BengaluruPolitics

ನಿಲ್ಲದ ಜಾತಿ ಗಣತಿ ವರದಿ ವಿವಾದ; ಇವತ್ತು ಯಾರ್ಯಾರು ಏನು ಹೇಳಿದ್ರು..?

ಬೆಂಗಳೂರು; ಜಾತಿ ಗಣತಿ ವರದಿ ಬಗ್ಗೆ ರಾಜಕೀಯ ಕೆಸರೆರಚಾಟ ಮುಂದುವರೆದಿದೆ. ಒಂದು ಕಾಂಗ್ರೆಸ್‌ ಸರ್ಕಾರದಲ್ಲಿನ ಕೆಲ ಸಚಿವರಿಗೇ ಜಾತಿ ಗಣತಿ ವರದಿ ಬಿಡುಗಡೆ ಮಾಡುವುದು ಇಷ್ಟವಿಲ್ಲ. ಆದ್ರೆ, ಸಿಎಂ ಸಿದ್ದರಾಮಯ್ಯ ಅವರು ರಾಹುಲ್‌ ಗಾಂಧಿ ನಿಲುವನ್ನೇ ಅಸ್ತ್ರವಾಗಿಟ್ಟುಕೊಂಡು, ತಮ್ಮ ಪಕ್ಷದ ನಾಯಕರನ್ನು ಅಡಕತ್ತರಿಯಲ್ಲಿ ಸಿಲುಕಿಸಿದ್ದಾರೆ. ಇನ್ನೊಂದೆಡೆ ವಿಪಕ್ಷ ನಾಯಕರು ಕೂಡಾ ಜಾತಿ ಗಣತಿ ವರದಿ ಬಗ್ಗೆ ಹಲವು ಆಕ್ಷೇಪಗಳನ್ನು ಎತ್ತಿದ್ದಾರೆ. ಲೋಕಸಭಾ ಚುನಾವಣೆ ಹತ್ತಿರವಿರುವಾಗ ಜಾತಿ ಗಣತಿ ವರದಿ ಬಿಡುಗಡೆ ಮಾಡಿ ರಾಜಕೀಯ ಲಾಭ ಮಾಡಿಕೊಳ್ಳಲು ಪ್ರಯತ್ನಿಸಲಾಗುತ್ತಿದೆ ಎಂಬ ಆರೋಪ ವಿಪಕ್ಷಗಳದ್ದು.

ಈ ಬಗ್ಗೆ ವಿಪಕ್ಷ ನಾಯಕ ಆರ್‌.ಅಶೋಕ್‌ ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ. ವಿಧಾನಸೌಧದಲ್ಲಿ ಮಾತನಾಡಿರುವ ವಿಪಕ್ಷ ನಾಯಕ ಆರ್‌.ಅಶೋಕ್‌ ಅವರು, ಜಾತಿ ಗಣತಿಯ ಕಾಂತರಾಜು ವರದಿ ನೈಜತೆ ಬಗ್ಗೆ ಹಲವು ಅನುಮಾನಗಳಿವೆ ಎಂದಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರ ತರಾತುರಿ ನಡೆ ಸಂಶಯಾಸ್ಪದವಾಗಿದ್ದು, ಕಾಂಗ್ರೆಸ್‌ ಪಕ್ಷದ ವರಿಷ್ಠರ ಓಲೈಕೆಗೆ ಸಿದ್ದರಾಮಯ್ಯ ಅವರು ಅತಿಯಾದ ಆತುರ ತೋರಿಸುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.

ವಿವಾದಿತ ಕಾಂತರಾಜು ವರದಿ ಸ್ವೀಕರಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತರಾತುರಿ ತೋರುತ್ತಿರುವುದು ಅನೇಕ ಅನುಮಾನಗಳನ್ನು ಹುಟ್ಟು ಹಾಕುತ್ತಿದೆ. ವರದಿಯ ಮೂಲಪ್ರತಿ ಕಾಣೆಯಾಗಿದೆ, ಅದಕ್ಕೆ ಕಾರ್ಯದರ್ಶಿ ಸಹಿ ಇಲ್ಲ. ಇದೊಂದು ಅವೈಜ್ಞಾನಿಕ ವರದಿ ಎಂದು ಅನೇಕ ಸಮುದಾಯಗಳು ಆರೋಪಿಸಿವೆ. ಕಾಂಗ್ರೆಸ್‌ ಸರ್ಕಾರದ ಸಚಿವ ಸಂಪುಟದಲ್ಲೇ ವರದಿ ಬಿಡುಗಡೆಗೆ ಸಹಮತ ಇಲ್ಲ. ಇಂತಹ ಸಂದರ್ಭದಲ್ಲಿ ವಿವಾದಿತ ವರದಿ ಪಡೆಯಲು ಆತುರ ಏಕೆ ಎಂದು ಆರ್‌.ಅಶೋಕ್‌ ಪ್ರಶ್ನಿಸಿದ್ದಾರೆ.

ಹತ್ತು ವರ್ಷಗಳ ಹಿಂದಿನ ಜನಸಂಖ್ಯೆಗೂ, ಈಗಿನ ಜನಸಂಖ್ಯೆಗೂ ಸಾಕಷ್ಟು ವ್ಯತ್ಯಾಸ ಇದೆ. ಸಾರ್ವಜನಿಕರಿಂದಲೂ ತಮ್ಮ ಮನೆಗಳಿಗೆ ಸಮೀಕ್ಷೆ ನಡೆಸುವವರು ಬಂದಿರಲಿಲ್ಲ ಎಂದು ವ್ಯಾಪಕ ದೂರುಗಳು ಬಂದಿವೆ. ಇಷ್ಟಾದರೂ ವರದಿ ಸ್ವೀಕರಿಸುತ್ತೇನೆ ಎಂದು ಸಿದ್ದರಾಮಯ್ಯ ಅವರು ಆತುರ ತೋರುತ್ತಿರುವುದು ಜನರಲ್ಲಿ ಸಂಶಯವನ್ನು ಹುಟ್ಟು ಹಾಕಿದೆ. ಈ ಆತಿಯಾದ ಆತುರದ ಹಿಂದೆ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಪಕ್ಷದ ವರಿಷ್ಠರಾದ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ಅವರನ್ನು ಓಲೈಸುವ ಹುನ್ನಾರ ಇದ್ದಂತಿದೆ ಎಂದು ಆರ್‌.ಅಶೋಕ್‌ ಆರೋಪ ಮಾಡಿದ್ದಾರೆ.

ಇತ್ತ ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಕೂಡಾ ಜಾತಿ ಗಣತಿ ವರದಿ ಬಗ್ಗೆ ಆಕ್ಷೇಪ ಎತ್ತಿದ್ದಾರೆ. ಲೋಕಸಭೆ ಚುನಾವಣೆ ಹತ್ತಿರ ಬರುತ್ತಿರುವುದರಿಂದ ರಾಜಕೀಯ ಲಾಭ ಪಡೆಯಲು ಮುಖ್ಯಮಂತ್ರಿ ಸಿದ್ದರಾಮಯ್ಯ ಜಾತಿ ಗಣತಿ ವಿಷಯ ಪ್ರಸ್ತಾಪ ಮಾಡುತ್ತಿದ್ದಾರೆ ಎಂದು ಮಾಜಿ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಜಾತಿ ಜನಗಣತಿಯ ವಿಚಾರದಲ್ಲಿ ಸಿದ್ದರಾಮಯ್ಯ ನವರು ಮೊದಲಿನಿಂದಲೂ ಗೊಂದಲದ ಗೂಡು ಮಾಡಿದ್ದಾರೆ. ಆರಂಭದಲ್ಲಿ ಜಾತಿಗಣತಿ ಅಂದರು, ಆಮೇಲೆ ಆರ್ಥಿಕ, ಶೈಕ್ಷಣಿಕ, ಸಾಮಾಜಿಕ ವರದಿ ಅಂದರು. ಸರ್ಕಾರಿ ಆದೇಶದಲ್ಲಿ ಸಾಮಾಜಿಕ ಶೈಕ್ಷಣಿಕ ವರದಿ ಅಂತ ಬರೆದಿದ್ದಾರೆ ಎಂದು ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಹಿಂದುಳಿದ ವರ್ಗಗಳ ಆಯೋಗ ಮಾಡಿರುವುದು ಸರಿಯಾಗಿ ಸಮೀಕ್ಷೆ ಆಗಿಲ್ಲ, ಸದಸ್ಯರು, ಅಧ್ಯಕ್ಷರಿಗೆ ಸಾಮ್ಯತೆ ಇರಲಿಲ್ಲ, ರಾಜಕೀಯ ಹಸ್ತಕ್ಷೇಪ ಇತ್ತು , ಇಷ್ಟೆಲ್ಲ ನಡೆದಿದ್ದರೂ ಸಿಎಂ ಸಿದ್ದರಾಮಯ್ಯ ಅವರು ಸುಮ್ಮನಿದ್ದರು. ಆಗ ವರದಿ ಪಡೆದಿಲ್ಲ. ಈಗ ಚುನಾವಣೆ ಬರುತ್ತಿದೆ ಎಂದು ರಾಜಕೀಯ ಲಾಭ ಪಡೆಯುವ ಕೆಲಸ ಮಾಡುತ್ತಿದ್ದಾರೆ. ಸ್ಪಷ್ಟ ವರದಿ ಬಂದ ಮೇಲೆ ನಮ್ಮ ತೀರ್ಮಾನ ತಿಳಿಸುತ್ತೇವೆ ಎಂದೂ ಬೊಮ್ಮಾಯಿ ಹೇಳಿದರು.

ಇನ್ನು ಮಾಜಿ ಸಿಎಂ ಹಾಗೂ ಜೆಡಿಎಸ್‌ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ಕೂಡಾ ಇದೇ ಮಾತನ್ನೇ ಆಡುತ್ತಿದ್ದಾರೆ. ಆದ್ರೆ ಸಿಎಂ ಸಿದ್ದರಾಮಯ್ಯ ಮಾತ್ರ ತನ್ನ ನಿಲುವಿಗೆ ಬದ್ಧರಾಗಿದ್ದಾರೆ. ಇಂದು ಸಿಎಂ ಸಿದ್ದರಾಮಯ್ಯ ಅವರು ಬಾಗಲಕೋಟೆಯಲ್ಲಿ ಈ ಬಗ್ಗೆ ಮಾತನಾಡಿದ್ದಾರೆ. ಜಾತಿ ಜನಗಣತಿ ವರದಿ ಸಲ್ಲಿಸುವ ಮುನ್ನವೇ ಚರ್ಚೆ ಶುರುವಾಗಿದೆ. ವರದಿಯಲ್ಲೇ ಏನಿದೆ ಎಂದು ವರದಿ ಬೇಡ ಎನ್ನುವವರಿಗೂ ಗೊತ್ತಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಜಾತಿ ಜನಗಣತಿ ಸಮಾಜವನ್ನು ಒಡೆಯುತ್ತದೆ ಎಂದಿರುವ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿ ಅವರಿಗೆ ವರದಿಯಲ್ಲಿ ಏನಿದೆ ಎಂದು ಗೊತ್ತಿದೆಯೇ ಎಂದು ಪ್ರಶ್ನಿಸಿದರು. ಅಲ್ಲದೆ, ಯಾರೇ ಆಗಲಿ ಗೊತ್ತಿಲ್ಲದೆ ಮಾತನಾಡ ಬಾರದು. ಸಮಾಜ ಏಕೆ ಒಡೆಯುತ್ತೇವೆ? ಎಂದು ಪ್ರಶ್ನಿಸಿದರು. ನಿತೀಶ್ ಕುಮಾರ್ ಬಿಹಾರದಲ್ಲಿ ಜಾತಿಗಣತಿ ಸ್ವೀಕರಿಸಿದ್ದಾರೆ. ಸಮಾಜ ಒಡೆದುಬಿಟ್ಟರೆ ಎಂದರು. ಯಾವುದೇ ಹೇಳಿಕೆ ನೀಡುವಾಗ ಅದು ಸತ್ಯಾಂಶದ ಮೇಲೆ ಅವಲಂಬಿತವಾಗಿರಬೇಕು ಎಂದು ಸಿಎಂ ಹೇಳಿದರು.

ಇನ್ನು ಲಿಂಗಾಯತ ಸಮುದಾಯಕ್ಕೆ ಕಾಂಗ್ರೆಸ್‌ನ ಹಿರಿಯ ನಾಯಕ ಶಾಮನೂರು ಶಿವಶಂಕರಪ್ಪ ಕೂಡಾ ವರದಿಯನ್ನು ವಿರೋಧ ಮಾಡಿದ್ದಾರೆ. ಒಕ್ಕಲಿಗರ ಸಂಘ ಕೂಡಾ ಇದಕ್ಕೆ ವಿರೋಧ ಮಾಡಿ ಪತ್ರ ಬರೆದಿದ್ದು, ಇದಕ್ಕೆ ಡಿಸಿಎಂ ಡಿ.ಕೆ.ಶಿವಕುಮಾರ್‌ ಸೇರಿ ಹಲವರು ಸಹಿ ಕೂಡಾ ಹಾಕಿದ್ದಾರೆ. ಈ ನಡುವೆ ಸಿಎಂ ಸಿದ್ದರಾಮಯ್ಯ, ಅವರು ತಮ್ಮ ನಿಲುವಿಗೆ ಬದ್ಧವಾಗಿ ನಿಂತಿದ್ದಾರೆ. ಈ ಹಿಂದೆ ರಾಹುಲ್‌ ಗಾಂಧಿಯವರು ಜಾತಿ ಗಣತಿ ನಡೆಯಬೇಕು ಎಂದಿದ್ದರು. ರಾಹುಲ್‌ ಗಾಂಧಿಯವರ ಈ ಅಭಿಪ್ರಾಯವನ್ನೇ ಮುಂದಿಟ್ಟುಕೊಂಡು ನಮ್ಮ ಸರ್ಕಾರ ಜಾತಿಗಣತಿಯನ್ನು ಸ್ವೀಕರಿಸಲಿದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ರಾಹುಲ್ ಗಾಂಧಿ ಮಾತನ್ನೇ ಅಸ್ತ್ರವನ್ನಾಗಿ ಮಾಡಿಕೊಂಡ ಸಿಎಂ, ಇದರಿಂದಾಗಿ ವರದಿಯನ್ನೂ ವಿರೋಧಿಸಿದರೆ ರಾಹುಲ್ ಗಾಂಧಿಯವರ ಅಭಿಪ್ರಾಯ ಖಂಡಿಸಿದಂತಾಗುತ್ತದೆ ಎಂಬ ಆತಂಕ ಡಿ.ಕೆ.ಶಿವಕುಮಾರ್​ ಅವರದ್ದು. ಇತ್ತ ವರದಿಯನ್ನು ಸ್ವಾಗತಿಸಿದರೆ ಒಕ್ಕಲಿಗ ಸಮುದಾಯ ಎದುರು ಹಾಕಿಕೊಳ್ಳಬೇಕಾದ ಆತಂಕವೂ ಇದೆ.

Share Post