ಪರಮೇಶ್ವರ್ ಮನೆಯಲ್ಲಿ ಸಿಎಂಗೆ ಡಿನ್ನರ್ ಪಾರ್ಟಿ; ಜಾರಕಿಹೊಳಿ ಸಮ್ಮುಖದಲ್ಲಿ ಗುಪ್ತ ಮಾತು!
ಬೆಂಗಳೂರು; 2013ರ ಚುನಾವಣೆಯಲ್ಲಿ ಕೊರಟಗೆರೆ ಕ್ಷೇತ್ರದಿಂದ ಈಗಿನ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರು ಸೋತಿದ್ದರು. ಆ ಚುನಾವಣೆ ಸಮಯದಲ್ಲಿ ಅವರು ಕೆಪಿಸಿಸಿ ಅಧ್ಯಕ್ಷರೂ ಆಗಿದ್ದರು. ಹೀಗಾಗಿ ಡಾ.ಜಿ.ಪರಮೇಶ್ವರ್ ಸಿಎಂ ಹುದ್ದೆ ಆಕಾಂಕ್ಷಿಯೂ ಆಗಿದ್ದರು. ಆದ್ರೆ ಚುನಾವಣೆಯಲ್ಲಿ ಸೋತಿದ್ದರಿಂದ ಅವರಿಗೆ ಸಿಎಂ ಆಗುವ ಅವಕಾಶ ಕೈತಪ್ಪಿತು. ಈ ಕಾರಣದಿಂದಾಗಿ ಸಿದ್ದರಾಮಯ್ಯ ಅವರು ಮೊದಲ ಬಾರಿಗೆ ಸಿಎಂ ಆಗೋದು ಸುಲಭವಾಯಿತು. ಅಂದಹಾಗೆ, ಸಿದ್ದರಾಮಯ್ಯ ಅವರು ತಮಗೆ ಅನುಕೂಲ ಆಗಲಿ ಅಂತಾನೇ ಪರಮೇಶ್ವರ್ ಅವರನ್ನು ಚುನಾವಣೆಯಲ್ಲಿ ಸೋಲುವಂತೆ ಮಾಡಿದರು ಎಂಬ ಆರೋಪ ಇದೆ. ಈ ಕಾರಣಕ್ಕಾಗಿಯೇ ಡಾ.ಜಿ.ಪರಮೇಶ್ವರ್ ಆಗಾಗ ಸಿದ್ದರಾಮಯ್ಯ ವಿರುದ್ಧ ಗುಡುಗುತ್ತಲೇ ಬಂದಿದ್ದರು. ಆದ್ರೆ ಈಗ ಕಾಲ ಬದಲಾಗುತ್ತಿರುವಂತೆ ಕಾಣುತ್ತಿದೆ. ಸಿಎಂ ಸಿದ್ದರಾಮಯ್ಯ ಹಾಗೂ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಒಂದಾಗಿದ್ದಾರಾ ಎಂಬ ವಿಚಾರ ಚರ್ಚೆಯನ್ನು ಹುಟ್ಟು ಹಾಕಿದೆ. ಇದಕ್ಕೆ ಕಾರಣ, ಸಿಎಂ ಸಿದ್ದರಾಮಯ್ಯ ಅವರು ಪರಮೇಶ್ವರ್ ಅವರ ಬೆಂಗಳೂರಿನ ನಿವಾಸದಲ್ಲಿ ಡಿನ್ನರ್ ಪಾರ್ಟಿಯಲ್ಲಿ ಪಾಲ್ಗೊಂಡಿರೋದು.
ಹೌದು, ಬೆಂಗಳೂರಿನ ಸದಾಶಿವನಗರದಲ್ಲಿರುವ ಪರಮೇಶ್ವರ್ ನಿವಾಸಕ್ಕೆ ಸಿಎಂ ಸಿದ್ದರಾಮಯ್ಯ ಕಳೆದ ರಾತ್ರಿ ಭೇಟಿ ನೀಡಿದ್ದರು. ಅಲ್ಲಿ ನಡೆದ ಭೋಜನಕೂಟದಲ್ಲಿ ಪಾಲ್ಗೊಂಡಿದ್ದರು. ಅಂದಹಾಗೆ, ಸಚಿವ ಸತೀಶ್ ಜಾರಕಿಹೊಳಿಯವರು ಇತ್ತೀಚೆಗೆ ಮುನಿಸಿಕೊಂಡಿದ್ದರು.. ಬೆಳಗಾವಿ ರಾಜಕೀಯದಲ್ಲಿ ಅನಗತ್ಯವಾಗಿ ಹೊರಗಿನವರು ಮೂಗು ತೂರಿಸುತ್ತಿದ್ದಾರೆ ಎಂದು ಸತೀಶ್ ಜಾರಕಿಹೊಳಿ ಆರೋಪ ಮಾಡಿದ್ದರು… ಇನ್ನು ಡಿ.ಕೆ.ಶಿವಕುಮಾರ್ ಅವರು ಬೆಳಗಾವಿಗೆ ಭೇಟಿ ನೀಡಿದ್ದಾಗ ಯಾವೊಬ್ಬ ಸಚಿವರೂ, ಶಾಸಕರೂ ಅವರನ್ನು ಸ್ವಾಗತಿಸಲು ಹೋಗಿರಲಿಲ್ಲ… ಹೀಗಿರುವಾಗಲೇ ಸಿಎಂ ಸಿದ್ದರಾಮಯ್ಯ ಅವರು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಅವರ ನಿವಾಸಕ್ಕೆ ಭೇಟಿ ನೀಡಿದ್ದಾರೆ. ಈ ವೇಳೆ ಸಚಿವರಾದ ಸತೀಶ್ ಜಾರಕಿಹೊಳಿ ಹಾಗೂ ಹೆಚ್.ಸಿ.ಮಹದೇವಪ್ಪ ಅವರೂ ಹಾಜರಿದ್ದರು.. ಈ ಕಾರಣಕ್ಕಾಗಿ ಡಾ.ಜಿ.ಪರಮೇಶ್ವರ್ ಅವರ ಮನೆಯಲ್ಲಿನ ಭೋಜನಕೂಟಕ್ಕೆ ಮಹತ್ವ ಬಂದಿದೆ.
ಅಂದಹಾಗೆ, ನಿನ್ನೆಯಷ್ಟೇ ಮಂಡ್ಯ ಶಾಸಕ ರವಿ ಗಾಣಿಗ ಸೇರಿದಂತೆ ಮೂವರು ಶಾಸಕರು ಎರಡೂವರೆ ವರ್ಷದ ನಂತರ ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿಯಾಗುತ್ತಾರೆ.. ಅವರು ಸಿಎಂ ಆಗಲೇಬೇಕು ಎಂದು ಹೇಳಿದ್ದರು.. ಈ ಬೆನ್ನಲ್ಲೇ ಸಿದ್ದರಾಮಯ್ಯ ಪಾಳಯದಲ್ಲಿ ಬೆಳವಣಿಗೆಗಳು ನಡೆಯುತ್ತಿವೆ. ಸಿದ್ದರಾಮಯ್ಯ ಪಾಳಯ ಗೃಹ ಸಚಿವ ಡಾ.ಜಿ.ಪರಮೇಶ್ವರ್‌ರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಕೆಲಸ ಮಾಡುತ್ತಿದೆ.. ಇನ್ನು ಜಿ.ಪರಮೇಶ್ವರ್ ಕೂಡಾ ಹಿಂದಿನ ಮುನಿಸು ಬಿಟ್ಟಂತೆ ಕಾಣುತ್ತಿದೆ.. ಯಾಕಂದ್ರೆ ಇತ್ತೀಚೆಗೆ ಪರಮೇಶ್ವರ್ ಅವರು ಕೂಡಾ ಸಿಎಂ ಸಿದ್ದರಾಮಯ್ಯ ಅವರನ್ನು ವಹಿಸಿಕೊಂಡು ಮಾತನಾಡುತ್ತಿದ್ದಾರೆ.. ಸಿದ್ದರಾಮಯ್ಯ ಅವರು ಕ್ರಿಕೆಟ್ ನೋಡಲು ಸ್ಟೇಡಿಯಂಗೆ ಹೋಗಿದ್ದನ್ನು ಬಿಜೆಪಿ ಹಾಗೂ ಜೆಡಿಎಸ್ ನಾಯಕರು ವಿಮರ್ಶಿಸಿದ್ದರು.. ಆದ್ರೆ ಪರಮೇಶ್ವರ್ ಅವರು ಸಿಎಂ ಕ್ರಿಕೆಟ್ ನೋಡಲು ಹೋಗಿದ್ದನ್ನು ಸಮರ್ಥಿಸಿದ್ದರು…
ಇತ್ತ ಭೋಜನಕೂಟದ ಹೆಸರಲ್ಲಿ ಪರಮೇಶ್ವರ್ ಮನೆಯಲ್ಲಿ ಗುಪ್ತ ಗುಪ್ತ ಮಾತುಕತೆ ನಡೆದಂತೆ ಕಾಣುತ್ತಿದೆ. ಒಂದು ಕಡೆ ಡಿ.ಕೆ.ಶಿವಕುಮಾರ್ ಪಾಳಯ ಸಿಎಂ ಬದಲಾವಣೆ ವಿಚಾರ ಮುನ್ನೆಲೆಗೆ ತರುವ ಪ್ರಯತ್ನ ಮಾಡುತ್ತಿದ್ದರೆ, ಸಿದ್ದರಾಮಯ್ಯ ಪಾಳಯ ಬೇರೆಯದೇ ಲೆಕ್ಕಾಚಾರದಲ್ಲಿ ರಾಜಕೀಯ ತಂತ್ರಗಾರಿಕೆ ಶುರು ಮಾಡಿದಂತೆ ಕಾಣುತ್ತಿದೆ…