ್ಗೆ ನಿನ್ನೆ ಸಭೆ ನಡೆಸಲಾಗಿತ್ತು. ಇವತ್ತೂ ಕೂಡಾ ಆ ಸಭೆ ಮುಂದುವರಿಯುತ್ತದೆ. ಬಜೆಟ್‌ನಲ್ಲಿ ಯೋಜನೆಗಳ ಅನುಷ್ಠಾನಕ್ಕೆ ಹಲವು ಸಲಹೆ, ಸೂಚನೆಗಳನ್ನು ಮತ್ತು ಕಾಲಮಿತಿಯನ್ನು ಕೊಟ್ಟಿದ್ದೇನೆ ಎಂದು ಸಿಎಂ ಬೊಮ್ಮಾಯಿ ಇದೇ ಸಂದರ್ಭದಲ್ಲಿ ತಿಳಿಸಿದರು. ಇನ್ನು ಪಿಎಸ್‌ಐ ನೇಮಕಾತಿ ಅಕ್ರಮದ ಬಗ್ಗೆ ಮಾತನಾಡಿದ ಅವರು, ಸಚಿವ ಡಾ. ಸಿ.ಎನ್. ಅಶ್ವತ್ಥ ನಾರಾಯಣ ಅವರ ಬಗ್ಗೆ ಕಾಂಗ್ರೆಸ್‌ನವರು ಆಧಾರರಹಿತ ಆರೋಪ ಮಾಡುತ್ತಿದ್ದಾರೆ. ಆರೋಪ ಮಾಡುವಾಗ ಸಣ್ಣ ಸಾಕ್ಷ್ಯವಾದರೂ ಬೇಕು. ಆದರೆ, ಜವಾಬ್ದಾರಿಯುತ ಪಕ್ಷವಾದ ಕಾಂಗ್ರೆಸ್‌ ಹಿಟ್‌ ಆ್ಯಂಡ್‌ ರನ್‌ ಮಾಡಲು ಹೊರಟಿದೆ ಎಂದು ಲೇವಡಿ ಮಾಡಿದರು.

Share Post