HIJAB CASE: ಬೆಂಗಳೂರಿಗೂ ಕಾಲಿಟ್ಟ ಹಿಜಾಬ್ ವಿವಾದ; ಚಂದ್ರಲೇಔಟ್‌ನಲ್ಲಿ ಗೊಂದಲ
ಬೆಂಗಳೂರು: ಹಿಜಾಬ್ (hijab) ವಿವಾದ ಬೆಂಗಳೂರಿನ ಶಾಲೆಗಳಿಗೂ ಕಾಲಿಟ್ಟಿದೆ. ಒಂದು ಕಡೆ ಕೋರ್ಟ್ ಅಂತಿಮ ತೀರ್ಪು ಬರುವವರೆಗೂ ಧರ್ಮದ ಗುರುತುಗಳಿಗೆ ಶಾಲೆಗಳಲ್ಲಿ ಅವಕಾಶವಿಲ್ಲ ಎಂದು ಹೇಳಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರಿನ ಖಾಸಗಿ ಶಾಲೆಯೊಂದರಲ್ಲಿ ಹಿಜಾಬ್‌ಗೆ ಧರಿಸಿ ಬಂದ ವಿದ್ಯಾರ್ಥಿನಿಯರಿಗೆ ತಡೆ ಒಡ್ಡಲಾಗಿದೆ. ಆದ್ರೆ ಇದಕ್ಕೆ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದು, ಗೊಂದಲದ ವಾತಾವರಣ ನಿರ್ಮಾಣವಾಗಿದೆ.
ಚಂದ್ರಾ ಲೇಔಟ್ನ ವಿದ್ಯಾಸಾಗರ್ ಶಾಲೆಯಲ್ಲಿ (vidyasagar schoool) ಹಿಜಾಬ್ ವಿಚಾರವಾಗಿ ಸಂಘರ್ಷ ನಡೆದಿದೆ. ಹಿಜಾಬ್ ಧರಿಸದಂತೆ ವಿದ್ಯಾರ್ಥಿನಿಯರಿಗೆ ಶಾಲೆಯ ಶಿಕ್ಷಕರು ಸೂಚನೆ ನೀಡಿದ್ದಾರೆ. ಈ ವಿಚಾರ ಗೊತ್ತಾಗಿ ಪೋಷಕರು ತರಗತಿಗೆ ನುಗ್ಗಿ ಗಲಾಟೆ ನಡೆಸಿದ್ದಾರೆ. ಏಳನೇ ತರಗತಿ ವಿದ್ಯಾರ್ಥಿಗಳಿಗೆ ಹಿಜಾಬ್ ವಿಚಾರವಾಗಿ ಕಿರುಕುಳ ನೀಡಲಾಗುತ್ತಿದೆ. ಹಿಜಾಬ್ ಧರಿಸುವುದು ನಮ್ಮ ಹಕ್ಕು ಎಂದು ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದರಿಂದಾಗಿ ಸ್ಥಳದಲ್ಲಿ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು.
ಈ ಹಿನ್ನೆಲೆಯಲ್ಲಿ ಸ್ಥಳಕ್ಕೆ ಆಗಮಿಸಿದ ಪೊಲೀಸರು, ಪರಿಸ್ಥಿತಿ ನಿಯಂತ್ರಿಸಲು ಹರಸಾಹಸಪಟ್ಟರು. ಬೆಂಗಳೂರು ದಕ್ಷಿಣ ವಿಭಾಗದ ಡಿಡಿಪಿಐ ರಾಜೇಂದ್ರ ಕೂಡಾ ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಜೊತೆಗೆ ಪೋಷಕರು ಹಾಗೂ ಶಿಕ್ಷಕರ ಜೊತೆ ಚರ್ಚೆ ನಡೆಸಿದರು.