BengaluruPolitics

ಬೆಂಗಳೂರು ಉತ್ತರ ಗೆಲ್ಲಲು ಡಿಕೆಶಿ ಮೆಗಾ ಪ್ಲ್ಯಾನ್;‌ ಮೂವರು ಶಾಸಕರು ಆಗ್ತಾರಾ ಘರ್‌ ವಾಪಸಿ..?

ಬೆಂಗಳೂರು; ಲೋಕಸಭಾ ಚುನಾವಣೆ ಹತ್ತಿರವಾಗುತ್ತಿದೆ. ಅದಕ್ಕೆ ಸಿದ್ಧತೆಗಳೂ ನಡೆಯುತ್ತಿವೆ. ಇನ್ನೊಂದೆಡೆ ಬಿಬಿಎಂಪಿ ಚುನಾವಣೆಯೂ ಇದೆ. ಹೀಗಾಗಿ, ಬೆಂಗಳೂರಿನಲ್ಲಿ ಪಕ್ಷವನ್ನು ಗಟ್ಟಿಗೊಳಿಸಿಕೊಳ್ಳಲು ಕಾಂಗ್ರೆಸ್‌ ನಾಯಕರು ಭರ್ಜರಿ ಪ್ಲ್ಯಾನ್‌ ರೂಪಿಸಿದಂತೆ ಕಾಣುತ್ತಿದೆ. ಅದಕ್ಕಾಗಿ ಆಪರೇಷನ್‌ ಹಸ್ತ ಶುರುವಾಗಿದೆ. ಈಗಾಗಲೇ ಯಶವಂತಪುರ, ಕೆಆರ್‌ ಪುರಂ ಸೇರಿದಂತೆ ಹಲವು ಭಾಗಗಳ ಮಾಜಿ ಕಾರ್ಪೊರೇಟರ್‌ಗಳು ಬಿಜೆಪಿ ಬಿಟ್ಟು ಕಾಂಗ್ರೆಸ್‌ ಸೇರಿದ್ದಾರೆ. ಇನ್ನು ಆಪರೇಷನ್‌ ಕಮಲಕ್ಕೆ ತುತ್ತಾಗಿದ್ದ, ಸದ್ಯ ಹಾಲಿ ಶಾಸಕರಾಗಿರುವ ಮೂವರನ್ನು ಘರ್‌ ವಾಪಸಿ ಮಾಡಲು ಕೂಡಾ ಕಸರತ್ತು ನಡೆಯುತ್ತಿದೆ. ಇದರ ಹಿಂದೆ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರವನ್ನು ಸುಲಭವಾಗಿ ಗೆಲ್ಲೋ ಪ್ಲ್ಯಾನ್‌ ಕೂಡಾ ಇದೆ.

ನಿನ್ನೆ ಸಂಜೆ ಕೆಆರ್‌ ಪುರಂ ವಿಧಾನಸಭಾ ಕ್ಷೇತ್ರದ ಹಲವರು ಹಾಗೂ ಯಶವಂತಪುರ ವಿಧಾನಸಭಾ ಕ್ಷೇತ್ರ ಆರ್ಯ ಶ್ರೀನಿವಾಸ್, ರಾಜಣ್ಣ, ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ಶಿವಮಾದಯ್ಯ, ಹನುಮಂತೇಗೌಡ ಸೇರಿದಂತೆ ಹಲವರು ಬಿಜೆಪಿ ತೊರೆದು ಕಾಂಗ್ರೆಸ್‌ ಸೇರಿದ್ದಾರೆ. ಡಿ.ಕೆ.ಶಿವಕುಮಾರ್‌ ಸಮ್ಮುಖದಲ್ಲಿ ಈ ಸೇರ್ಪಡೆ ಕಾರ್ಯಕ್ರಮ ನಡೆದಿದೆ. ಯಶವಂತಪುರ ಶಾಸಕ ಎಸ್‌.ಟಿ.ಸೋಮಶೇಖರ್‌ ಕಾಂಗ್ರೆಸ್‌ಗೆ ವಾಪಸ್ಸಾಗುತ್ತಾರೆ ಎಂಬ ಸುದ್ದಿಗಳ ಬೆನ್ನಲ್ಲೇ ಈ ಬೆಳವಣಿಗೆಗಳು ನಡೆದಿವೆ. ಇನ್ನೊಂದೆಡೆ ಯಶವಂತಪುರ ವಿಧಾನಸಭಾ ಕ್ಷೇತ್ರದ ಕುಡಿಯುವ ನೀರಿನ ಯೋಜನೆಗಳಿಗಾಗಿ ಬರೋಬ್ಬರಿ ಏಳುವರೆ ಕೋಟಿ ರೂಪಾಯಿ ಅನುದಾನ ಕೂಡಾ ನೀಡಲಾಗಿದೆ.

ಅಂದಹಾಗೆ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರದಲ್ಲಿ ಸದ್ಯಕ್ಕೆ ಬಿಜೆಪಿಯಿಂದ ಆಯ್ಕೆಯಾಗಿರುವ ಡಿ.ವಿ.ಸದಾನಂದಗೌಡರು ಸಂಸದರಾಗಿದ್ದಾರೆ. ಈ ಕ್ಷೇತ್ರ ವ್ಯಾಪ್ತಿಗೆ ಒಟ್ಟು ಎಂಟು ವಿಧಾನಸಭಾ ಕ್ಷೇತ್ರಗಳು ಬರಲಿದ್ದು, ಇದರಲ್ಲಿ 5 ಕ್ಷೇತ್ರಗಳಲ್ಲಿ ಬಿಜೆಪಿ ಶಾಸಕರಿದ್ದರೆ, 3 ಕ್ಷೇತ್ರಗಳಲ್ಲಿ ಕಾಂಗ್ರೆಸ್‌ ಶಾಸಕರಿದ್ದಾರೆ. ಆದ್ರೆ ಬಿಜೆಪಿಯ ಐದು ಕ್ಷೇತ್ರಗಳಲ್ಲಿ ಮೂರು ಕ್ಷೇತ್ರಗಳನ್ನು ಶಾಸಕರನ್ನು ಕಾಂಗ್ರೆಸ್‌ಗೆ ಸೆಳೆಯೋ ಪ್ರಯತ್ನ ನಡೆದಿದೆ. ಯಶವಂತಪುರ ಶಾಸಕ ಎಸ್‌.ಟಿ.ಸೋಮಶೇಖರ್‌ ಕಾಂಗ್ರೆಸ್‌ ಸೇರೋದು ಬಹುತೇಕ ಪಕ್ಕಾ ಆಗಿದೆ. ಇನ್ನೊಂದೆಡೆ ಕೆ.ಆರ್‌.ಪುರಂ ಶಾಸಕ ಭೈರತಿ ಬಸವರಾಜ್‌ ಹಾಗೂ ಮಹಾಲಕ್ಷ್ಮೀ ಲೇಔಟ್‌ ಶಾಸಕ ಗೋಪಾಲಯ್ಯ ಅವರನ್ನು ಕಾಂಗ್ರೆಸ್‌ಗೆ ಸೆಳೆಯೋ ಪ್ರಯತ್ನ ನಡೆಯುತ್ತಿದೆ. ಈ ಮೂವರೂ, ಆಪರೇಷನ್‌ ಕಮಲಕ್ಕೆ ತುತ್ತಾಗಿದ್ದರು. ಸೋಮಶೇಖರ್‌ ಹಾಗೂ ಭೈರತಿ ಬಸವರಾಜು ಅವರಿಗೆ ಕಾಂಗ್ರೆಸ್‌ ತೊರೆದು ಬಿಜೆಪಿಗೆ ಹೋಗಿದ್ದರೆ, ಗೋಪಾಲಯ್ಯ ಜೆಡಿಎಸ್‌ ತೊರೆದು ಬಿಜೆಪಿ ಸೇರಿದ್ದರು. ಇದೀಗ ಈ ಮೂವರನ್ನು ಕಾಂಗ್ರೆಸ್‌ಗೆ ಸೆಳೆದರೆ, ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಎಂಟು ವಿಧಾನಸಭಾ ಕ್ಷೇತ್ರಗಳ ಪೈಕಿ ಐದರಲ್ಲಿ ಪ್ರಾಬಲ್ಯ ಸಾಧಿಸಿದಂತಾಗುತ್ತದೆ. ಇದರಿಂದ ಈ ಕ್ಷೇತ್ರ ಗೆಲ್ಲೋದು ಕಾಂಗ್ರೆಸ್‌ಗೆ ಸುಲಭವಾಗುತ್ತದೆ ಎಂದು ಹೇಳಲಾಗುತ್ತಿದೆ.

Share Post