Bengaluru

ಮೇಕೆದಾಟು ಪಾದಯಾತ್ರೆ 2.0ಅಂತಿಮ ದಿನ-ನ್ಯಾಷನಲ್‌ ಕಾಲೇಜು ಮೈದಾನದಲ್ಲಿ ಬೃಹತ್‌ ಸಭೆ

ಬೆಂಗಳೂರು: ಮೇಕೆದಾಟು ಯೋಜನೆಗೆ ಆಗ್ರಹಿಸಿ ರಾಜ್ಯ ಕಾಂಗ್ರೆಸ್‌ ನಾಯಕರು ಪಾದಯಾತ್ರೆ ಹಮ್ಮಿಕೊಂಡಿದ್ದಾರೆ. ಕೊರೊನಾ ಸಂದರ್ಭದಲ್ಲಿ ಕೈಗೊಂಡಿದ್ದ ಪಾದಯಾತ್ರೆ ಮೊಟಕುಗೊಳಿಸಿ ಈಗ ಮತ್ತೆ ಪಾದಯಾತ್ರೆ 2.0 ಮಾಡ್ತಿದಾರೆ. ವಿಪಕ್ಷ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿಕೆಶಿ ನೇತೃತ್ವದಲ್ಲಿ ಪಾದಯಾತ್ರೆ ಸಾಗುತ್ತಿದೆ. ಇಂದು ಪಾದಯಾತ್ರೆಯ ಅಂತಿಮ ದಿನವಾಗಿದ್ದು, ಸಂಜೆ ಬಸವನಗುಡಿ ನ್ಯಾಷನಲ್‌ ಕಾಲೇಜು ಮೈದಾನದಲ್ಲಿ ಕಾಂಗ್ರೆಸ್‌ ಬೃಹತ್‌ ಸಭೆಯನ್ನು ಆಯೋಜಿಸಿದೆ. ಸಭೆಗೆ ಈಗಾಗಲೇ ವೇದಿಕೆ ಸಿದ್ಧವಾಗಿದ್ದು, ಸಾವಿರಾರು ಕಾರ್ಯಕರ್ತರು ಭಾಗಿಯಾಗುವ ನಿರೀಕ್ಷೆಯಿದೆ.

ಪಾದಯಾತ್ರೆ ಹಿನ್ನೆಲೆ ಇಂದು ನಗರದ ಹಲವೆಡೆ ಟ್ರಾಫಿಕ್‌ ಜಾಮ್‌ ಉಂಟಾಗಲಿದೆ. ಬೆಳಗ್ಗೆ 10 ಗಂಟೆಗೆ ಗಾಯತ್ರಿ ಗ್ರಾಂಡ್, ಅರಮನೆ ಮೈದಾನದಿಂದ ಪಾದಯಾತ್ರೆ ಹೊರಡುತ್ತದೆ. ಕಾವೇರಿ ಥಿಯೇಟರ್, ಸ್ಯಾಂಕಿ ಟ್ಯಾಂಕ್, 18ನೇ ಕ್ರಾಸ್ ಮಲ್ಲೇಶ್ವರಂ, ಮಾರ್ಗೋಸಾ ರಸ್ತೆ, ಕೆ.ಸಿ. ಜನರಲ್ ಆಸ್ಪತ್ರೆ, ಲಿಂಕ್ ರಸ್ತೆ, ಶೇಷಾದ್ರಿಪುರಂ, ರಾಜೀವ್ ಗಾಂಧಿ ಪ್ರತಿಮೆ, ಫ್ಲಾಟ್‌ಫಾರಂ ರಸ್ತೆಯಿಂದ ಸಂಗೊಳ್ಳಿ ರಾಯಣ್ಣ ಪ್ರತಿಮೆ, ಕಾಟನ್‌ಪೇಟೆ ಮುಖ್ಯರಸ್ತೆ, ಬ್ರಿಯಾಂಡ್ ಸರ್ಕಲ್, ರಾಯನ್ ಸರ್ಕಲ್, ಈದ್ಗಾ ಮೈದಾನದಿಂದ ನ್ಯಾಷನಲ್ ಕಾಲೇಜ್ ತಲುಪುತ್ತದೆ. ನ್ಯಾಷನಲ್ ಕಾಲೇಜು ಆಟದ ಮೈದಾನದಲ್ಲಿ ಪಾದಯಾತ್ರೆಯ ಕೊನೆ ಭಾಷಣ ನಡೆಯುತ್ತದೆ.

ನಗರದ ಹೃದಯ ಭಾಗದಲ್ಲಿ ಇಂದು ಕಾಂಗ್ರೆಸ್ ಪಾದಯಾತ್ರೆ ನಡೆಸುತ್ತಿರುವ ಹಿನ್ನೆಲೆ ನಗರದ ಮಲ್ಲೇಶ್ವರ, ಮೇಕ್ರಿ ಸರ್ಕಲ್, ಮೆಜೆಸ್ಟಿಕ್ ಸುತ್ತಲೂ ಟ್ರಾಫಿಕ್ ಅಗುವ ಸಾಧ್ಯತೆಯಿದೆ. ಏರ್ಪೋರ್ಟ್ ಕಡೆಯಿಂದ ಬರುವ ವಾಹನಗಳು ಹೆಬ್ಬಾಳ ಔಟರ್ ರಿಂಗ್ ರಸ್ತೆ ಹಾಗು ಜೆಸಿ ನಗರ ರಸ್ತೆಯಲ್ಲಿ ಸಾಗಲು ವ್ಯವಸ್ಥೆ ಮಾಡಲಾಗಿದೆ. ಸದ್ಯ ಈ ಸಮಯದಲ್ಲಿ ಟ್ರಾಫಿಕ್ ಸಾಮಾನ್ಯ ಸ್ಥಿತಿಯಲ್ಲಿ ಇದೆ. ಮುಂದಿನ ಕೆಲವು ಗಂಟೆಗಳು ಪಾದಯಾತ್ರೆ ಸಾಗುವ ಸುತ್ತಮುತ್ತಲಿನ ರಸ್ತೆಯಲ್ಲಿ ಟ್ರಾಫಿಕ್ ಆಗುವ ಸಾಧ್ಯತೆಯಿದೆ.

Share Post