BengaluruPolitics

ಜೂನ್‌ 10ಕ್ಕೆ ರಾಜ್ಯಸಭಾ ಚುನಾವಣೆ; ಫಲಿಸಲಿಲ್ಲ ಜೆಡಿಎಸ್‌ ತಂತ್ರಗಾರಿಕೆ

ಬೆಂಗಳೂರು; ಕಾಂಗ್ರೆಸ್‌ ಎರಡನೇ ಅಭ್ಯರ್ಥಿಯ ನಾಮಪತ್ರ ವಾಪಸ್‌ ತೆಗೆಸಲು ಜೆಡಿಎಸ್‌ ನಡೆಸಿದ ಕೊನೆ ಹಂತದ ಪ್ರಯತ್ನವೂ ವಿಫಲವಾಯಿತು. ಕಾಂಗ್ರೆಸ್‌ ಯಾವುದೇ ಕಾರಣಕ್ಕೂ ನಮ್ಮ ಅಭ್ಯರ್ಥಿಯನ್ನು ವಾಪಸ್‌ ಪಡೆಯುವುದಿಲ್ಲ ಎಂದು ಹೇಳಿಬಿಟ್ಟಿತು. ಈ ನಡುವೆ ನಾಮಪತ್ರ ವಾಪಸ್‌ ತೆಗೆದುಕೊಳ್ಳುವುದಕ್ಕೆ ಇದ್ದ ಸಮಯ ಕೂಡಾ ಮುಗಿದುಹೋಯ್ತು. ಯಾರೂ ನಾಮಪತ್ರ ವಾಪಸ್‌ ತೆಗೆದಿಲ್ಲ. ಹೀಗಾಗಿ ರಾಜ್ಯಸಭಾ ಚುನಾವಣೆಯಲ್ಲಿ ನಾಲ್ಕನೇ ಸ್ಥಾನಕ್ಕೆ ಯಾರು ಆಯ್ಕೆಯಾಗುತ್ತಾರೆ ಎಂಬುದು ಜೂನ್‌ ಹತ್ತವರೆಗೂ ಕುತೂಹಲವಾಗಿಯೇ ಉಳಿಯಲಿದೆ.

ಶಾಸಕರ ಸಂಖ್ಯಾಬಲದ ಆಧಾರದ ಮೇಲೆ ಕಾಂಗ್ರೆಸ್‌ಗೆ ಒಂದು ಸ್ಥಾನ ಗೆಲ್ಲೋದಕ್ಕೆ ಅವಕಾಶವಿದೆ. ಆ ಸ್ಥಾನ ಜಯರಾಮ್‌ ರಮೇಶ್‌ಗೆ ಲಭ್ಯವಾಗಲಿದೆ. ಇನ್ನು ಗೆಲ್ಲಲು ಬೇಕಾದ 45 ಹೆಚ್ಚುವರಿ ಸ್ಥಾನ ಇಲ್ಲದಿದ್ದರೂ ಕಾಂಗ್ರೆಸ್‌ ಮನ್ಸೂರ್‌ ಅಲಿ ಖಾನ್‌ರನ್ನು ಎರಡನೇ ಅಭ್ಯರ್ಥಿಯಾಗಿ ಕಣಕ್ಕಿಳಿಸಿದೆ. ಇನ್ನು ಜೆಡಿಎಸ್‌ನಲ್ಲಿ ಕೇವಲ 32 ಶಾಸಕರಿದ್ದಾರೆ. ಹೀಗಾಗಿ ಕಾಂಗ್ರೆಸ್‌ ಬೆಂಬಲದೊಂದಿಗೆ ಗೆಲುವು ಸಾಧಿಸಲು ಅದು ಕುಪೇಂದ್ರ ರೆಡ್ಡಿಯನ್ನು ಕಣಕ್ಕಿಳಿಸಿದೆ. ಆದ್ರೆ ಕಾಂಗ್ರೆಸ್‌ ನಾಯಕರು ಜೆಡಿಎಸ್‌ ಬೆಂಬಲವನ್ನೇ ಕೋರಿದ್ದಾರೆ. ನಮ್ಮ ಅಭ್ಯರ್ಥಿಯನ್ನು ವಾಪಸ್‌ ಪಡೆಯೋದಿಲ್ಲ ಎಂದು ಹೇಳಿದ್ದಾರೆ.

ಇನ್ನು ಬಿಜೆಪಿ ಎರಡು ಸ್ಥಾನ ಗೆಲ್ಲಲು ಶಕ್ತವಾಗಿದೆ. ನಿರ್ಮಲಾ ಸೀತಾರಾಮನ್‌ ಹಾಗೂ ಜಗ್ಗೇಶ್‌ ಆ ಸ್ಥಾನಗಳನ್ನು ತುಂಬಲಿದ್ದಾರೆ. ಆದ್ರೆ ಕಾಂಗ್ರೆಸ್‌-ಜೆಡಿಎಸ್‌ ಜಗಳದಲ್ಲಿ ಮೂರನೇ ಅಭ್ಯರ್ಥಿಗಳನ್ನು ಗೆಲ್ಲಿಸಿಕೊಳ್ಳಲು ಬಿಜೆಪಿ ಕೂಡಾ ಮೂರನೇ ಅಭ್ಯರ್ಥಿಯನ್ನು ಕಣಕ್ಕಿಳಿಸಿದೆ. ಲೆಹರ್‌ ಸಿಂಗ್‌ ಬಿಜೆಪಿಯ ಮೂರನೇ ಅಭ್ಯರ್ಥಿಯಾಗಿದ್ದಾರೆ.

ಪಕ್ಷದ ಬಲಾಬಲ ನೋಡಿದರೆ ಪಕ್ಷೇತರರ ಬೆಂಬಲವೂ ಬಿಜೆಪಿಯ 122 ಶಾಸಕರಿದ್ದಾರೆ. ಕಾಂಗ್ರೆಸ್‌ಗೆ 70 ಶಾಸಕರಿದ್ದಾರೆ. ಜೆಡಿಎಸ್‌ಗೆ 32 ಶಾಸಕರಿದ್ದಾರೆ. ಬಿಜೆಪಿಯ ಇಬ್ಬರು ಅಭ್ಯರ್ಥಿಗಳಿಗೆ ತಲಾ 45 ಶಾಸಕರು ಮತ ನೀಡಿದರೆ, ಉಳಿಯೋದು 32 ಶಾಸಕರು. ಬಿಜೆಪಿಯ ಮೂರನೇ ಅಭ್ಯರ್ಥಿ ಲೆಹರ್‌ ಸಿಂಗ್‌ ಗೆಲ್ಲಬೇಕಾದರೆ ಇನ್ನೂ 13 ಶಾಸಕರ ಬೆಂಬಲ ಬೇಕು. ಜೆಡಿಎಸ್‌ ಹಾಗೂ ಕಾಂಗ್ರೆಸ್‌ನ ಶಾಸಕರು ಕ್ರಾಸ್‌ ವೋಟಿಂಗ್‌ ಮಾಡಿದರೆ ಬಿಜೆಪಿಗೆ ಗೆಲುವು ಸುಲಭವಾಗುತ್ತದೆ. ಮಾಹಿತಿ ಪ್ರಕಾರ, ಜೆಡಿಎಸ್‌ನ ಹತ್ತು ಹಾಗೂ ಕಾಂಗ್ರೆಸ್‌ನ ಮೂವರು ಬಿಜೆಪಿಗೆ ಕ್ರಾಸ್‌ ವೋಟಿಂಗ್‌ ಮಾಡಬಹುದು ಎಂದು ಹೇಳಲಾಗುತ್ತಿದೆ.

ಇನ್ನು ಕಾಂಗ್ರೆಸ್‌ನ ಒಬ್ಬರು ಅಭ್ಯರ್ಥಿಗೆ 45 ಶಾಸಕರು ಮತ ಹಾಕಿದ ಮೇಲೆ ಕಾಂಗ್ರೆಸ್‌ನಲ್ಲಿ ಉಳಿಯೋದು 25 ಶಾಸಕರು ಮಾತ್ರ. ಅಂದರೆ ಕಾಂಗ್ರೆಸ್‌ನ ಎರಡನೇ ಅಭ್ಯರ್ಥಿ ಮನ್ಸೂರ್‌ ಅಲಿ ಖಾನ್‌ ಗೆಲ್ಲಬೇಕಾದರೆ ಇನ್ನೂ 20 ಶಾಸಕರ ಬೆಂಬಲ ಬೇಕು. ಜೆಡಿಎಸ್‌ ಶಾಸಕರು ಇರೋದೇ 32 ಮಂದಿ. ಹೀಗಾಗಿ ಜೆಡಿಎಸ್‌ ಅಭ್ಯರ್ಥಿ ಕುಪೇಂದ್ರ ರೆಡ್ಡಿ ಗೆಲ್ಲಬೇಕಾದರೆ, ಇನ್ನೂ 13 ಶಾಸಕರ ಬೆಂಬಲ ಅಗತ್ಯ.

ಹೆಚ್ಚುವರಿ ಅಭ್ಯರ್ಥಿಗಳ ನಾಮಪತ್ರ ವಾಪಸ್‌ ಪಡೆಯದ ಹಿನ್ನೆಲೆಯಲ್ಲಿ ಮತದಾನ ನಡೆಯುತ್ತದೆ. ಎಲ್ಲಾ ಪಕ್ಷಗಳೂ ಈಗಾಗಲೇ ತಮ್ಮ ತಮ್ಮ ಶಾಸಕರಿಗೆ ವಿಪ್‌ ಜಾರಿ ಮಾಡುತ್ತಿವೆ. ಕಾಂಗ್ರೆಸ್‌ ಈಗಾಗಲೇ ತಮ್ಮ ಶಾಸಕರಿಗೆ ವಿಪ್‌ ಜಾರಿ ಮಾಡಿದೆ. ಹೀಗಾಗಿ, ಯಾರು ಕ್ರಾಸ್‌ ವೋಟಿಂಗ್‌ ಮಾಡ್ತಾರೆ, ಯಾವ ಪಕ್ಷಕ್ಕೆ ಮತ ಹಾಕ್ತಾರೆ ಅನ್ನೋದು ಕುತೂಹಲಕ್ಕೆ ಕಾರಣವಾಗಿದೆ.

 

Share Post