BengaluruPolitics

ರಾಜ್ಯಸಭಾ ಚುನಾವಣಾ ಪ್ರಕ್ರಿಯೆ ಹೇಗಿರುತ್ತೆ..?; ಕ್ರಾಸ್‌ ವೋಟಿಂಗ್‌ ಅಂದ್ರೆ ಏನು..?

ಬೆಂಗಳೂರು; ರಾಜ್ಯದಿಂದ ಆಯ್ಕೆಯಾಗುವ ನಾಲ್ಕು ರಾಜ್ಯಸಭಾ ಸ್ಥಾನಗಳಿಗೆ ಜೂನ್‌ ೧೦ ರಂದು ಚುನಾವಣೆ ನಡೆಯಲಿದೆ. ಈ ಚುನಾವಣೆ ಸಾರ್ವತ್ರಿಕ ಚುನಾವಣೆ ರೀತಿ ಇರುವುದಿಲ್ಲ. ಇದರ ಮತದಾನ ಕೂಡಾ ವಿಭಿನ್ನವಾಗಿರುತ್ತದೆ. ಹೀಗಾಗಿಯೇ  ಸದಸ್ಯಬಲದ ಆಧಾರದ ಮೇಲೆ ಹೇಳುವುದಾದರೆ ಬಿಜೆಪಿ ಎರಡು ಸ್ಥಾನ ಗೆಲ್ಲುವುದಕ್ಕೆ ಸುಲಭವಾಗಿ ಸಾಧ್ಯವಿದೆ. ಕಾಂಗ್ರೆಸ್‌ಗೆ ಒಂದು ಸ್ಥಾನ ಗೆಲ್ಲುವುದಕ್ಕೆ ಸಾಧ್ಯವಿದೆ. ಆದ್ರೆ ಜೆಡಿಎಸ್‌ಗೆ ಬೇರೆ ಪಕ್ಷದ ಕನಿಷ್ಠ 13 ಶಾಸಕರು ಬೆಂಬಲಿಸಿದರೆ ಮಾತ್ರ ಅವರ ಪಾರ್ಟಿಯ ಒಬ್ಬರು ರಾಜ್ಯಸಭೆಗೆ ಆಯ್ಕೆಯಾಗುತ್ತಾರೆ. ಹೀಗಾಗಿಯೇ ಜೆಡಿಎಸ್‌ ಪಕ್ಷ ಕಾಂಗ್ರೆಸ್‌ನ ಬೆಂಬಲ ಕೋರಿತ್ತು. ಕಾಂಗ್ರೆಸ್‌ ಇಬ್ಬರು ಅಭ್ಯರ್ಥಿಗಳನ್ನು ಹಾಕಿರುವುದರಿಂದ ಜೆಡಿಎಸ್‌ಗೆ ಕಗ್ಗಂಟಾಗಿದೆ. ಇಬ್ಬರ ಜಗಳದಲ್ಲಿ ಲಾಭ ಪಡೆಯಲು ಬಿಜೆಪಿ ಲೆಕ್ಕಾಚಾರ ಹಾಕಿದ್ದು, ಬಿಜೆಪಿ ಹೆಚ್ಚುವರಿ ಅಭ್ಯರ್ಥಿಯನ್ನು ಕಣಕ್ಕಿಳಿಸಿದೆ. 

 

ಈ ಎಲ್ಲಾ ಕಾರಣದಿಂದ ಈ ಕ್ರಾಸ್‌ ವೋಟಿಂಗ್‌ ಬಗ್ಗೆ ಚರ್ಚೆಯಾಗುತ್ತಿದೆ. ಹಾಗಾದ್ರೆ ರಾಜ್ಯಸಭಾ ಚುನಾವಣೆ ಹೇಗೆ ನಡೆಯುತ್ತದೆ. ರಾಜ್ಯಸಭೆಗೆ ಆಯ್ಕೆಯಾಗಬೇಕಾದರೆ ಏನೆಲ್ಲಾ ಅರ್ಹತೆ ಇರಬೇಕು..? ಎಷ್ಟು ಮತ ಬೇಕಾಗಬಹುದು..? ನೋಡೋಣ ಬನ್ನಿ..

 

೧. ರಾಜ್ಯಸಭೆಯ ಒಟ್ಟು ಬಲ 245. ಇದರಲ್ಲಿ 233 ಮಂದಿ ರಾಜ್ಯಗಳ ವಿಧಾಸಭಾ ಸದಸ್ಯರಿಂದ ಆಯ್ಕೆಯಾಗುತ್ತಾರೆ. ಉಳಿದ 12 ಮಂದಿಯನ್ನು ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದವರನ್ನು ನೇರವಾಗಿ ನಾಮನಿರ್ದೇಶ ಮಾಡಲಾಗುತ್ತದೆ

 

೨. ಜನರಿಂದ ನೇರವಾಗಿ ಆಯ್ಕೆಯಾಗಿರುವ ಚುನಾಯಿತ ಶಾಸಕರಿಗೆ ಮಾತ್ರ ರಾಜ್ಯಸಭಾ ಸದಸ್ಯರನ್ನು ಆಯ್ಕೆ ಮಾಡುವ ಅಧಿಕಾರ ವಿರುತ್ತದೆ

 

೩. ಆಯಾ ರಾಜ್ಯಗಳ ಮತದಾರರ ಸಂಖ್ಯೆಯ ಆಧಾರದ ಮೇಲೆ ಆ ರಾಜ್ಯದಿಂದ ಆಯ್ಕೆ ರಾಜ್ಯಸಭಾ ಸ್ಥಾನಗಳು ಎಷ್ಟು ಎಂದು ನಿರ್ಧಾರವಾಗುತ್ತದೆ

 

೪. ಕರ್ನಾಟಕದಿಂದ ಒಟ್ಟು 12 ಮಂದಿ ರಾಜ್ಯಸಭೆಯನ್ನು ಪ್ರತಿನಿಧಿಸುತ್ತಾರೆ. ಆಯ್ಕೆಯಾದವರ ಅಧಿಕಾರವಧಿ 6 ವರ್ಷಗಳಾಗಿರುತ್ತದೆ

 

೫. ರಾಜ್ಯಸಭೆಯ ಒಟ್ಟು ಸದಸ್ಯಬಲ ಮೂರನೇ ಒ೦ದರಷ್ಟು ಸದಸ್ಯರ ಅಧಿಕಾರ ಪ್ರತಿ ಎರಡು ವರ್ಷಕ್ಕೊಮ್ಮೆ ಮುಗಿಯುವಂತೆ ನೋಡಿಕೊಳ್ಳಲಾಗಿದೆ. ಹೀಗಾಗಿ ರಾಜ್ಯಸಭೆಯ ಎಲ್ಲಾ ಸ್ಥಾನಗಳಿಗೆ ಒಟ್ಟಿಗೆ ಚುನಾವಣೆ ನಡೆಯುವುದಿಲ್ಲ. ಬದಲಾಗಿ ಪ್ರತಿ ಎರಡು ವರ್ಷಕ್ಕೊಮ್ಮೆ ಮೂರನೇ ಎರಡರಷ್ಟು ಸದಸ್ಯರಿಗೆ ಚುನಾವಣೆ ನಡೆಯುತ್ತದೆ.

 

೬. ರಾಜ್ಯದಿಂದ 12 ಸದಸ್ಯರು ರಾಜ್ಯಸಭೆಗೆ ಹೋಗುವುದರಿಂದ ಇಲ್ಲಿ ಪ್ರತಿ ಎರಡು ವರ್ಷಕ್ಕೊಮ್ಮೆ ಇದರಲ್ಲಿ ಮೂರನೇ ಒಂದರಷ್ಟು ಅಂದರೆ 4 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ.

 

೭. ಇಲ್ಲಿ ಶಾಸಕರು ಬೇರೆ ಚುನಾವಣೆಗಳಂತೆ ಒಂದೇ ಮತ ಅಷ್ಟೇ ಹಾಬೇಕಿಲ್ಲ. ಎಷ್ಟು ಮತ ಬೇಕಾದರೂ ಹಾಕಬಹುದು. ಆದ್ರೆ ಪ್ರಾಶಸ್ತ್ಯ ನೀಡಬೇಕು. ಅಂದರೆ ಕಣದಲ್ಲಿರುವ ಎಲ್ಲರಿಗೂ ಮತ ಹಾಕಿದರೂ, ಮೊದಲ ಪ್ರಾಶಸ್ತ್ಯ, ಎರಡನೇ ಪ್ರಾಶಸ್ತ್ಯ, ಮೂರನೇ ಪ್ರಾಶಸ್ತ್ಯ ಹೀಗೆ ಗುರುತು ಹಾಕಬೇಕಾಗುತ್ತದೆ.

 

೮. ಒಂದು ಪ್ರಥಮ ಪ್ರಾಶಸ್ತ್ಯ ಮತ ನೂರು ಮತಗಳಿಗೆ ಸಮವಾಗಿರುತ್ತದೆ.

 

೯. ಕರ್ನಾಟಕದಲ್ಲಿ ಒಟ್ಟು 224 ಶಾಸಕರಿದ್ದಾರೆ. ಈಗ 4 ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದೆ. ಹೀಗಾಗಿ ಒಂದು ವೋಟಿಗೆ ನೂರರಂತೆ ಪ್ರಥಮ ಪ್ರಾಶಸ್ತ್ಯಗಳ ಲೆಕ್ಕಹಾಕಿದರೆ ಒಟ್ಟು 4480 ಮತಗಳಾಗುತ್ತವೆ. ಇದಕ್ಕೆ ಒಂದು ಸೇರಿಬೇಕು. ಆಗ ಒಟ್ಟು ಮತಗಳ ಮೌಲ್ಯ 4481 ಮತಗಳಾಗುತ್ತವೆ

 

೧೦. ಒಟ್ಟು 4481 ಮತಗಳನ್ನು ಮತದಾನ ನಡೆಯುತ್ತಿರುವ 4 ಸ್ಥಾನಗಳಿಗೆ ಒಂದು ಸೇರಿಸಿ 5 ರಿಂದ ಭಾಗಿಸಿದರೆ 44.81 ಆಗುತ್ತದೆ. ಅಂದರೆ ರಾಜ್ಯಸಭೆಗೆ ಆಯ್ಕೆಯಾಗಬೇಕಾದರೆ ಒಬ್ಬರಿಗೆ 45 ಪ್ರಥಮ ಪ್ರಾಶಸ್ತ್ಯದ ಮತಗಳು ಬೇಕು.

 

೧೧. ರಾಜ್ಯ ವಿಧಾನಸಭೆಯ ಪಕ್ಷಗಳ ಬಲಾಬಲ ನೋಡುವುದಾದರೆ ಕಾಂಗ್ರೆಸ್‌ 69+1 ಸ್ಥಾಗಳನ್ನು ಹೊಂದಿದ್ದಾರೆ, ಬಿಜೆಪಿ 120+2 ಸ್ಥಾಗಳನ್ನು ಹೊಂದಿದೆ. ಜೆಡಿಎಸ್‌ 32 ಸ್ಥಾನಗಳನ್ನು ಹೊಂದಿದೆ.

೧೨. ಒಬ್ಬರಿಗೆ 45 ಶಾಸಕರ ಬಲ ಬೇಕಿರುವುದರಿಂದ ಬಿಜೆಪಿಗೆ ಎರಡು ಸ್ಥಾನ ಗೆಲ್ಲುವುದಕ್ಕೆ ಯಾವುದೇ ತೊಂದರೆ ಇಲ್ಲ. ಆದ್ರೆ ಬಿಜೆಪಿ ಮೂವರನ್ನು ಕಣಕ್ಕಿಳಿಸಿದೆ. ಕಾಂಗ್ರೆಸ್‌ ಒಂದು ಸ್ಥಾನ ಗೆಲ್ಲಬಹುದು. ಆದ್ರೆ ಕಾಂಗ್ರೆಸ್‌ ಇಬ್ಬರನ್ನು ಕಣಕ್ಕಿಳಿಸಿದೆ. ಜೆಡಿಎಸ್‌ ಅಭ್ಯರ್ಥಿ ಗೆಲ್ಲಬೇಕಾದರೆ ಇನ್ನೂ 13 ಶಾಸಕರ ಬೆಂಬಲ ಬೇಕು. ಕಾಂಗ್ರೆಸ್‌ನ 70 ಸದಸ್ಯರ ಪೈಕಿ 45 ಸದಸ್ಯರು ಕಾಂಗ್ರೆಸ್‌ ಪಕ್ಷದ ಒಬ್ಬ ಅಭ್ಯರ್ಥಿಗೆ ಪ್ರಥಮ ಪ್ರಾಶಸ್ತ್ಯದ ಮತ ಹಾಕಿದರೆ, ಇನ್ನೂ 25 ಶಾಸಕರು ಉಳಿಯುತ್ತಾರೆ. ಅವರು ಜೆಡಿಎಸ್‌ ಅಭ್ಯರ್ಥಿಗೆ ಮತ ಹಾಕಿದರೆ ಮಾತ್ರ ಗೆಲ್ಲಲು ಸಾಧ್ಯ. ಇಲ್ಲವೆ ಬಿಜೆಪಿಯ ಇಬ್ಬರು ಸದಸ್ಯರಿಗೆ ಹಾಕಿ ಉಳಿದ 22 ಬಿಜೆಪಿ ಶಾಸಕರು ಜೆಡಿಎಸ್‌ ಅಭ್ಯರ್ಥಿಗೆ ಮಾತ ಹಾಕಿದರೂ ಜೆಡಿಎಸ್‌ ಅಭ್ಯರ್ಥಿ ಗೆಲ್ಲುತ್ತಾರೆ. ಇನ್ನು ಜೆಡಿಎಸ್‌ ತಮ್ಮ ಅಭ್ಯರ್ಥಿ ಬೇಡ ಎಂದುಕೊಂಡು ಆ ಪಕ್ಷದ ಶಾಸಕರು, ಕಾಂಗ್ರೆಸ್‌ ಅಥವಾ ಬಿಜೆಪಿ ಯಾರಿಗೆ ಮತ ಹಾಕಿದರೂ ಆ ಪಕ್ಷದ ಅಭ್ಯರ್ಥಿ ಗೆಲ್ಲುತ್ತಾರೆ.

 

೧೩. ಈಗ ಕಾಂಗ್ರೆಸ್‌ನಿಂದ ಒಬ್ಬರು ಹಾಗೂ ಬಿಜೆಪಿಯಿಂದ ಇಬ್ಬರು ಸುಲಭವಾಗಿ ಗೆಲ್ಲುತ್ತಾರೆ. ನಾಲ್ಕನೇ ಸ್ಥಾನಕ್ಕೆ ನಡೆಯುವ ಪೈಪೋಟಿಯಲ್ಲಿ ಯಾರಿಗೂ ಒಂದು ವೇಳೆ 45 ಶಾಸಕರ ಪ್ರಥಮ ಪ್ರಾಶಸ್ತ್ಯದ ಮತ ಸಿಗದಿದ್ದ ಪಕ್ಷದಲ್ಲಿ ಎರಡನೇ ಪ್ರಾಶಸ್ತ್ಯ ಮತಗಳ ಲೆಕ್ಕ ಹಾಕಿ, ಅದರ ಆಧಾರದ ಮೇಲೆ ಜಯವನ್ನು ಘೋಷಿಸಲಾಗುತ್ತದೆ.

 

೧೪. ಬಿಜೆಪಿ ಪಕ್ಷದ ಅಭ್ಯರ್ಥಿಗಳಾದ ನಿರ್ಮಲಾ ಸೀತಾರಾಮನ್‌ ಹಾಗೂ ಜಗ್ಗೇಶ್‌ ಸುಲಭವಾಗಿ ಆಯ್ಕೆಯಾಗುತ್ತಾರೆ. ಆದ್ರೆ ಲೆಹರ್‌ ಸಿಂಗ್‌ಗೆ ಗೆಲ್ಲಬೇಕಾದರೆ ಬೇರೆ ಯಾವುದಾದರೂ ಪಕ್ಷದ ಮತಗಳು ಬೇಕು. ಇನ್ನು ಕಾಂಗ್ರೆಸ್‌ನಲ್ಲಿ ಜೈರಾಮ್‌ ರಮೇಶ್‌ ಸುಲಭವಾಗಿ ಗೆಲ್ಲುತ್ತಾರೆ. ಮನ್ಸೂರ್‌ ಅಲಿ ಖಾನ್‌ ಗೆಲ್ಲಬೇಕಾದರೆ ಬೇರೆ ಪಕ್ಷದಲ್ಲಿ ಉಳಿದ ಶಾಸಕರ ಮತ ಬೇಕಾಗುತ್ತದೆ. ಅದೇ ಜೆಡಿಎಸ್‌ ಅಭ್ಯರ್ಥಿ ಕುಪೇಂದ್ರ ರೆಡ್ಡಿ ಗೆಲ್ಲಬೇಕಾದರೆ ಜೆಡಿಎಸ್‌ನ 32 ಶಾಸಕರ ಬಲದೊಂದಿಗೆ ಬೇರೆ ಪಕ್ಷದ 13  ಶಾಸಕರ ಬೆಂಬಲ ಬೇಕಾಗುತ್ತದೆ.

 

೧೫. ರಾಜ್ಯಸಭಾ ಚುನಾವಣೆಯಲ್ಲಿ ಗುಪ್ತ ಮತದಾನ ನಡೆಯುವುದಿಲ್ಲ. ಮತದಾನದ ಆಯಾ ಪಕ್ಷ ನೇಮಿಸಿರುವ ಏಜೆಂಟ್‌ಗೆ ಮತ ಹಾಕುವ ಶಾಸಕ ಯಾರಿಗೆ ಮತ ಹಾಕಿದ್ದೇನೆ ಎಂಬುದನ್ನು ತೋರಿಸಬೇಕಾಗುತ್ತದೆ. ತೋರಿಸದೇ ಹೋದರೆ ಆ ಮತ ಅಸಿಂಧುವಾಗುತ್ತದೆ.

 

೧೬. ಈಗ ನಾಲ್ಕನೇ ಅಭ್ಯರ್ಥಿಗಾಗಿ ಜೆಡಿಎಸ್‌ ಫೈಟ್‌ ಮಾಡುತ್ತಿದೆ. ಕಾಂಗ್ರೆಸ್‌ ಅಭ್ಯರ್ಥಿ ಮನ್ಸೂರ್‌ ಅಲಿ ಖಾನ್‌ ಗೆಲ್ಲೋದಕ್ಕೆ ಬೇಕಾದ ಬಲ ಇಲ್ಲದಿದ್ದರೂ, ಜೆಡಿಎಸ್‌ ಶಾಸಕರ ಕ್ರಾಸ್‌ ವೋಟಿಂಗ್‌ ಆಗುವ ಬಗ್ಗೆ ಮಾತನಾಡಲಾಗುತ್ತದೆ. ಆದ್ರೆ, ಎಲ್ಲಾ ಶಾಸಕರಿಗೆ ಆಯಾ ಪಕ್ಷಗಳು ವಿಪ್‌ ಜಾರಿ ಮಾಡಿರುತ್ತವೆ. ಹೀಗಾಗಿ ಪಕ್ಷದ ಏಜೆಂಟ್‌ ತೋರಿಸಿಯೇ ಮತ ಚಲಾವಣೆ ಮಾಡಬೇಕು ಹಾಗೂ ಪಕ್ಷ ಸೂಚಿಸಿದವರಿಗೇ ಮತ ಹಾಕಬೇಕಾಗುತ್ತದೆ. ಈ ನಡುವೆ, ಯಾರಾದರೂ ಶಾಸಕರು ಮತದಾನಕ್ಕೆ ಗೈರಾದರೆ, ಅಡ್ಡ ಮತದಾನ ಮಾಡಿದರೆ ಬೇರೆ ಪಕ್ಷದ ಅಭ್ಯರ್ಥಿಗೆ ಲಾಭವಾಗಬಹುದು. ಆದ್ರೆ ಕ್ರಾಸ್‌ ವೋಟಿಂಗ್‌ ಮಾಡಿದರೆ ಪಕ್ಷದಿಂದ ಕ್ರಮ ಕೈಗೊಳ್ಳುವ ಸಾಧ್ಯತೆ ಇರುವುದರಿಂದ ಮತುಕತೆಯ ಮೂಲಕ ಹೊಂದಾಣಿಕೆ ಮಾಡಿಕೊಳ್ಳಲು ಜೆಡಿಎಸ್‌ ಹಾಗೂ ಕಾಂಗ್ರೆಸ್‌ ತಂತ್ರ ರೂಪಿಸುತ್ತಿವೆ.

 

Share Post