ನಾನು ಮುಖ್ಯಮಂತ್ರಿ ಆಗಿಬಿಡುತ್ತೇನೆಂಬ ಭಯ ಡಿಕೆಶಿಗಿದೆ; ಸಚಿವ ಅಶ್ವತ್ಥನಾರಾಯಣ
ಬೆಂಗಳೂರು: ಎಲ್ಲಿ ನಾನು ಮುಖ್ಯಮಂತ್ರಿ ಆಗಿ ಬಿಡುತ್ತೇನೆ ಎಂಬ ಭಯ ಡಿ.ಕೆ.ಶಿವಕುಮಾರ್ ಅವರನ್ನು ಕಾಡುತ್ತಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥನಾರಾಯಣ ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿರುವ ಅವರು, ಡಿ.ಕೆ.ಶಿವಕುಮಾರ್ ಅವರನ್ನು ರಾಮನಗರ ಜಿಲ್ಲೆಯ ಜನ ಸಂಪೂರ್ಣ ಒಪ್ಪಿಲ್ಲ. ಡಿಕೆಶಿ ಕೇವಲ ರಾಮನಗರಕ್ಕೆ ಸೀಮಿತವಾದ ನಾಯಕ. ನಮ್ಮ ಪೂರ್ವಜರೂ ರಾಮನಗರದವರೇ. ಡಿ.ಕೆ.ಶಿವಕುಮಾರ್ ಅವರ ಭ್ರಷ್ಟಾಚಾರದ ಬಂಡವಾಳವನ್ನು ಬಿಚ್ಚಿಡುತ್ತೇನೆ ಎಂದು ಹೇಳಿದರು.
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನನ್ನ ಸಹೋದರ ಸತೀಶ್ ವಿರುದ್ಧ ಪಿಎಸ್ಐ ಅಕ್ರಮದಲ್ಲಿ ಭಾಗಿಯಾಗಿರುವ ಬಗ್ಗೆ ಆರೋಪ ಮಾಡಿದ್ದಾರೆ. ಅವರು ಮಾಡಿರುವ ಆರೋಪಕ್ಕೆ ಸಾಕ್ಷ್ಯ ನೀಡಲಿ. ನಮ್ಮ ಕುಟುಂಬದಲ್ಲಿ ಭ್ರಷ್ಟಾಚಾರ ಪದ್ಧತಿ ಇಲ್ಲ, ಹಾಗೆ ಇರುವುದಕ್ಕೆ ನಮ್ಮದು ಡಿ.ಕೆ.ಶಿವಕುಮಾರ್ ಕುಟುಂಬವೂ ಅಲ್ಲ ಎಂದು ಸಚಿವ ಅಶ್ವತ್ಥನಾರಾಯಣ ಹೇಳಿದ್ರು. ಪಿಎಸ್ಐ ನೇಮಕಾತಿಯಲ್ಲಿ ಯಾವುದೇ ವ್ಯಕ್ತಿಗೂ ಶಿಫಾರಸು ಮಾಡುವ ಪ್ರಶ್ನೆಯೇ ಇಲ್ಲ. ಯಾರಾದರೂ ತಪ್ಪು ಮಾಡಿದ್ದರೆ ಶಿಕ್ಷೆ ಅನುಭವಿಸುತ್ತಾರೆ. ತನಿಖೆ ವರದಿ ಬಂದ ನಂತರ ಉಪ್ಪು ತಿಂದವರು ನೀರು ಕುಡಿಯುತ್ತಾರೆ ಎಂದು ಅಶ್ವತ್ಥನಾರಾಯಣ ಇದೇ ಸಂದರ್ಭದಲ್ಲಿ ತಿಳಿಸಿದರು.