Bengaluru

ಡಬಲ್‌ ಎಂಜಿನ್‌ ಸರ್ಕಾರದಿಂದ ಕರ್ನಾಟಕದ ಅಭಿವೃದ್ಧಿ; ಪ್ರಧಾನಿ ನರೇಂದ್ರ ಮೋದಿ

ಬೆಂಗಳೂರು; ಡಬಲ್‌ ಎಂಜಿನ್‌ ಸರ್ಕಾರ ರಾಜ್ಯ ಅಭಿವೃದ್ಧಿಗೆ ಭರವಸೆ ನೀಡಿತ್ತು. ಆ ಭರವಸೆಗಳು ಈಡೇರುತ್ತಿರುವುದನ್ನು ನೀವು ಕಣ್ಣಾರೆ ನೋಡುತ್ತಿದ್ದೀರಿ. 28 ಸಾವಿರ ಕೋಟಿ ರೂಪಾಯಿ ಮೊತ್ತದ ಯೋಜನೆಗಳಿಗೆ ನಾನು ಇವತ್ತು ಚಾಲನೆ ನೀಡಿದ್ದೇನೆ. ನಿಮ್ಮ ಸಂತೋಷದಲ್ಲಿ ಭಾಗಿಯಾಗಿರುವುದಕ್ಕೆ ನನಗೆ ಹೆಮ್ಮೆ ಎನಿಸುತ್ತಿದೆ ಎಂದು ಪ್ರಧಾನಿ ನರೇಂದ್ರ ಮೋದಿಯವರು ಹೇಳಿದ್ದಾರೆ.

ಬೆಂಗಳೂರಿನ ಕೊಮ್ಮಘಟ್ಟದಲ್ಲಿ ವಿವಿಧ ಯೋಜನೆಗಳಿಗೆ ಚಾಲನೆ ನೀಡಿ, ಸಾರ್ವಜನಿಕ ಸಮಾರಂಭದಲ್ಲಿ ಮಾತನಾಡಿದ ಅವರು, ಕನ್ನಡದಲ್ಲಿಯೇ ಮಾತು ಆರಂಭಿಸಿದರು. ಕರುನಾಡಿನ ಜನತೆಗೆ ನನ್ನ ಪ್ರೀತಿಯ ನಮಸ್ಕಾರಗಳು. ವಿಶೇಷವಾಗಿ ಬೆಂಗಳೂರಿನ ಮಹಾಜನತೆಗೆ ನನ್ನ ವಿಶೇಷವಾದ ನಮಸ್ಕಾರಗಳು ಎಂದು ಹೇಳಿದರು. ಅಭೂತಪೂರ್ವ ಮೂಲ ಸೌಕರ್ಯ ಯೋಜನೆಯನ್ನು ನಾವು ನೀಡಿದ್ದೇವೆ. ಡಬಲ್‌ ಎಂಜಿನ್‌ ಸರ್ಕಾರ ಜನರ ಆಶೋತ್ತರಗಳಿಗೆ ಸ್ಪಂದಿಸುತ್ತಿದೆ. ಹೀಗಾಗಿಯೇ ಇವತ್ತು,ಕರ್ನಾಟಕದ ಜನರ ಪಾಲಿಗೆ ಇದು ಮಹತ್ವದ ದಿನವಾಗಿದೆ ಎಂದು ಹೇಳಿದರು.

ಸಬ್‌ ಅರ್ಬಲ್‌ ಯೋಜನೆಗೆ 40 ವರ್ಷಗಳಿಂದ ಪ್ರಯತ್ನಿಸಲಾಗುತ್ತಿತ್ತು. ಆದ್ರೆ ಅದು ಸಾಧ್ಯವಾಗಿರಲಿಲ್ಲ.  ಹೀಗಾಗಿ ನಾವೀಗ ಅದನ್ನು ಜಾರಿ ಮಾಡುತ್ತಿದ್ದೇವೆ. ನಲವತ್ತು ವರ್ಷಗಳಲ್ಲಿ ಆಗದಿದ್ದನ್ನ ನಾವು ನಲವತ್ತು ತಿಂಗಳಲ್ಲಿ ಮಾಡಿ ತೋರಿಸುತ್ತಿದ್ದೇವೆ. ರೈಲು ಸ್ವಚ್ಛವಾಗುತ್ತಿವೆ. ಸುರಕ್ಷಿತವಾಗುತ್ತಿವೆ ಹಾಗೂ ಆಧುನಿಕವಾಗುತ್ತಿವೆ. ರೈಲುಗಳ ಕನೆಕ್ಟಿವಿಟಿ ಹೆಚ್ಚಾದರೆ, ಜನರಿಗೆ ಸಾಕಷ್ಟು ಅನುಕೂಲಗಳಾಗುತ್ತವೆ ಎಂದು ಮೋದಿ ಇದೇ ವೇಳೆ ಹೇಳಿದರು.

ನಾನು ಸಮಯ ವ್ಯರ್ಥ ಮಾಡೋದಕ್ಕೆ ಇಷ್ಟಪಡುವುದಿಲ್ಲ. ನಾವು ಈಗ ಮಾಡುತ್ತಿರುವ ಕೆಲಸಗಳು ನಲವತ್ತು ವರ್ಷಗಳ ಹಿಂದೆಯೇ ನಡೆಯಬೇಕಿತ್ತು. ಆದ್ರೆ ಹಿಂದಿನ ಸರ್ಕಾರಗಳ ಇಚ್ಛಾಶಕ್ತಿಯ ಕೊರತೆಯಿಂದ ಅದು ಆಗಲಿಲ್ಲ. ಆದ್ರೆ ಈಗ ನಾವು ಎಲ್ಲವನ್ನೂ ನೀಡುತ್ತಿದ್ದೇವೆ. ಬರೀ ರೈಲು, ರಸ್ತೆಯಿಂದಲೇ ಅಭಿವೃದ್ಧಿ ಸಾಧ್ಯವಿಲ್ಲ. ಮಲ್ಟಿ ಮಾಡೆಲ್‌ ಕನೆಕ್ಟಿವಿಟಿ ಬಗ್ಗೆ ನಾವು ಯೋಚನೆ ಮಾಡುತ್ತಿದ್ದೇವೆ. ಜನ ಸಂಚಾರಕ್ಕೆ ಬೇರೆ ಬೇರೆ ರೀತಿಯ ಕನೆಕ್ಟಿವಿಟಿಗೆ ವ್ಯವಸ್ಥೆ ಮಾಡುತ್ತಿದ್ದೇವೆ ಎಂದು ಪ್ರಧಾನಿ ಮೋದಿ ಹೇಳಿದರು.

ಜನರ ಜೀವನ ಸುಭದ್ರಗೊಳಿಸಲು ನಾವು ಸದಾ ಪ್ರಯತ್ನಿಸುತ್ತಿದ್ದೇವೆ. ಸಬ್‌ ಅರ್ಬನ್‌ ರೈಲು ಯೋಜನೆಯಿಂದ ಬೆಂಗಳೂರಿನ ಜನಕ್ಕೆ ಅನುಕೂಲವಾಗಲಿದೆ. ಬೆಂಗಳೂರು ಯುವಕರು ಏನು ಬೇಕಾದರೂ ಸಾಧಿಸುತ್ತಾರೆ. ಯುವಕರು ಬೆಂಗಳೂರಿನಲ್ಲಿ ಕುಳಿತು ಇಡೀ ಪ್ರಪಂಚಕ್ಕೆ ತಮ್ಮ ಜ್ಞಾನವನ್ನು ಧಾರೆ ಎರೆಯುತ್ತಿದ್ದಾರೆ. ಆತ್ಮನಿರ್ಬರ್‌ ಯೋಜನೆಗೆ ಬೆಂಗಳೂರು ದೊಡ್ಡ ಶಕ್ತಿ ನೀಡಿದೆ ಎಂದು ಮೋದಿ ಹೇಳಿದರು.

ಬೆಂಗಳೂರಿನಲ್ಲಿ ಟ್ರಾಫಿಕ್‌ ಸಮಸ್ಯೆ ನಿವಾರಣೆಗಾಗಿ ಹಲವು ಯೋಜನೆಗಳನ್ನು ಜಾರಿ ಮಾಡುತ್ತಿದ್ದೇವೆ. ಟ್ರಾಫಿಕ್‌ನಿಂದ ಮುಕ್ತಿಗೊಳಿಸಲು ರೈಲು, ಮೆಟ್ರೋ, ಫ್ಲೈ ಓವರ್‌ಗಳು ಬರಲಿವೆ. ಬೆಂಗಳೂರಿನ ಸಾಮರ್ಥ್ಯವನ್ನು ಮತ್ತಷ್ಟು ಹೆಚ್ಚಿಸಲು ಏನೆಲ್ಲಾ ಸಹಾಯ ಬೇಕೋ ಅದನ್ನು ಮಾಡಲು ಸಿದ್ಧರಿದ್ದೇವೆ ಎಂದು ಪ್ರಧಾನಿ ಮೋದಿ, ಕರ್ನಾಟಕದಲ್ಲಿ ಐದು ರಾಷ್ಟ್ರೀಯ ಹೆದ್ದಾರಿ ಪ್ರಾಜೆಕ್ಸ್‌ಗಳು, ಏಳು ರೈಲ್ವೆ ಯೋಜನೆಗಳಿಗೆ ಶಿಲಾನ್ಯಾಸ ಮಾಡಲಾಗಿದೆ.  ಕೊಂಕಣ್‌ ರೈಲು ಯೋಜನೆಗೆ ಚಾಲನೆ, ಯಲಹಂಕ-ಪೆನುಗೊಂಡ ಯೋಜನೆಗೆ ಚಾಲನೆ, ಯಶವಂತಪುರ ರೈಲು ನಿಲ್ದಾಣ ಅಭಿವೃದ್ದಿ, ಬೆಂಗಳುರು ದಂಡು ರೈಲು ನಿಲ್ದಾಣ ಮರು ಅಭಿವೃದ್ಧಿ ಸೇರಿದಂತೆ ಹಲವು ಯೋಜನೆಗಳಿಗೆ ಚಾಲನೆ ನೀಡಿರುವುದಕ್ಕೆ ಸಂತೋಷವಾಗುತ್ತಿದೆ ಎಂದು ಹೇಳಿದರು.

Share Post