Bengaluru

ಈಶ್ವರಪ್ಪ ವಿರುದ್ಧ ಪ್ರಕರಣ ದಾಖಲಿಸದ ಸರ್ಕಾರದ ವಿರುದ್ಧ ಡಿಕೆಶಿ ಕೆಂಡಾಮಂಡಲ-ಹೋರಾಟದ ಎಚ್ಚರಿಕೆ

ಬೆಂಗಳೂರು: ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಸಚಿವ ಈಶ್ವರಪ್ಪ ವಿರುದ್ಧ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಾವು ಭಾರತೀಯರು. ನಮ್ಮ ದೇಶ, ರಾಷ್ಟ್ರಧ್ವಜ ರಕ್ಷಣೆ ವಿಚಾರದಲ್ಲಿ ನಮಗೆ ನಮ್ಮದೇ ಆದ ಜವಾಬ್ದಾರಿ ಇದೆ. ಅದನ್ನು ಸಂವಿಧಾನ ಪರಿಚ್ಛೇದ (51) ಎ ಮೂಲಕ ಕೊಟ್ಟಿದೆ. ಸಂವಿಧಾನಕ್ಕೆ ಬದ್ಧರಾಗಿ, ರಾಷ್ಟ್ರಧ್ವಜ ಹಾಗೂ ರಾಷ್ಟ್ರಗೀತೆ ಗೌರವಿಸಬೇಕು ಎಂದು ಇದರಲ್ಲಿ ಸ್ಪಷ್ಟವಾಗಿ ತಿಳಿಸಿದೆ.

ಅಧಿಕಾರಕ್ಕೆ ಬಂದವರು ಕೆಂಪು ಕೋಟೆಯಲ್ಲಿ ರಾಷ್ಟ್ರಧ್ವಜ ಇಳಿಸಿ ಕೇಸರಿ ಧ್ವಜ ಹಾರಿಸುತ್ತೇವೆ ಎಂದು ಸಚಿವ ಈಶ್ವರಪ್ಪ ಹೇಳಿಕೆ ನೀಡಿದ್ದಾರೆ. ಹಾಗಾಗಿ ಅವರನ್ನು  ರಾಜ್ಯಪಾಲರು ಈಗಾಗಲೇ ವಜಾಗೊಳಿಸಬೇಕಿತ್ತು. ಮುಖ್ಯಮಂತ್ರಿಗಳು ಸಚಿವರಿಂದ ರಾಜೀನಾಮೆ ಪಡೆಯಬೇಕಿತ್ತು. ಮುಖ್ಯ ಕಾರ್ಯದರ್ಶಿ ಆಗಲಿ, ಪೊಲೀಸ್ ಮಹಾ ನಿರ್ದೇಶಕರಾಗಲಿ ಸ್ವಯಂ ಪ್ರೇರಿತವಾಗಿ ಅವರ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಿಕೊಳ್ಳಬೇಕಿತ್ತು. ಆದರೆ ಇದ್ಯಾವುದೂ ಆಗಿಲ್ಲ.

ನಮ್ಮ ಕಾರ್ಯಕರ್ತರು, ನಾಯಕರು ಬಿಜೆಪಿ ನಾಯಕರ ವಿರುದ್ಧ ಹೇಳಿಕೆ ನೀಡಿದ್ದಕ್ಕೆ ಅವರ ವಿರುದ್ಧ ಸುಮೋಟೋ ಪ್ರಕರಣ ದಾಖಲಿಸಿ ಜೈಲಿಗೆ ಹಾಕಿದ್ದು ನಡೆದಿದೆ.  ಇದೇ ವಿಧಾನಸಭೆಯಲ್ಲಿ ರೈತರ ಹೋರಾಟವನ್ನು ಕಾಂಗ್ರೆಸ್ ಕೃಪಾಪೋಷಿತ ನಾಟಕ ಎಂದು ಮುಖ್ಯಮಂತ್ರಿಗಳೇ ಹೇಳಿದ್ದು, ಮುಖ್ಯಮಂತ್ರಿಗಳು ನೈತಿಕ ಪೊಲೀಸ್ ಗಿರಿ ಸಮರ್ಥಿಸಿಕೊಂಡಿದ್ದರು. ಈ ಎಲ್ಲ ಪ್ರಕರಣಗಳ ಪರಿಣಾಮವಾಗಿ ಇಂದು ರಾಷ್ಟ್ರಧ್ವಜಕ್ಕೆ ಅಪಮಾನ ಮಾಡುವಂತಹ ವಾತಾವರಣ ಸೃಷ್ಟಿಯಾಗಿದೆ.

ರಾಷ್ಟ್ರಧ್ವಜ ಹಾರಾಡುವ ಕಂಬದಲ್ಲಿ ಕೇಸರಿ ಧ್ವಜ ಹಾರಿಸಿದರು. ನಂತರ ಮಕ್ಕಳಿಗೆ ಕೇಸರಿ ಶಾಲು ಹಂಚಿದ್ದು ನಾನೇ, ನಾನು ಶಾಲುಗಳನ್ನು ಅಯೋಧ್ಯೆಯಿಂದ ತರಿಸಿಕೊಟ್ಟೆ ಎಂದು ಸಚಿವರೇ ಒಪ್ಪಿಕೊಂಡಿದ್ದಾರೆ.ಇಷ್ಟಾದರೂ ಅವರ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಿಲ್ಲ ಎಂದರೆ ಏನರ್ಥ?

ಹೀಗಾಗಿ ಈಶ್ವರಪ್ಪ ಅವರ ರಾಜೀನಾಮೆ ಪಡೆದು, ಅವರ ವಿರುದ್ಧ ಪ್ರಕರಣ ದಾಖಲಿಸಿ ಕಾನೂನು ಕ್ರಮ ಜರುಗಿಸಬೇಕು ಎಂದು ಮುಖ್ಯಮಂತ್ರಿಗಳು ಹಾಗೂ ರಾಜ್ಯಪಾಲರಲ್ಲಿ ಮನವಿ ಮಾಡುತ್ತೇನೆ. ಸ್ಪೀಕರ್ ಅವರು ಪಕ್ಷಾತೀತವಾಗಿದ್ದಾರೆ ಎಂದು ಭಾವಿಸಿದ್ದೆವು. ಆದರೆ, ಅವರು ಆ ರೀತಿ ನಡೆದುಕೊಂಡಿಲ್ಲ. ಇದು ಆರ್‌ಎಸ್‌ಎಸ್, ಬಿಜೆಪಿ ಅಜೆಂಡಾನಾ? ಸ್ಪೀಕರ್ ಅವರು ಏಕಪಕ್ಷೀಯವಾಗಿ ಒಂದು ಪಕ್ಷದ ಸದಸ್ಯರಂತೆ ನಡೆದುಕೊಳ್ಳುತ್ತಿದ್ದಾರೆ.

ನಾಳೆ ಬೆಳಗ್ಗೆ ಒಳಗಾಗಿ ಸಚಿವರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸುತ್ತೇವೆ. ಇಲ್ಲದಿದ್ದರೆ ಸದನದ ಒಳಗೆ, ಹೊರಗೆ ಹೋರಾಟ ಮಾಡುತ್ತೇವೆದು ಡಿ.ಕೆ.ಶಿವಕುಮಾರ್‌ ಎಚ್ಚರಿಕೆ ನೀಡಿದ್ದಾರೆ.

Share Post