Bengaluru

Exclusive; 4 ವರ್ಷವಾದರೂ ಉದ್ಘಾಟನೆ ಇಲ್ಲ; ಅನಾಥವಾಗಿರುವ ಜಗಜ್ಯೋತಿ ಬಸವೇಶ್ವರ ಪ್ರತಿಮೆ!

ಬೆಂಗಳೂರು; ಸಂಸತ್ತಿನ ಪರಿಕಲ್ಪನೆಯನ್ನು ಇಡೀ ಜಗತ್ತಿಗೆ ಪರಿಚಯಿಸಿದವರು ಬಸವಣ್ಣನವರು. ಹೀಗಾಗಿ ಅವರನ್ನು ಜಗಜ್ಯೋತಿ ಬಸವಣ್ಣ ಅಂತ ಕರೆಯುತ್ತಾರೆ. ಸಮಾನತೆಗಾಗಿ ಹೋರಾಡಿದ ಜಗಜ್ಯೋತಿ ಬಸವಣ್ಣನ ಬಗ್ಗೆ ಹಾಲಿ ಸಿಎಂ ಸಿದ್ದರಾಮಯ್ಯ ಯಾವಾಗಲೂ ಕೊಂಡಾಡುತ್ತಾರೆ. ಬಸವಣ್ಣನ ವಿಚಾರಧಾರೆಗಳನ್ನು ನಾವು ಅನುಸರಿಸಬೇಕು ಎಂದು ಹೇಳುತ್ತಾರೆ. ಆದ್ರೆ ಅಂತ ಸಿದ್ದರಾಮಯ್ಯ ಅವರಿಗೂ ನಾಲ್ಕು ವರ್ಷದಿಂದ ಅನಾಥವಾಗಿರುವ ಬಸವಣ್ಣನವರ ಪ್ರತಿಮೆಯನ್ನು ಉದ್ಘಾಟನೆ ಮಾಡಬೇಕೆಂಬ ಆಸಕ್ತಿ ಬಂದಿಲ್ಲ.

ಬೆಂಗಳೂರಿನ ರಾಜಾಜಿನಗರದ ವೆಸ್ಟ್‌ ಆಫ್‌ ಕಾರ್ಡ್‌ ರಸ್ತೆಯ ನವರಂಗ್‌ ಬ್ರಿಡ್ಜ್‌ ಬಳಿ 2019ರಲ್ಲಿಯೇ ಬಸವಣ್ಣನವರ ಪ್ರತಿಮೆಯನ್ನು ಸ್ಥಾಪನೆ ಮಾಡಲಾಗಿದೆ. ಬಹುತೇಕ ಕಾಮಗಾರಿ ಮುಗಿದುಹೋಗಿದೆ. ಪ್ರತಿಮೆಗೆ ಟಾರ್ಪಲ್‌ ಮುಚ್ಚಿದ್ದು, ನಾಲ್ಕು ವರ್ಷವಾದರೂ ಅದನ್ನು ಹಾಗೆಯೇ ಬಿಡಲಾಗಿದೆ. ಸ್ಥಳೀಯ ಶಾಸಕರು ಬಸವಣ್ಣನವರ ಪ್ರತಿಮೆಯ ಉದ್ಘಾಟನೆಗೆ ಮನಸ್ಸು ಮಾಡುತ್ತಿಲ್ಲ ಅಂತ ವೀರಶೈವ ಲಿಂಗಾಯತ ಮಹಾಸಭಾ ಆರೋಪ ಮಾಡುತ್ತಿದೆ. ಆದಷ್ಟು ಬೇಗ ಪ್ರತಿಮೆಯ ಉದ್ಘಾಟನೆ ಮಾಡಬೇಕು ಎಂದು ವೀರಶೈವ ಲಿಂಗಾಯತ ಮಹಾಸಭಾದ ಮುಖಂಡರು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರಿಗೆ ಪತ್ರ ಬರೆದಿದ್ದಾರೆ.

2018-19ರಲ್ಲಿ ಗಂಗಾಂಬಿಕೆ ಮಲ್ಲಿಕಾರ್ಜುನ್‌ ಅವರು ಬಿಬಿಎಂಪಿ ಮೇಯರ್‌ ಆಗಿದ್ದರು. ಈ ವೇಳೆ ಮೇಯರ್‌ ಫಂಡ್‌ನಲ್ಲಿ ಬಸವಣ್ಣನವರ ಪ್ರತಿಮೆ ಸ್ಥಾಒನೆ ಮಾಡಲು 1 ಕೋಟಿ ರೂಪಾಯಿ ಬಿಡುಗಡೆ ಮಾಡಿದ್ದರು. 13 ಅಡಿ ಎತ್ತರದ 2 ಟನ್‌ ತೂಕದ ಕಂಚಿನ ಪ್ರತಿಮೆ ಇದಾಗಿದೆ. ಮೇಲ್ಸೇತುವೆ ಮೇಲೆ ಪಿಲ್ಲರ್‌ಗಳನ್ನು ನಿರ್ಮಿಸಿ, ಅದರ ಮೇಲೆ ಪ್ರತಿಮೆ ಸ್ಥಾಪಿಸುವ ಎಲ್ಲಾ ಕೆಲಸ ಮುಗಿದಿದೆ. ಪ್ರತಿಮೆ ಸುತ್ತ ಸರಳು ಅಳವಡಿಕೆ, ಮೆಟ್ಟಿಲು ಕಟ್ಟುವುದು ಬಿಟ್ಟು ಬೇರೆಲ್ಲಾ ಕೆಲಸ ಮುಗಿದಿದೆ. ಉಳಿದಿರುವ ಕೆಲಸ ಒಂದು ವಾರದಲ್ಲಿ ಮುಗಿಸಬಹುದು. ಹೀಗಿದ್ದರೂ ಜನಪ್ರತಿನಿಧಿಗಳ ನಿರ್ಲಕ್ಷ್ಯದಿಂದ ಬಸವಣ್ಣನ ಪ್ರತಿಮೆ ಟಾರ್ಪಲ್‌ ಹೊದ್ದುಕೊಂಡು ನಿಂತಿದೆ. ಪ್ರತಿಮೆಯನ್ನು ತಾತ್ಕಾಲಿಕವಾಗಿ ನಿಲ್ಲಿಸಿದ್ದು, ಜೋರು ಗಾಳಿ ಬಂದರೆ ಅದು ಬೀಳುವ ಅಪಾಯವಿದೆ ಎಂದೂ ವೀರಶೈವ ಲಿಂಗಾಯತ ಮಹಾಸಭಾದ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Share Post