ಕೊರೊನಾ ತಡೆಗೆ ಲಾಕ್‌ಡೌನ್ ಪರಿಹಾರವಲ್ಲ: ಬೊಮ್ಮಾಯಿ
ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸೋಂಕು ಗಣನೀಯವಾಗಿ ಏರಿಕೆಯಾಗುತ್ತಿವೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರ ಅಧ್ಯಕ್ಷತೆಯಲ್ಲಿ ಕೋವಿಡ್-19 ಕುರಿತು ಸಭೆ ನಡೆಸಲಾಯಿತು. ಸಭೆಯಲ್ಲಿ ಈಗಿರುವ ನಿಯಮಾವಳಿಗಳನ್ನು ಮುಂದುವರೆಸಲು ಸೂಚನೆ ನೀಡಲಾಗಿದೆ. ವೀಕೆಂಡ್ ಕರ್ಫ್ಯೂ, ನೈಟ್ ಕರ್ಫ್ಯೂ ಮುಂದುವರಿಸುವಂತೆ ಸಭೆಯಲ್ಲಿ ತೀರ್ಮಾನ ಮಾಡಲಾಗಿದೆ.
ಸಭೆಯಲ್ಲಿ ಕೈಗೊಂಡ ನಿರ್ಧಾರಗಳು
ಗ್ರಾಮೀಣ ಪ್ರದೇಶದಲ್ಲಿ ಜನರಲ್ಲಿ ವಿಶ್ವಾಸ ಮೂಡಿಸಬೇಕು. ಆಕ್ಸಿಜನ್ ಪ್ಲಾಂಟ್‌ಗಳನ್ನು ಸಜ್ಜುಗೊಳಿಸಿ, ಸಿಬ್ಬಂದಿ, ಇಂಧನ ಮೊದಲಾದವುಗಳನ್ನು ಸಿದ್ಧವಿಟ್ಟುಕೊಳ್ಳಲು ಸೂಚಿಸಲಾಗಿದೆ. ಆಸ್ಪತ್ರೆಗಳಲ್ಲಿ ಜನರೇಟರ್ ವ್ಯವಸ್ಥೆ ಮಾಡಿಕೊಳ್ಳಲು ಸೂಚಿಸಿದರು. ಮಕ್ಕಳು ಮತ್ತು 60 ವರ್ಷ ಮೇಲ್ಪಟ್ಟವರ ಕುರಿತು ಹೆಚ್ಚಿನ ನಿಗಾ ವಹಿಸುವಂತೆ ಸಲಹೆ ನೀಡಿದ್ರು. ಲಸಿಕೆ ಅಭಿಯಾನ ತ್ವರಿತವಾಗಿ ಪೂರ್ಣಗೊಳಿಸಿ, ಔಷಧಿಗಳನ್ನು ಸಕಾಲದಲ್ಲಿ ಆಸ್ಪತ್ರೆಗಳಿಗೆ ತಲುಪಿಸಲು ಕ್ರಮ ವಹಿಸಲು ಸೂಚಿಸಿದರು. ಭಾರತ ಸರ್ಕಾರದ ನಿಯಮಾವಳಿಗಳಂತೆ ಐ.ಸಿ.ಎಂ.ಆರ್ ಸೂಚಿಸಿರುವ ಶ್ರೇಣೀಕೃತ ಮಾದರಿಯಲ್ಲಿ ಪರೀಕ್ಷೆ ನಡೆಸಲು ಅನುಸರಿಸಲು ಸೂಚಿಸಿದರು. 15 ರಿಂದ 18 ವರ್ಷ ವಯೋಮಾನದವರಿಗೆ ಲಸಿಕಾ ಅಭಿಯಾನವನ್ನು ಚುರುಕುಗೊಳಿಸಲು ಆದೇಶಿಸಿದ್ರು.
ಕೊರೊನಾ ತಡೆಗೆ ಲಾಕ್‌ಡೌನ್ ಪರಿಹಾರವಲ್ಲ. ಕಟ್ಟುನಿಟ್ಟಿನ ನಿಯಮಗಳನ್ನು ಪಾಲಿಸುವ ಮೂಲಕ ಜನ ಜಾಗೃತಿ ವಹಿಸಬೇಕು. ಸರ್ಕಾರದೊಂದಿಗೆ ಕೈ ಜೋಡಿಸಿ ಕೊರೊನಾ ತಡೆಯುವಲ್ಲಿ ಸಹಕರಿಸಬೇಕು ಎಂದು ಮನವಿ ಮಾಡಿದ್ರು.