ಗೋವಿಂದಬಾಬು ಪೂಜಾರಿ ಬಯೋಪಿಕ್ ಘೋಷಿಸಿದ್ದರಂತೆ ಹಾಲಶ್ರೀ
ಬೆಂಗಳೂರು; ಬೈಂದೂರು ಬಿಜೆಪಿ ಟಿಕೆಟ್ ಕೊಡಿಸುತ್ತೇವೆ ಎಂದು ಉದ್ಯಮಿ ಗೋವಿಂದ ಬಾಬು ಪೂಜಾರಿಗೆ ಚೈತ್ರಾ ಕುಂದಾಪುರ, ಹಾಲಶ್ರೀ ಟೀಂ ಐದು ಕೋಟಿ ರೂಪಾಯಿ ವಂಚನೆ ಮಾಡಿರುವುದು ಗೊತ್ತೇ ಇದೆ. ನಿನ್ನೆಯಷ್ಟೇ ಹಾಲಶ್ರೀ ಸ್ವಾಮೀಜಿ ಬಂಧನ ಕೂಡಾ ಆಗಿದೆ. ಅಂದಹಾಗೆ ಇದೇ ಹಾಲಶ್ರೀ ಸ್ವಾಮೀಜಿ ಗೋವಿಂದ ಬಾಬು ಪೂಜಾರಿಯವರ ಬಯೋಪಿಕ್ ಮಾಡೋದಾಗಿ ಘೋಷಣೆ ಮಾಡಿದ್ದರಂತೆ. ಈ ವಿಚಾರ ಇದೀಗ ಬಯಲಾಗಿದೆ.
ಗೋವಿಂದ ಬಾಬು ಪೂಜಾರಿ ಜೀರೋ ಇಂದ ಹೀರೋ ಆದವರು. ಬರಿಗೈಲಿ ಮುಂಬೈಗೆ ಹೋಗಿ ಹೋಟೆಲ್ಗಳಲ್ಲಿ ಕೆಲಸ ಮಾಡಿ, ಇದೀಗ ದೊಡ್ಡ ಕಂಪನಿ ಕಟ್ಟಿದ್ದಾರೆ. ಅದಕ್ಕೆ ಶೆಫ್ ಟಾಕ್ ಎಂದು ಹೆಸರಿಟ್ಟಿದ್ದಾರೆ. ಅವರ ಸಾಧನೆಯನ್ನೇ ಮುಂದಿಟ್ಟುಕೊಂಡು ಸಿನಿಮಾ ತೆಗೆಯೋಕೆ ಹೊರಟಿದ್ದರಂತೆ. ಮಂಜು ಕೋಟ್ಯಾನ್ ಎಂಬುವವರು ಗೋವಿಂದ ಬಾಬು ಪೂಜಾರಿಯವರ ಬಯೋಪಿಕ್ ತೆಗೆಯಲು ಮುಂದಾಗಿದ್ದರಂತೆ. ಅಂದುಕೊಂಡಂತೆ ನಡೆಸಿದ್ದರೆ ಇಷ್ಟೊತ್ತಿಗೆ ಇದರ ಮುಹೂರ್ತು ಕೂಡಾ ನೆರವೇರಬೇಕಿತ್ತು. ಆದ್ರೆ ಚೈತ್ರಾ ಟೀಂ ವಂಚನೆ ಬಯಲಾಗಿದ್ದರಿಂದ ಬಯೋಪಿಕ್ ಅಲ್ಲಿಗೇ ನಿಂತಿದೆ.
ಕೆಲ ತಿಂಗಳ ಹಿಂದೆ, ಚೆಫ್ ಟಾಕ್ ಸಂಸ್ಥೆಯ 15ನೇ ವಾರ್ಷಿಕೋತ್ಸವಕ್ಕೆ ಹಾಲಶ್ರೀ ಸ್ವಾಮೀಜಿ ಅತಿಥಿಯಾಗಿ ಬಂದಿದ್ದರು. ಈ ವೇಳೆ ಹಾಲಶ್ರೀಯವರು ಗೋವಿಂದ ಬಾಬು ಪೂಜಾರಿ ಕುರಿತಾದ ಸಿನಿಮಾ ಮಾಡ್ತಿರೋ ಬಗ್ಗೆ ಅನೌನ್ಸ್ ಮಾಡಿದ್ದರು. ಅಭಿನವ ಹಾಲಶ್ರೀ ಕೈಯ್ಯಲ್ಲೇ ಸಿನಿಮಾದ ಮೊದಲ ಸೀನ್ ನ ಕ್ಲ್ಯಾಪ್ ಮಾಡಿಸಲು ಸಿದ್ದತೆ ಕೂಡ ಮಾಡಲಾಗಿತ್ತು ಎನ್ನಲಾಗಿದೆ.
ಇನ್ನು ಚಿತ್ರದ ನಿರ್ದೇಶನ ಮಾಡಬೇಕೆಂದಿದ್ದ ಮಂಜು ಕೋಟ್ಯಾನ್ ಈ ಬಗ್ಗೆ ಮಾತನಾಡಿದ್ದು, ಗೋವಿಂದ ಬಾಬು ಪೂಜಾರಿ ಕಷ್ಟದಿಂದ ಮೇಲೆ ಬಂದವರು. ಅವರು ಹೀಗೆ ಮೋಸ ಆಗಿದೆ ಎಂದು ಕೇಳಿ ಬೇಸರವಾಯಿತು ಎಂದಿದ್ದಾರೆ.