ಡ್ರಗ್ಸ್ ಮಾರಾಟಕ್ಕೆ ಖತರ್ನಾಕ್ ಪ್ಲ್ಯಾನ್; ವಿದೇಶಿ ಪೆಡ್ಲರ್ ಅರೆಸ್ಟ್
ಬೆಂಗಳೂರು: ಇಂಟರ್ನೆಟ್, ವಾಟ್ಸ್ ಆಪ್ ಕಾಲ್ ಮೂಲಕ ಗಿರಾಕಿಗಳನ್ನು ಹುಡುಕಿ ಹೈಟೆಕ್ ರೀತಿಯಲ್ಲಿ ಡ್ರಗ್ಸ್ ಮಾರಾಟ ಮಾಡುತ್ತಿದ್ದ ವಿದೇಶಿ ಡ್ರಗ್ ಪೆಡ್ಲರ್ ಒಬ್ಬನನ್ನು ಕೆಜಿ ಹಳ್ಳಿ ಪೊಲೀಸರು ಬಂಧಿಸಿದ್ದಾರೆ. ನೈಜೀರಿಯನ್ ಮೂಲದ ನೆಲ್ಸನ್ ಬಂಧಿತ ಆರೋಪಿ. ಈತ ಇಂಟರ್ನೆಟ್, ವಾಟ್ಸ್ಯಾಪ್ ಕಾಲ್ ಮೂಲಕ ಗಿರಾಕಿಗಳನ್ನು ಸಂಪರ್ಕಿಸುತ್ತಿದ್ದ ಎಂದು ತಿಳಿದುಬಂದಿದೆ.
ಆನ್ಲೈನ್ ಮೂಲಕ ಹಣ ಪಡೆಯುತ್ತಿದ್ದ ಆರೋಪಿ ಡ್ರಗ್ಸ್ ಅಡಗಿಸಿಟ್ಟ ಲೊಕೇಶನ್ ಕಳಿಸ್ತಿದ್ದ. ನಿರ್ಜನ ಪ್ರದೇಶದ ಪೊದೆ ಹಾಗೂ ಮರಗಿಡಗಳ ಬಳಿ ಡ್ರಗ್ಸ್ ತಂದಿಟ್ಟು ಲೊಕೇಶನ್ ಕಳಿಸುತ್ತಿದ್ದ. ಗಿರಾಕಿ ಅಲ್ಲಿ ಬಂದು ಹುಡುಕಿ ಡ್ರಗ್ಸ್ ಪಡೆದುಕೊಂಡು ಹೋಗುತ್ತಿದ್ದರು. ಇಂಜಿನಿಯರಿಂಗ್, ಮೆಡಿಕಲ್ ಸ್ಟೂಡೆಂಟ್ ಗಳೇ ಈತನ ಗ್ರಾಹಕರಾಗಿದ್ದರು ಎಂದು ತಿಳಿದುಬಂದಿದೆ. ಸದ್ಯ ಖಚಿತ ಮಾಹಿತಿ ಆಧರಿಸಿದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಬಂಧಿತರಿಂದ 25 ಲಕ್ಷ ಮೌಲ್ಯದ ಎಂಡಿಎಂಎ ಟ್ಯಾಬ್ಲೆಟ್ ಅನ್ನು ವಶಪಡಿಸಿಕೊಂಡಿದ್ದಾರೆ. ಇನ್ನೂ ಆರೋಪಿ ವಿರುದ್ಧ ಕೆಜಿಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.