Exclusive; ಹಿರಿಯ ಲಿಂಗಾಯತ ನಾಯಕನಿಗೆ BSY ಗಾಳ; ಬಿಜೆಪಿ ಸೇರ್ತಾರಾ ಶಾಮನೂರು..?
ಬೆಂಗಳೂರು; ಮಗ ಬಿ.ವೈ.ವಿಜಯೇಂದ್ರ ಬಿಜೆಪಿ ರಾಜ್ಯಾಧ್ಯಕ್ಷರಾದ ಮೇಲೆ ಮಾಜಿ ಸಿಎಂ ಯಡಿಯೂರಪ್ಪ ಅವರು ಫುಲ್ ಆಕ್ಟೀವ್ ಆಗಿದ್ದಾರೆ.. ಪಕ್ಷ ಸಂಘಟನೆ ಜೊತೆಗೆ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಅತಿಹೆಚ್ಚು ಸ್ಥಾನ ಗೆಲ್ಲಿಸೋದಕ್ಕೆ ಯಡಿಯೂರಪ್ಪ ತಮ್ಮ ಎಂದಿನ ತಂತ್ರಗಾರಿಕೆ ಶುರು ಮಾಡಿದ್ದಾರೆ. ಇದರ ಫಲವಾಗಿ ಈಗಾಗಲೇ ಮಾಜಿ ಸಿಎಂ ಜಗದೀಶ್ ಶೆಟ್ಟರ್ ಬಿಜೆಪಿ ಗೂಡಿಗೆ ಮರಳಿದ್ದಾರೆ. ಲಕ್ಷ್ಮಣ ಸವದಿಯವರನ್ನು ಬಿಜೆಪಿಗೆ ವಾಪಸ್ ಕರೆತರೋ ಪ್ರಯತ್ನ ಕೂಡಾ ನಡೆಯುತ್ತಿದೆ.. ಈ ನಡುವೆ ಕಾಂಗ್ರೆಸ್‌ನ ಅತ್ಯಂತ ಹಿರಿಯ ಶಾಸಕ, ಲಿಂಗಾಯತ ಸಮುದಾಯದ ಪ್ರಮುಖ ನಾಯಕ ಶಾಮನೂರು ಶಿವಶಂಕರಪ್ಪ ಅವರನ್ನು ಬಿಜೆಪಿಗೆ ಕರೆತರೋದಕ್ಕೂ ಯಡಿಯೂರಪ್ಪ ತೆರೆಮರೆಯಲ್ಲಿ ಸಾಕಷ್ಟು ಪ್ರಯತ್ನ ಮಾಡುತ್ತಿದ್ದಾರೆ ಅನ್ನೋ ಸುದ್ದಿಗಳು ಹರಿದಾಡುತ್ತಿವೆ.
ಶಾಮನೂರು ಶಿವಶಂಕರಪ್ಪ ಅವರು ಮಧ್ಯ ಕರ್ನಾಟಕ ಭಾಗದ ಬಹುದೊಡ್ಡ ಲಿಂಗಾಯತ ನಾಯಕ… ಇವರು ಸಾದರ ಲಿಂಗಾಯತ ಸಮುದಾಯದವರಾಗಿದ್ದು, ದಾವಣಗೆರೆಯಲ್ಲಿ ಸಾದರ ಲಿಂಗಾಯತ ಸಮುದಾಯದ ನಾಲ್ಕೂವರೆ ಲಕ್ಷಕ್ಕೂ ಅಧಿಕ ಮತಗಳಿವೆ. ಜೊತೆಗೆ ಶಾಮನೂರು ಶಿವಶಂಕರಪ್ಪ ಅವರು ಉದ್ಯಮಿಯೂ ಆಗಿರುವುದರಿಂದ ಇತರ ಸಮುದಾಯದ ಜೊತೆಗೂ ಉತ್ತಮ ಸಂಬಂಧ ಇಟ್ಟುಕೊಂಡಿದ್ದಾರೆ.. ಅಷ್ಟೇ ಏಕೆ ಕಾಂಗ್ರೆಸ್ ಪಕ್ಷದಲ್ಲಿದ್ದರೂ ಯಡಿಯೂರಪ್ಪ ಅವರ ಜೊತೆ ಉತ್ತಮ ಬಾಂಧವ್ಯ ಹೊಂದಿದ್ದಾರೆ… ಹೀಗಾಗಿ, ಲೋಕಸಭಾ ಚುನಾವಣೆಯಲ್ಲಿ ಲಿಂಗಾಯತ ಮತಗಳ ಕ್ರೋಡೀಕರಣ ಮಾಡಿ, ರಾಜ್ಯದಲ್ಲಿ 28ಕ್ಕೆ 28 ಲೋಕಸಭಾ ಕ್ಷೇತ್ರಗಳನ್ನೂ ಗೆಲ್ಲಬೇಕೆಂದು ಯಡಿಯೂರಪ್ಪ ಪಣ ತೊಟ್ಟಿದ್ದಾರೆ… ಅದಕ್ಕಾಗಿ ಅವರು ಶಾಮನೂರು ಶಿವಶಂಕರಪ್ಪ ಅವರಿಗೆ ಗಾಳ ಹಾಕಿದ್ದಾರೆ ಎನ್ನಲಾಗ್ತಿದೆ..
ಇತ್ತೀಚೆಗೆ ಶಿವಮೊಗ್ಗ ಜಿಲ್ಲೆಯ ಬೆಕ್ಕಿನ ಕಲ್ಮಠದಲ್ಲಿ ನಡೆದ ಕಾರ್ಯಕ್ರಮದಲ್ಲಿ ಶಾಮನೂರು ಶಿವಶಂಕರಪ್ಪ ಅವರು ಪಾಲ್ಗೊಂಡಿದ್ದರು.. ಈ ಕಾರ್ಯಕ್ರಮದಲ್ಲಿ ಶಿವಮೊಗ್ಗ ಬಿಜೆಪಿ ಸಂಸದ ಹಾಗೂ ಯಡಿಯೂರಪ್ಪ ಅವರ ಹಿರಿಯ ಪುತ್ರ ಬಿ.ವೈ.ರಾಘವೇಂದ್ರ ಕೂಡಾ ಇದ್ದರು.. ಈ ವೇಳೆ ಶಾಮನೂರು ಶಿವಶಂಕರಪ್ಪ ಅವರು ತಾವು ಕಾಂಗ್ರೆಸ್ ಶಾಸಕ ಅನ್ನೋದನ್ನೂ ಮರೆತು ನೇರವಾಗಿ ಬಿ.ವೈ.ರಾಘವೇಂದ್ರ ಪರವಾಗಿ ಬ್ಯಾಟ್ ಬೀಸಿದ್ದರು. ಬಿ.ವೈ.ರಾಘವೇಂದ್ರ ಅವರು ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಉತ್ತಮ ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ.. ಈ ಬಾರಿಯೂ ಬಿಜೆಪಿಯಿಂದ ಅವರಿಗೇ ಟಿಕೆಟ್ ಸಿಗುತ್ತದೆ… ಈ ಬಾರಿಯೂ ಶಿವಮೊಗ್ಗದ ಜನ ಅವರಿಗೇ ಮತ ಹಾಕಿ ಬಹುಮತದಿಂದ ಗೆಲ್ಲಿಸಬೇಕು ಎಂದು ಕರೆ ನೀಡಿದ್ದರು.. ಇದು ಕಾಂಗ್ರೆಸ್ ನಾಯಕರಿಗೆ ಇರಿಸುಮುರಿಸು ಉಂಟಾಗಿತ್ತು… ಹೀಗಿರುವಾಗಲೇ ದಾವಣಗೆರೆಯಲ್ಲಿ ಶಾಮನೂರು ಶಿವಶಂಕರಪ್ಪ ಅವರು ಬಿಜೆಪಿ ಸೇರುತ್ತಾರೆ ಎಂಬ ಮಾತುಗಳು ಕೇಳಿಬರುತ್ತಿವೆ… ದಾವಣಗೆರೆಯ ಮೂಲೆಮೂಲೆಯಲ್ಲೂ ಇದೇ ವಿಚಾರದ ಬಗ್ಗೆ ಚರ್ಚೆಗಳು ನಡೆಯುತ್ತಿವೆ.
ಶಾಮನೂರು ಶಿವಶಂಕರಪ್ಪ ಅವರು ಅಖಿಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷರು… ದಾವಣಗೆರೆ ಸೇರಿ ಮಧ್ಯ ಕರ್ನಾಟಕ ಭಾಗದಲ್ಲಿ ಸಾಕಷ್ಟು ಪ್ರಭಾವ ಹೊಂದಿರುವ ನಾಯಕ… ಸುಮಾರು ಐದು ದಶಕಗಳಿಗೂ ಹೆಚ್ಚು ಕಾಲದ ರಾಜಕೀಯ ಅನುಭವ ಅವರಿಗಿದೆ.. ಅವರ ಮಗ ಎಸ್‌ಎಸ್ ಮಲ್ಲಿಕಾರ್ಜುನ್ ಕೂಡಾ ರಾಜಕೀಯದಲ್ಲಿದ್ದಾರೆ.. ಹಾಲಿ ಸಚಿವರಿದ್ದಾರೆ… ಹೀಗಾಗಿ ಈ ಕುಟುಂಬವನ್ನು ಬಿಜೆಪಿಗೆ ಸೆಳೆದರೆ ಲಿಂಗಾಯತ ಮತಗಳ ಕ್ರೋಢೀಕರಣ ಆಗುತ್ತದೆ ಎಂಬ ಲೆಕ್ಕಾಚಾರ ಬಿಜೆಪಿಯದ್ದು… ಶಾಮನೂರು ಅವರು ಯಡಿಯೂರಪ್ಪ ಅವರಿಗೆ ತುಂಬಾನೇ ಕ್ಲೋಸ್ ಇದ್ದಾರೆ.. ಹೀಗಾಗಿ ನೇರವಾಗಿ ಯಡಿಯೂರಪ್ಪ ಅವರೇ ಶಾಮನೂರು ಶಿವಶಂಕರಪ್ಪ ಅವರಿಗೆ ಬಿಜೆಪಿ ಸೇರುವಂತೆ ಆಹ್ವಾನ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ…
ಅಂದಹಾಗೆ, 2013-2018ರ ಅವಧಿಯಲ್ಲಿ ಸಿದ್ದರಾಮಯ್ಯ ಸರ್ಕಾರ ಪ್ರತ್ಯೇಕ ಲಿಂಗಾಯತ ಧರ್ಮದ ಕೂಗೆಬ್ಬಿಸಿತ್ತು.. ಇದರಿಂದಾಗಿ ಶಾಮನೂರು ಶಿವಶಂಕರಪ್ಪ ರೊಚ್ಚಿಗೆದ್ದಿದ್ದರು… ಸ್ವಪಕ್ಷದ ವಿರುದ್ಧವೇ ಆಕ್ರೋಶ ವ್ಯಕ್ತಪಡಿಸಿದ್ದಾರೆ.. ಇನ್ನು ಇದೀಗ ಇದೇ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ, ಜಾತಿವಾರು ಜನಗಣತಿ ವರದಿಯನ್ನು ಬಿಡುಗಡೆ ಮಾಡಲೂ ಹೊರಟಿದೆ.. ಇದಕ್ಕೂ ಶಾಮನೂರು ಶಿವಶಂಕರಪ್ಪ ವಿರೋಧ ವ್ಯಕ್ತಪಡಿಸುತ್ತಿದ್ದಾರೆ… ಇದನ್ನೇ ಬಂಡವಾಳ ಮಾಡಿಕೊಂಡಿರುವ ಬಿಜೆಪಿ ನಾಯಕರು, ಶಾಮನೂರು ಅವರ ಮನವೊಲಿಸಿ ಬಿಜೆಪಿಗೆ ಕರೆತರುವ ಪ್ರಯತ್ನ ಮಾಡುತ್ತಿದ್ದಾರೆ.
ಜೆಡಿಎಸ್ ಜೊತೆ ಹೊಂದಾಣಿಕೆ ಮಾಡಿಕೊಂಡಿರುವುದರಿಂದ ಹಳೇ ಮೈಸೂರು ಭಾಗದಲ್ಲಿ ಒಕ್ಕಲಿಗ ಮತಗಳು ಬಿಜೆಪಿಗೂ ಬರಲಿವೆ… ಇನ್ನು ಲಿಂಗಾಯತ ಸಮುದಾಯದ ಪ್ರಮುಖರನ್ನೆಲ್ಲಾ ಬಿಜೆಪಿಗೆ ಸೆಳೆದರೆ ರಾಜ್ಯದಲ್ಲಿರುವ ಎರಡು ಪ್ರಮುಖ ಸಮುದಾಯದ ಮತಗಳನ್ನು ಬಿಜೆಪಿಗೆ ಸೆಳೆದಂತಾಗುತ್ತದೆ. ಇದೇ ಲೆಕ್ಕಾಚಾರದಲ್ಲಿ ಯಡಿಯೂರಪ್ಪ ಹಾಗೂ ವಿಜಯೇಂದ್ರ ಆಪರೇಷನ್ ಶುರು ಮಾಡಿದ್ದಾರೆ.. ಅವರ ಪ್ರಯತ್ನ ವರ್ಕೌಟ್ ಆದರೆ ಕಾಂಗ್ರೆಸ್‌ಗೆ ದೊಡ್ಡ ಹೊಡೆತ ಬೀಳೋದಂತೂ ಗ್ಯಾರೆಂಟಿ.