ಸ್ಥಳೀಯರಿಗೆ ಅವಕಾಶ ಕೊಡಿ, ಇಲ್ಲವೆ ಡಿಕೆಶಿ ಸ್ಪರ್ಧಿಸಲಿ; ಖರ್ಗೆಗೆ ಮಂಡ್ಯ ಮುಖಂಡರ ಮನವಿ
ನವದೆಹಲಿ; ಮಂಡ್ಯ ವಿಧಾನಸಭಾ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಕುಮಾರಸ್ವಾಮಿ ಸ್ಪರ್ಧಿಸುತ್ತಾರೆಂದು ಹೇಳಲಾಗುತ್ತದೆ. ಹಾಗೇನಾದರೂ ಆದರೆ, ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರೇ ಮಂಡ್ಯದಲ್ಲಿ ಸ್ಪರ್ಧೆ ಮಾಡಲಿ ಅಂತ ಮಂಡ್ಯ ಸ್ಥಳೀಯ ಕಾಂಗ್ರೆಸ್ ಮುಖಂಡರು ಒತ್ತಡ ಹೇರಿದ್ದಾರೆ. ದೆಹಲಿಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿದ್ದ ಮುಖಂಡರು ಇಂತಹದ್ದೊಂದು ಬೇಡಿಕೆ ಇಟ್ಟಿದ್ದಾರೆ.
ಮಂಡ್ಯ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು ಹತ್ತು ಮಂದಿ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳಿದ್ದಾರೆ. ಅದ್ರಲ್ಲಿ ಅಮರಾವತಿ ಚಂದ್ರಶೇಖರ್, ಸಿದ್ದಾರೂಢ ಸತೀಶ್ ಗೌಡ, ರಾಮಲಿಂಗಯ್ಯ, ಬಿ.ಸಿ. ಶಿವಾನಂದ, ಹೆಚ್.ಸಿ ಶಿವಲಿಂಗೇಗೌಡ ಇದ್ದಾರೆ. ಆದ್ರೆ ಇತ್ತೀಚೆಗೆ ಪಕ್ಷ ಸೇರಿರುವವರು ಟಿಕೆಟ್‌ಗಾಗಿ ಪ್ರಯತ್ನ ಮಾಡುತ್ತಿದ್ದಾರೆ. ಸ್ಥಳೀಯರಿಗೆ ಬಿಟ್ಟು ಬೇರೆಯವರಿಗೆ ಟಿಕೆಟ್ ನೀಡಿದರೆ ನಾವು ಕಾಂಗ್ರೆಸ್‌ನ್ನು ಬೆಂಬಲಿಸುವುದಿಲ್ಲ ಅಂತ ಆತ್ಮಾನಂದ ನೇತೃತ್ವದ ತಂಡ ಮಲ್ಲಿಕಾರ್ಜುನ ಖರ್ಗೆಯವರಿಗೆ ಹೇಳಿದೆ.
ಸ್ಪರ್ಧೆ ಮಾಡಿದರೆ ಡಿ.ಕೆ.ಶಿವಕುಮಾರ್ ಅವರು ಸ್ಪರ್ಧೆ ಮಾಡಲಿ, ಇಲ್ಲದಿದ್ದರೆ ಸ್ಥಳೀಯ ಮುಖಂಡರಿಗೇ ಟಿಕೆಟ್ ನೀಡಬೇಕು ಅಂತ ಆಗ್ರಹಿಸಿದ್ದಾರೆ. ಇದಕ್ಕೆ ಮಲ್ಲಿಕಾರ್ಜುನ ಖರ್ಗೆಯವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ತಿಳಿದುಬಂದಿದೆ.