Bengaluru

ಈಶ್ವರಪ್ಪ ವಿರುದ್ಧ ದೇಶದ್ರೋಹ ಕೇಸ್‌ ದಾಖಲಿಸಿ-ಜಂಟಿ ಸುದ್ದಿಗೋಷ್ಠಿಯಲ್ಲಿ ಸಚಿವ ಸ್ಥಾನದಿಂದ ವಜಾ ಮಾಡಲು ಕೈ ನಾಯಕರ ಪಟ್ಟು

ಬೆಂಗಳೂರು: ಸಚಿವ ಕೆ.ಎಸ್.ಈಶ್ವರಪ್ಪನವರು ರಾಷ್ಟ್ರಧ್ವಜಕ್ಕೆ ಅಪಮಾನ ಮಾಡಿದರೆಂಬ ಆರೋಪ ಹಿನ್ನೆಲೆ ತಕ್ಷಣ ಅವರನ್ನು ಸಚಿವ ಸ್ಥಾನದಿಂದ ಕೆಳಗಿಳಿಸಬೇಕೆಂದು ಕಾಂಗ್ರೆಸ್‌ ನಾಯಕರು ವಿಧಾನಸಭೆ ಕಲಾಪದಲ್ಲಿ ಪ್ರತಿಭಟನೆ ನಡೆಸಿದ್ರು. ಈ ವಿಚಾರವಾಗಿ ಕೆಪಿಸಿಸಿ ಕಚೇರಿಯಲ್ಲಿ ಸಿದ್ದರಾಮಯ್ಯ, ಡಿಕೆಶಿ, ಬಿ.ಕೆ.ಹರಿಪ್ರಸಾದ್ ಜಂಟಿ ಸುದ್ದಿಗೋಷ್ಠಿ ನಡೆಸಿ ಬಿಜೆಪಿ ಸರ್ಕಾರದ ವಿರುದ್ಧ ಮುಗಿಬಿದ್ರು.

ಹಿಜಾಬ್‌ ವಿಚಾರವಾಗಿ ಸಚಿವ ಈಶ್ವರಪ್ಪ ಮಾತನಾಡುತ್ತಾ ಇಂದಲ್ಲ ನಾಳೆ ಕೆಂಪುಕೋಟೆಯ ಮೇಲೆ ರಾಷ್ಟ್ರ ಧ್ವಜದ ಜಾಗದಲ್ಲಿ ಕೇಸರಿ ಧ್ವಜ ಹಾರಿಸುತ್ತೇವೆ ಎಂದು ಹೇಳಿದ್ದಾರೆ. ಈ ಮಾತು ಹೇಳುವ ಹಿಂದಿನ ದಿನ ಶಿವಮೊಗ್ಗದಲ್ಲಿ ಬಿಜೆಪಿ, ಸಂಘ ಪರಿವಾರದಿಂದ ಪ್ರಚೋದನೆಗೊಂಡ ವಿದ್ಯಾರ್ಥಿಗಳು ಸರ್ಕಾರಿ ಕಾಲೇಜಿನ ಧ್ವಜಸ್ತಂಭದಲ್ಲಿ ಕೇಸರಿ ಧ್ವಜ ಹಾರಿಸಿದ್ದರು.  ಒಬ್ಬ ಮಂತ್ರಿಯಾಗಿ ರಾಷ್ಟ್ರ ಧ್ವಜಕ್ಕೆ ಅಪಮಾನ ಮಾಡುವಂತ ಹೇಳಿಕೆ ಕೊಡುವುದು ಅಕ್ಷಮ್ಯ ಅಪರಾಧ ಎಂದು ಸಿದ್ದರಾಮಯ್ಯ ಕಿಡಿಕಾರಿದ್ದಾರೆ.

ರಾಷ್ಟ್ರೀಯ ಗೌರವಕ್ಕೆ ಧಕ್ಕೆ ಕಾಯ್ದೆಯಲ್ಲಿ ಯಾವುದೇ ವ್ಯಕ್ತಿ ಸಾರ್ವಜನಿಕ ಸ್ಥಳಗಳಲ್ಲಿ ಅಥವಾ ಬೇರೆ ಎಲ್ಲಿಯೇ ಆದರೂ ರಾಷ್ಟ್ರ ಧ್ವಜಕ್ಕೆ ಅಪಮಾನ ಮಾಡಿದರೆ, ಹಾಳು ಮಾಡಿದರೆ, ಚ್ಯುತಿ ತಂದರೆ ಅಥವಾ ತಮ್ಮ ಹೇಳಿಕೆ, ಬರಹ ಅಥವಾ ಕಾರ್ಯದ ಮೂಲಕ ಅಪಮಾನ ಮಾಡಿದರೆ ಅದು ಅಪರಾಧ, ಈ ಅಪರಾಧಕ್ಕೆ ಮೂರು ವರ್ಷ ಜೈಲು ಶಿಕ್ಷೆ ಅಥವಾ ದಂಡ ಅಥವಾ ಎರಡನ್ನೂ ವಿಧಿಸಬಹುದು ಎಂದು ಹೇಳಿದೆ. ಸಂವಿಧಾನ, ರಾಷ್ಟ್ರ ಧ್ವಜ, ರಾಷ್ಟ್ರ ಗೀತೆಗೆ ಅಪಮಾನ ಮಾಡಿದರೆ ಅದು ದೇಶದ್ರೋಹವಾಗುತ್ತದೆ.

ದೆಹಲಿಯ ಕೆಂಪುಕೋಟೆಯಲ್ಲಿ ರೈತರು ತಮ್ಮ ರೈತ ಧ್ವಜವನ್ನು ರಾಷ್ಟ್ರ ಧ್ವಜದ ಕೆಳಗೆ ಹಾರಿಸಿದ್ದಕ್ಕೆ ಅವರ ಮೇಲೆ ದೇಶದ್ರೋಹದ ಪ್ರಕರಣ ದಾಖಲಿಸಲಾಗಿದೆ. ಹಾಗಾದರೆ ಈಶ್ವರಪ್ಪ ಅವರ ಮೇಲೆ ಏಕೆ ಮೊಕದ್ದಮೆ ದಾಖಲಿಸಿಲ್ಲ? ಈಶ್ವರಪ್ಪ ಅವರಿಗೆ ಒಂದು, ರೈತರಿಗೆ ಒಂದು ಕಾನೂನಿದೆಯಾ? ಈ ಬಿಜೆಪಿಯವರು ಯಾವಾಗಲು ಸಂವಿಧಾನ, ರಾಷ್ಟ್ರ ಗೀತೆ, ರಾಷ್ಟ್ರ ಧ್ವಜ ಬದಲಾವಣೆ ಆಗಬೇಕು ಎನ್ನುವವರು. ಬಿಜೆಪಿ, ಆರ್.ಎಸ್.ಎಸ್ ನವರು ಒಂದು ದಿನವೂ ಇವುಗಳಿಗೆ ಗೌರವ ಕೊಟ್ಟವರಲ್ಲ. 2002, ಜನವರಿ 26 ರವರೆಗೆ ನಾಗಪುರದ ಆರ್.ಎಸ್.ಎಸ್ ಕಚೇರಿಯಲ್ಲಿ ರಾಷ್ಟ್ರ ಧ್ವಜ ಹಾರಿಸಿರಲಿಲ್ಲ. ವಾಜಪೇಯಿ ಅವರು ಒತ್ತಾಯ ಮಾಡಿದ್ದಕ್ಕೆ ಹಾರಿಸಿರಬಹುದೇನೋ? ಇಂಥವರು ದೇಶ ಭಕ್ತಿ ಬಗ್ಗೆ ಪಾಠ ಮಾಡುತ್ತಾರೆ. ಸಂವಿಧಾನ ಹೋಗಿ ಮನುಸ್ಮೃತಿ ಬರಬೇಕು ಎಂಬುದು ಬಿಜೆಪಿಯವರ ಉದ್ದೇಶ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಬಿಜೆಪಿ ನಾಯಕರ ಕಾಲೆಳೆದಿದ್ದಾರೆ.

ಈಶ್ವರಪ್ಪ ಅವರಿಂದ ಆರ್.ಎಸ್.ಎಸ್ ನವರೇ ಈ ರೀತಿ ದೇಶದ್ರೋಹದ ಹೇಳಿಕೆ ಹೇಳಿಸಿರಬಹುದು, ಒಂದು ವೇಳೆ ಸಂವಿಧಾನದ ಬದಲು ಮನುಸ್ಮೃತಿ ಬಂದರೆ ಈಶ್ವರಪ್ಪ ಮಂತ್ರಿಯಾಗಲು ಆಗುತ್ತಾ? ಬಿಡ್ತಾರ? ಕುರಿ ಕಾಯ್ಕೊಂಡೋ, ಕಸ ಹೊಡ್ಕೊಂಡೋ ಇರಬೇಕಾಗುತ್ತೆ. ಈಶ್ವರಪ್ಪ ಗೊತ್ತಿಲ್ಲದೆ ಮಾತಾಡ್ತಾರೆ, ಪಾಪ ಇವರು ಆರ್.ಎಸ್.ಎಸ್ ನ ಜೀತದಾಳಾಗಿದ್ದಾರೆ ಎಂದು ವ್ಯಂಗ್ಯವಾಡಿದ್ರು.

ನಾಳೆ ಸದನ ಆರಂಭಕ್ಕೂ ಮೊದಲು ಈಶ್ವರಪ್ಪ ಅವರನ್ನು ಸಚಿವ ಸ್ಥಾನದಿಂದ ಕೈಬಿಟ್ಟು, ಅವರ ಮೇಲೆ ದೇಶದ್ರೋಹದ ಪ್ರಕರಣ ದಾಖಲು ಮಾಡಬೇಕು. ಇದನ್ನು ಮಾಡಿಲ್ಲ ಎಂದರೆ ಸರ್ಕಾರದ ವಿರುದ್ಧ ಸದನದ ಒಳಗೆ ಮತ್ತು ಹೊರಗೆ ಹೋರಾಟವನ್ನು ಮಾಡುತ್ತೇವೆ.

ಸಂವಿಧಾನದ ರಕ್ಷಣೆ ಮಾಡಬೇಕಿರುವುದು ರಾಜ್ಯಪಾಲರ ಜವಾಬ್ದಾರಿ, ಅವರು ಮುಖ್ಯಮಂತ್ರಿಗಳಿಗೆ ಹೇಳಿ ಈಶ್ವರಪ್ಪ ಅವರನ್ನು ಸಚಿವ ಸ್ಥಾನದಿಂದ ವಜಾ ಮಾಡುವಂತೆ ನಿರ್ದೇಶನ ನೀಡಬೇಕಿತ್ತು.
ರಾಷ್ಟ್ರ ಧ್ವಜಕ್ಕೆ ಅವಮಾನ ಮಾಡಿ ದೇಶದ್ರೋಹ ಎಸಗಿರುವ ಈಶ್ವರಪ್ಪ ಸಚಿವರಾಗಿ ಮುಂದುವರೆಯಲು ಅನರ್ಹರು, ಅವರು ಒಂದು ವೇಳೆ ಕ್ಷಮೆ ಕೇಳಿದರೂ ನಾವು ಹೋರಾಟದಿಂದ ಹಿಂದೆ ಸರಿಯಲ್ಲ ಎಂದು ಕಾಂಗ್ರೆಸ್‌ ನಾಯಕರು ಪಟ್ಟು ಹಿಡಿದಿದ್ದಾರೆ.

Share Post