BengaluruPolitics

ಬರಲಿದೆ ಕಾಂಗ್ರೆಸ್, ತರಲಿದೆ ಪ್ರಗತಿ; ಡಿಕೆಶಿ

ಬೆಂಗಳೂರು:ಮೇ 10 ಕೇವಲ ಮತದಾನದ ದಿನವಲ್ಲ, ರಾಜ್ಯದಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರವನ್ನು ಬಡಿದೋಡಿಸುವ ಪವಿತ್ರವಾದ ದಿನ. ಹೊಸ ನಾಡು, ಅಭಿವೃದ್ಧಿ ಕರ್ನಾಟಕ ಕಟ್ಟುವ ದಿನ. ಈ ದಿನ ನವ ಕರ್ನಾಟಕಕ್ಕೆ ಹೊಸ ದಿಕ್ಕು ನೀಡುವ ದಿನ. ಫೇಲಾದ ಎರಡೂ ಇಂಜಿನ್ ಗಳ ಬದಲಿಗೆ ಜನರೇ ಹೊಸ ಇಂಜಿನ್ ನಿರ್ಮಾಣ ಮಾಡುವ ದಿನ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುವ ಹಾಗೂ ಜನರ ಭವಿಷ್ಯ ನಿರ್ಮಾಣ ಮಾಡುವ ದಿನ. ಬರಲಿದೆ ಕಾಂಗ್ರೆಸ್, ತರಲಿದೆ ಪ್ರಗತಿ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ.

ಕೇಂದ್ರ ಚುನಾವಣಾ ಆಯೋಗವು ರಾಜ್ಯ ವಿಧಾನಸಭೆ ಚುನಾವಣೆ ದಿನಾಂಕ ಪ್ರಕಟಿಸಿದ ಕುರಿತಾಗಿ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ಮಾಧ್ಯಮಗೋಷ್ಠಿ ನಡೆಸಿ ಮಾತನಾಡಿದ ಶಿವಕುಮಾರ್ ಅವರು, ‘ಮೇ 10ರಂದು ರಾಜ್ಯ ವಿಧಾನಸಭಾ ಚುನಾವಣೆ ನಡೆಸಲು ಕೇಂದ್ರ ಚುನಾವಣಾ ಆಯೋಗ ಮುಹೂರ್ತ ನಿಗದಿ ಮಾಡಿದೆ. ಈ ಹಿಂದೆಯೇ ನೀತಿ ಸಂಹಿತೆ ಜಾರಿಯಾಗಬೇಕಿತ್ತು. ಆದರೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಎಷ್ಟು ಸಾಧ್ಯವೋ ಅಷ್ಟು ಅಧಿಕಾರ ದುರುಪಯೋಗ ಮಾಡಿಕೊಳ್ಳಲು ಇಷ್ಟು ದಿನ ಕಾಲ ಸಮಯ ತಳ್ಳಿದ್ದರು. ಚುನಾವಣಾ ಆಯೋಗ ಚುನಾವಣಾ ದಿನಾಂಕವನ್ನು ಪ್ರಕಟಿಸಿದ್ದು, ನಾವು ಇದನ್ನು ಸ್ವಾಗತಿಸುತ್ತೇವೆ’ ಎಂದು ತಿಳಿಸಿದರು.

‘ರಾಜ್ಯದಲ್ಲಿ ಒಂದು ಹಂತದ ಚುನಾವಣೆ ನಡೆಸುವ ಆಯೋಗದ ತೀರ್ಮಾನವನ್ನು ನಾವು ಸ್ವಾಗತಿಸುತ್ತೇವೆ. ಆಯೋಗ ಈ ಬಾರಿ ಸಾಕಷ್ಟು ಸುಧಾರಣೆಗಳನ್ನು ತರಲು ನಿರ್ಧರಿಸಿದ್ದು, ಈ ಬಗ್ಗೆ ನಾವು ಜನರಲ್ಲಿ ಜಾಗೃತಿ ಮೂಡಿಸಬೇಕಿದೆ. ಮುಂದಿನ ದಿನಗಳಲ್ಲಿ ಇದಕ್ಕಾಗಿ ಕಾರ್ಯಕ್ರಮ ರೂಪಿಸುತ್ತೇವೆ. ಸರ್ಕಾರ ಅಧಿಕಾರ ದುರುಪಯೋಗ ಮಾಡಿಕೊಳ್ಳಲು ಪ್ರಯತ್ನಿಸುತ್ತಿದೆ. ನಮ್ಮ ಅಧಿಕಾರಿಗಳು ಈ ಬದಲಾವಣೆಗಳನ್ನು ತರುವ ಸಾಮರ್ಥ್ಯ ಹೊಂದಿದ್ದಾರೆ. ರಾಜ್ಯದಲ್ಲಿ ಯಾವುದೇ ಅಧಿಕಾರಿ ಸರ್ಕಾರದ ಅಡಿಯಾಳಾಗುವುದಿಲ್ಲ ಎಂಬ ನಂಬಿಕೆ ಇದೆ. ಕಳೆದ ನಾಲ್ಕು ವರ್ಷಗಳಿಂದ ಡಬಲ್ ಇಂಜಿನ್ ಸರ್ಕಾರದ ದಬ್ಬಾಳಿಕೆಗೆ ಜನ ಬೇಸತ್ತಿದ್ದು, ಚುನಾವಣೆಯಲ್ಲಿ ಇದಕ್ಕೆ ಜನ ಅಂತ್ಯವಾಡಲಿದ್ದಾರೆ ಎಂದು ಭಾವಿಸಿದ್ದೇನೆ’ ಎಂದು ತಿಳಿಸಿದರು.

Share Post