ಅಪ್ಪ ಕಲೆಕ್ಷನ್ ಕಿಂಗ್ , ಮಗ ಕಲೆಕ್ಷನ್ ಪ್ರಿನ್ಸ್; ಕುಮಾರಸ್ವಾಮಿ ಸಿಡಿಮಿಡಿ
ಬೆಂಗಳೂರು; ಸಿದ್ದರಾಮಯ್ಯ ಅವರಿಗೆ ಕರೆ ಮಾಡಿ ಲಿಸ್ಟ್ ಬಗ್ಗೆ ಯತೀಂದ್ರ ಸಿದ್ದರಾಮಯ್ಯ ಮಾತನಾಡಿದ ವಿಡಿಯೋ ವೈರಲ್ ಆಗುತ್ತಿದೆ. ಇದಕ್ಕೆ ಮಾಜಿ ಸಿಎಂ ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಅವರು ಕರ್ನಾಟಕದಲ್ಲಿ ಅಪ್ಪ ಕಲೆಕ್ಷನ್ ಕಿಂಗ್ , ಮಗ ಕಲೆಕ್ಷನ್ ಪ್ರಿನ್ಸ್ ಎಂದು ಜರಿದಿದ್ದಾರೆ.
ಕಾಸಿಗಾಗಿ ಹುದ್ದೆ ಉರುಫ್ #CashForPosting ದಂಧೆ ಕರ್ನಾಟಕದಲ್ಲಿ ಅವ್ಯಾಹತವಾಗಿ ನಡೆಯುತ್ತಿದೆ. ಎಗ್ಗಿಲ್ಲದೆ, ಲಜ್ಜೆಗೆಟ್ಟು ಸರ್ಕಾರ ಕೆಲಸ ಮಾಡುತ್ತಿದೆ. ಇದಕ್ಕೆ ಸಾಕ್ಷಿಯೇ ಯತೀಂದ್ರ ಅವರ ವಿಡಿಯೋ ಎಂದು ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್ ಸರ್ಕಾರದ ಬ್ಯುಸಿನೆಸ್ ಹಾದಿಬೀದಿಗೆ ಬಂದಿದೆ. ಅಪ್ಪ, ಮಗ ಇಬ್ಬರೂ ಸೇರಿ ಸಿಎಂ ಸಚಿವಾಲಯವನ್ನು ಸುಲಿಗೆ ಅಡ್ಡಾ ಮಾಡಿಕೊಂಡಿದ್ದಾರೆ. ಇದಕ್ಕೆ ಈ ವಿಡಿಯೋಗಿಂತ ಪುರಾವೆ ಬೇಕಿಲ್ಲ ಎಂದು ಕುಮಾರಸ್ವಾಮಿ ಹೇಳಿದ್ದಾರೆ.
ರಾಜ್ಯದ ಮುಖ್ಯಮಂತ್ರಿಗೇ ಧಮ್ಕಿ ಹಾಕಿ, “ನಾನು ಹೇಳಿದವರಷ್ಟನ್ನೇ ಮಾಡಿ” ಎನ್ನುವ ಈ ವ್ಯಕ್ತಿ ಮುಖ್ಯಮಂತ್ರಿ ಮಗನೋ ಅಥವಾ ಕರ್ನಾಟಕದ ಸೂಪರ್ ಸಿಎಮ್ಮೋ? ಅಥವಾ ಮಿನಿಸ್ಟರ್ ಫಾರ್ ಕ್ಯಾಶ್ ಫಾರ್ ಪೋಸ್ಟಿಂಗಾ? ಎಂದೂ ಕುಮಾರಸ್ವಾಮಿ ಪ್ರಶ್ನೆ ಮಾಡಿದ್ದಾರೆ. ಇಲ್ಲವೇ ಒಳಾಡಳಿತ ಸಚಿವಾಲಯ ಮಾದರಿಯ ‘ಒಳ ವಸೂಲಿ ಸಚಿವಾಲಯ’ದ ಸಚಿವರಾ? ಸ್ವತಃ ಮುಖ್ಯಮಂತ್ರಿಯೇ ಫೋನ್ ಕೊಡುವಷ್ಟು ಪ್ರಭಾವಿಯಾದ ಆ ಭಾರೀ ಆಸಾಮಿ ಯಾರು? ಇಷ್ಟಕ್ಕೂ ಆ ಮಹದೇವ ಎನ್ನುವ ವ್ಯಕ್ತಿ ಯಾರು? ಎಂದೂ ಕುಮಾರಸ್ವಾಮಿ ಪ್ರಶ್ನೆ ಮಾಡಿದ್ದಾರೆ.