ಬೆಂಗಳೂರಿನಲ್ಲಿ ಕೊವಿಡ್ ಕೇಸ್ ಹೆಚ್ಚಳ; ನಗರದಲ್ಲಿ ಟಫ್ ರೂಲ್ಸ್ ಜಾರಿ ಸಾಧ್ಯತೆ
ಬೆಂಗಳೂರು: ಬೆಂಗಳೂರು ನಗರದಲ್ಲಿ ಕೊವಿಡ್ ಸೋಂಕಿತರ ಸಂಖ್ಯೆ ಹೆಚ್ಚುತ್ತಿದೆ. ಹೊಸ ವರ್ಷದ ಮೊದಲ ದಿನದಂದೇ ಬೆಂಗಳೂರಿನಲ್ಲಿ 810 ಜನರಿಗೆ ಕೊವಿಡ್ ಇರುವುದು ದೃಢಪಟ್ಟಿದೆ. ನಿನ್ನೆ ಬೆಂಗಳೂರಲ್ಲಿ ಕೊವಿಡ್‌ಗೆ ಇಬ್ಬರು ಬಲಿಯಾಗಿದ್ದಾರೆ. ಸದ್ಯ ಬೆಂಗಳೂರಿನಲ್ಲಿ 7876 ಮಂದಿ ಸಕ್ರಿಯ ಕೊರೊನಾ ಸೋಂಕಿತರಿದ್ದಾರೆ. ಈ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಟಫ್ ರೂಲ್ಸ್ ಜಾರಿ ಮಾಡಬೇಕೆಂಬ ಅಭಿಪ್ರಾಯ ಕೇಳಿಬರುತ್ತಿದೆ.
ಚಿತ್ರಮಂದಿರ, ಮಾಲ್, ಹೋಟೆಲ್‌ಗಳಲ್ಲಿ ಶೇಕಡಾ ೫೦ ಮಂದಿಗೆ ಮಾತ್ರ ಅವಕಾಶ ಸೇರಿದಂತೆ ಹಲವು ಟಫ್ ರೂಲ್ಸ್ ಜಾರಿ ಮಾಡಿದರೆ ಮಾತ್ರ ಕೊರೊನಾ ನಿಯಂತ್ರಣಕ್ಕೆ ತರಲು ಸಾಧ್ಯ ಎಂದು ತಜ್ಞರು ಹೇಳುತ್ತಿದ್ದಾರೆ. ಬೆಂಗಳೂರು ನಗರದಲ್ಲಿ 144 ಸೆಕ್ಷನ್ ಜಾರಿ ಮಾಡಬೇಕು. ನೈಟ್ ಕರ್ಫ್ಯೂ ವಿಸ್ತರಣೆ ಮಾಡಬೇಕು ಸೇರಿದಂತೆ ಹಲವು ಸಲಹೆಗಳನ್ನು ತಜ್ಞರು ನೀಡಿದ್ದಾರೆ. ಹೀಗಾಗಿ ಬಿಬಿಎಂಪಿ ಆಯುಕ್ತರು ಈ ಬಗ್ಗೆ ಸಿಎಂ ಜೊತೆ ಮಾತನಾಡಿ, ಬೆಂಗಳೂರು ನಗರಕ್ಕೆ ಸೀಮಿತವಾಗಿ ಪ್ರತ್ಯೇಕ ಗೈಡ್‌ಲೈನ್ಸ್ ಜಾರಿ ಮಾಡಬೇಕೆಂದು ಮನವಿ ಮಾಡಲು ಮುಂದಾಗಿದ್ದಾರೆ.