ರಾಜ್ಯಪಾಲರು ಯಾರ ಕೈಗೊಂಬೆ ಆಗುವುದು ಬೇಡ; ಕೂಡಲೇ ಕೇಂದ್ರಕ್ಕೆ ವರದಿ ಸಲ್ಲಿಸಲು ಹೆಚ್ಡಿಕೆ ಒತ್ತಾಯ
ಬೆಂಗಳೂರು: ರಾಜ್ಯದಲ್ಲಿ ಶಾಂತಿ ಭದ್ರತೆಗೆ ದೊಡ್ಡ ಅಪಾಯ ಎದುರಾಗಿದ್ದು, ಕೂಡಲೇ ರಾಜ್ಯಪಾಲರು ಮಧ್ಯಪ್ರವೇಶ ಮಾಡಬೇಕು ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕರಾದ ಹೆಚ್.ಡಿ.ಕುಮಾರಸ್ವಾಮಿ ಅವರು ಆಗ್ರಹಿಸಿದ್ರು.
ಶಾಂತಿಯುತವಾಗಿದ್ದ ರಾಜ್ಯವು ಹಿಜಾಬ್, ಕೇಸರಿ ಶಾಲು ಹಾಗೂ ಈಗ ಶಿವಮೊಗ್ಗದಲ್ಲಿ ಯುವಕನೊಬ್ಬನ ಕೊಲೆ ಕಾರಣದಿಂದ ಇಡೀ ರಾಜ್ಯವೇ ಕುದಿಯುವ ಕುಲುಮೆಯಾಗಿದೆ. ಇಂಥ ಸೂಕ್ಷ್ಮ ಸಮಯದಲ್ಲಿ ರಾಜ್ಯಪಾಲರು ಮೌನವಾಗಿರುವುದು ಸರಿಯಲ್ಲ. ಅವರು ಯಾರ ಕೈಗೊಂಬೆಯೂ ಅಲ್ಲ, ಕೈಗೊಂಬೆ ಆಗಲೂ ಬಾರದು. ಹೀಗಾಗಿ ರಾಜ್ಯಪಾಲರು ಕೂಡಲೇ ಮಧ್ಯಪ್ರವೇಶ ಮಾಡಿ ಸರಕಾರದಿಂದ ಮಾಹಿತಿ ಪಡೆದು ಕೇಂದ್ರ ಸರಕಾರಕ್ಕೆ ವರದಿ ಸಲ್ಲಿಸಬೇಕು ಎಂದು ಒತ್ತಾಯಿಸಿದರು.
ಅಲ್ಲದೆ, ಶೀಘ್ರವೇ ತಾವು ಕೂಡ ಖುದ್ದು ರಾಜ್ಯಪಾಲರನ್ನು ಭೇಟಿಯಾಗಿ ರಾಜ್ಯದಲ್ಲಿ ನಡೆಯುತ್ತಿರುವ ಅಹಿತಕರ ಘಟನೆಗಳು ಹಾಗೂ ವಿಧಾನ ಮಂಡಲ ಕಲಾಪವನ್ನು ಸರಕಾರ ಸಮರ್ಪಕವಾಗಿ ನಡೆಸದ ಬಗ್ಗೆ ನಮ್ಮ ಪಕ್ಷದ ವತಿಯಿಂದ ದೂರು ನೀಡಲಾಗುವುದು ಎಂದು ಅವರು ತಿಳಿಸಿದರು.
ರಾಜ್ಯ ಸರ್ಕಾರ ವಜಾ ಆಗುವಂತಹ ಪರಿಸ್ಥಿತಿ
ಕೇಂದ್ರ ಸರ್ಕಾರವೇ ರಾಜ್ಯ ಸರ್ಕಾರವನ್ನು ವಜಾ ಮಾಡುವಂಥ ಪರಿಸ್ಥಿತಿ ರಾಜ್ಯದಲ್ಲಿ ಸೃಷ್ಠಿ ಆಗಿದೆ. ಬಿಜೆಪಿ ಪಕ್ಷದ ಲೋಕಸಭಾ ಸದಸ್ಯರೊಬ್ಬರೇ ಸರಕಾರದ ಅಸಮರ್ಥತೆ ನಮಗೆ ನಾಚಿಕೆ ಉಂಟು ಮಾಡುತ್ತಿದೆ ಎಂದು ಹೇಳಿದ್ದಾರೆ. ಜನರು ಕೂಡ ರೋಸಿ ಹೋಗಿದ್ದಾರೆ. ಹೀಗಾಗಿ ರಾಜ್ಯಪಾಲರು ತಕ್ಷಣ ಮಧ್ಯಪ್ರವೇಶ ಮಾಡಲೇಬೇಕು ಎಂದು ಕುಮಾರಸ್ವಾಮಿ ಅವರು ಒತ್ತಾಯ ಮಾಡಿದರು.
ರಾಜ್ಯದಲ್ಲಿ ಇಂಥ ಕೆಟ್ಟ ವಾತಾವರಣ ಉಂಟಾಗಲು ರಾಜ್ಯ ಸರ್ಕಾರವೇ ಕಾರಣ. ಅವರ ಅಸಮರ್ಪಕ ಕಾರ್ಯ ವೈಖರಿಯಿಂದ ಇಡೀ ಶಿಕ್ಷಣ ಕ್ಷೇತ್ರ ಬಂದ್ ಮಾಡಿ ಕೂರಿಸಿದ್ದಾರೆ. ಶಾಲೆ ಕಾಲೇಜುಗಳಲ್ಲಿ ಸಂಘರ್ಷದ ವಾತಾವರಣ ಸೃಷ್ಟಿ ಆಗಿದೆ. ಇನ್ನು ಹೈಕೋರ್ಟ್ ಅಂತೂ ಬಿಬಿಎಂಪಿಗೆ ನಿತ್ಯವೂ ಛೀಮಾರಿ ಹಾಕುತ್ತಿದೆ. ಅಧಿಕಾರಿಗಳನ್ನು ಜೈಲಿಗೆ ಕಲಿಸುವ ಎಚ್ಚರಿಕೆಯನ್ನು ನೀಡಿದೆ. ನಿಮ್ಮನ್ನು ಜೈಲಿಗೆ ಹಾಕಬೇಕಿತ್ತು. ಆದರೂ ಔದಾರ್ಯ ತೋರಿಸಿದ್ದೇವೆ ಎಂದು ನ್ಯಾಯಮೂರ್ತಿಗಳೇ ಎಚ್ಚರಿಕೆ ನೀಡುತ್ತಿದ್ದಾರೆ. ಈ ಸರಕಾರಕ್ಕೆ ಜನರ ಬಗ್ಗೆ ಬದ್ಧತೆ ಇದೆಯಾ? ಬಹಳ ನೊಂದು ಈ ಮಾತನ್ನು ಹೇಳುತ್ತಿದ್ದೇನೆ ಎಂದು ಬೇಸರ ವ್ಯಕ್ತಪಡಿಸಿದ್ರು.
ಕಲಾಪದ ಅಮೂಲ್ಯ ಸಮಯವನ್ನು ಹಾಳು ಮಾಡಿದರು
ಆಡಳಿತಾರೂಢ ಬಿಜೆಪಿ ಹಾಗೂ ಅಧಿಕೃತ ಪ್ರತಿಪಕ್ಷ ಕಾಂಗ್ರೆಸ್ ಎರಡೂ ಕುಮ್ಮಕ್ಕಾಗಿ ವಿಧಾನಮಂಡಲದ ಕಲಾಪವನ್ನು ಸಂಪೂರ್ಣವಾಗಿ ಹಾಳು ಮಾಡಿವೆ. 2022-2023ನೇ ವರ್ಷದ ಮೊದಲ ರಾಜ್ಯಪಾಲರ ಜಂಟಿ ಅಧಿವೇಶನ ಭಾಷಣದ ವಂದನಾ ನಿರ್ಣಯದ ಮೇಲೆ ಚರ್ಚೆ ಇದಾಗಿತ್ತು. ಸದನದಲ್ಲಿ ಚರ್ಚೆಗೆ ಅವಕಾಶಗಳು ಸಿಗಲಿಲ್ಲ. ಎರಡು ರಾಷ್ಟ್ರೀಯ ಪಕ್ಷಗಳ ನಡವಳಿಕೆಗಳಿಂದ ಇದು ಆಗಲಿಲ್ಲ. ಆದರೆ ಆಡಳಿತ ಪಕ್ಷದ ಸದಸ್ಯರು ವಂದನಾ ನಿರ್ಣಯದ ಮೇಲೆ ಮಾತನಾಡಿದರೂ ಅವರು ರಾಜ್ಯದ ಸಮಸ್ಯೆಗಳ ಬಗ್ಗೆ ಮಾತನಾಡುವುದು ಬಿಟ್ಟು ಬರೀ ಮೋದಿ ಅವರ ಸಾಧನೆಗಳ ಬಗ್ಗೆ ಮಾತ್ರ ಹೇಳಿದರು ಎಂದು ಕುಮಾರಸ್ವಾಮಿ ಅವರು ಬೇಸರ ವ್ಯಕ್ತಪಡಿಸಿದರು.
ಸಿಎಂ ಅವರು ಕಾಂಗ್ರೆಸ್ ಧರಣಿ ಮಧ್ಯೆ ಉತ್ತರ ನೀಡಿದ್ದಾರೆ. ರಾಜ್ಯದ ವಿಧಾನ ಮಂಡಲದ ಇತಿಹಾಸದಲ್ಲಿ ಮೊದಲನೇ ಬಾರಿ ಈ ರೀತಿ ಕಲಾಪ ಬಲಿಯಾಗಿದೆ. ಅತ್ಯಂತ ಮಹತ್ವದ ವಿಚಾರಗಳು ಸದನದಲ್ಲಿ ಚರ್ಚೆ ಆಗಬೇಕಿತ್ತು. ಹಲವಾರು ಬಾರಿ ನಾನು ಹೇಳಿದ್ದೇನೆ. ಗಲಾಟೆ ಮಾಡುವವರನ್ನು ಹೊರ ಹಾಕಿ ಅಥವಾ ಕಲಾಪವನ್ನು ಅನಿರ್ದಿಷ್ಟಾವಧಿಗೆ ಮುಂದಕ್ಕೆ ಹಾಕಿ ಎಂದು ಸಭಾಧ್ಯಕ್ಷರಿಗೆ ಮನವಿ ಮಾಡಿದ್ದೆ. ಆದರೆ, ನಮ್ಮ ಮನವಿಯನ್ನು ಪರಿಗಣಿಸದೇ, ನಮ್ಮ ಪಕ್ಷಕ್ಕೆ ಮಾತನಾಡಲು ಅವಕಾಶವನ್ನು ನೀಡದೇ ಕಲಾಪವನ್ನು ಪ್ರತಿಷ್ಠೆಗೆ ಬಲಿ ಕೊಡಲಾಗಿದೆ ಎಂದು ಕುಮಾರಸ್ವಾಮಿ ಅವರು ದೂರಿದರು.
ಯಾವ ಪುರುಷಾರ್ಥಕ್ಕೆ ರಾಜ್ಯಪಾಲರ ಭೇಟಿ? ಎಂದ ಹೆಚ್‌ಡಿಕೆ
ಸದನದ ಕಲಾಪವನ್ನು ಹಾಳು ಮಾಡಿದ ಅಧಿಕೃತ ಪ್ರತಿಪಕ್ಷವೇ ಸರಕಾರದ ವಿರುದ್ಧ ರಾಜ್ಯಪಾಲರಿಗೆ ದೂರು ಕೊಡಲು ಹೊರಟಿದೆ. ಅದೂ ರಾಜಭವನದ ತನಕ ನಡೆದುಕೊಂಡು ಹೋಗಿ ಮನವಿ ಕೊಟ್ಟು ಪ್ರಚಾರ ಪಡೆಯುವ ಹುನ್ನಾರ. ಯಾವ ಮುಖ ಇಟ್ಟುಕೊಂಡು ಆ ಪಕ್ಷದ ನಾಯಕರು ರಾಜ್ಯಪಾಲರನ್ನು ಭೇಟಿಯಾಗುತ್ತಾರೆ? ಈ ನಾಟಕವನ್ನು ಬೇರೆ ರಾಜ್ಯದ ಜನರು ನೋಡಬೇಕೆ ಎಂದು ಕುಮಾರಸ್ವಾಮಿ ಅವರು ಗುಡುಗಿದರು.