ಕಾಂಗ್ರೆಸ್‌ಗೆ ಹೆಸರು ಬರುತ್ತದೆ ಎಂದು ಬಿಜೆಪಿಗೆ ಹೊಟ್ಟೆ ಉರಿ; ಡಿ.ಕೆ.ಶಿವಕುಮಾರ್
ಬೆಂಗಳೂರು; ರಾಜ್ಯಕ್ಕೆ ಅಕ್ಕಿ ಪೂರೈಕೆ ಮಾಡಿದರೆ, ಅನ್ನಭಾಗ್ಯ ಯೋಜನೆ ಯಶಸ್ವಿಯಾಗುತ್ತದೆ. ಇದರಿಂದ ಕಾಂಗ್ರೆಸ್ ಪಕ್ಷಕ್ಕೆ ಹೆಸರು ಬರುತ್ತದೆ ಅಂತ ಬಿಜೆಪಿ ನಾಯಕರಿಗೆ ಹೊಟ್ಟೆ ಉರಿ. ಹೀಗಾಗಿಯೇ ಅಕ್ಕಿ ಕೊಡುವುದನ್ನು ನಿರಾಕರಿಸುತ್ತಿದ್ದಾರೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪ್ರತಿಭಟನೆಯ ನಂತರ ವಿಧಾನಸೌಧದಲ್ಲಿ ಸಿಎಂ ಸಿದ್ದಾರಮಯ್ಯ ಜೊತೆ ಜಂಟಿ ಸುದ್ದಿಗೋಷ್ಠಿ ನಡೆಸಿದ ಅವರು, ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಕೇಂದ್ರ ಸರ್ಕಾರ ಸುಮ್ಮನೆ ಅಕ್ಕಿ ಕೊಡುವುದಿಲ್ಲ. ನಾವು ಹಣ ಕೊಡುತ್ತೇವೆ. ಆದರೂ ಕೇಂದ್ರ ಅಕ್ಕಿ ಕೊಡೋದಕ್ಕೆ ತಯಾರಿಲ್ಲ. ಈ ಮೂಲಕ ಕೇಂದ್ರ ಸರ್ಕಾರ ಬಡವರ ಹೊಟ್ಟೆ ಮೇಲೆ ಹೊಡೆಯುತ್ತಿದೆ ಎಂದು ಡಿ.ಕೆ.ಶಿವಕುಮಾರ್ ಹೇಳಿದರು. ರಾಜ್ಯಕ್ಕೆ ಅಕ್ಕಿ ಪೂರೈಕೆ ಮಾಡಿದರೆ ಕಾಂಗ್ರೆಸ್‌ಗೆ ಒಳ್ಳೆಯ ಹೆಸರು ಬರುತ್ತದೆ. ಅನ್ನಭಾಗ್ಯ ಯೋಜನೆ ಜನಪ್ರಿಯವಾಗುತ್ತದೆ. ಹೀಗಾಗಿ ಬಿಜೆಪಿ ನಾಯಕರಿಗೆ ಹೊಟ್ಟೆ ಉರಿ ಶುರುವಾಗಿದೆ ಎಂದು ಡಿ.ಕೆ.ಶಿವಕುಮಾರ್ ಇದೇ ವೇಳೆ ಹೇಳಿದರು. ಏನೇ ಆದರೂ ನಾವು ಹತ್ತು ಕೆಜಿ ಅಕ್ಕಿ ಕೊಟ್ಟೇ ಕೊಡುತ್ತೇವೆ. ಸಿಎಂ ಹಾಗೂ ಅಧಿಕಾರಿಗಳು ಬೇರೆ ರಾಜ್ಯಗಳ ಜೊತೆ ಚರ್ಚೆ ಮಾಡುತ್ತಿದ್ದಾರೆ. ಅಕ್ಕಿಯನ್ನು ತರಿಸಿಕೊಂಡು ಪೂರೈಕೆ ಮಾಡುತ್ತೇವೆ ಎಂದು ಡಿ.ಕೆ.ಶಿವಕುಮಾರ್ ಹೇಳಿದರು.