BengaluruPolitics

BJP PROTEST: ಸಿಎಂ ಸಿದ್ದರಾಮಯ್ಯ ಕಚೇರಿಗೆ ಬೀಗ ಹಾಕಲು ಓಡಿದ ಆರ್‌.ಅಶೋಕ್!

ಬೆಂಗಳೂರು; ‘ಆರ್ಥಿಕ ನ್ಯಾಯಕ್ಕಾಗಿ ಹೋರಾಟ’ ಅಂತ ಕಾಂಗ್ರೆಸ್‌ ನಾಯಕರು ದೆಹಲಿಯಲ್ಲಿ ಪ್ರತಿಭಟನೆ ನಡೆಸಿದರು. ಇಡೀ ಸರ್ಕಾರವೇ ಪ್ರತಿಭಟನೆಯಲ್ಲಿ ಪಾಲ್ಗೊ೦ಡಿತ್ತು. ಕೇಂದ್ರ ಸರ್ಕಾರ ರಾಜ್ಯಕ್ಕೆ ಬರಬೇಕಿರುವ ಅನುದಾನವನ್ನು ಹೇಗೆ ಮೋಸ ಮಾಡುತ್ತಿದೆ ಎಂಬುದನ್ನು ಬಿಚ್ಚಿಟ್ಟರು. ಹೀಗೆ ದೆಹಲಿಯಲ್ಲಿ ರಾಜ್ಯ ಸರ್ಕಾರದಿಂದ ಪ್ರತಿಭಟನೆ ನಡೆಯುತ್ತಿದ್ದರೆ, ಇತ್ತ ಬಿಜೆಪಿ ನಾಯಕರು ರಾಜ್ಯ ಸರ್ಕಾರದ ವಿರುದ್ಧ ಪ್ರತಿಭಟನೆ ನಡೆಸಿದರು. ರಾಜ್ಯ ಹಲವು ಭಾಗಗಳಲ್ಲಿ ಬಿಜೆಪಿಯಿಂದ ಧರಣಿ ನಡೆಯಿತು. ಅದೇ ಬೆಂಗಳೂರಿನ ವಿಧಾನಸೌಧದ ಆವರಣದಲ್ಲಿರುವ ಗಾಂಧಿ ಪ್ರತಿಮೆ ಬಳಿ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ನೇತೃತ್ವದಲ್ಲಿ ಪ್ರತಿಭಟನೆ ಮಾಡಲಾಯಿತು.

ಕರ್ನಾಟಕ ಸರ್ಕಾರದ ವೈಫಲ್ಯ ಖಂಡಿಸಿ ಪ್ರತಿಭಟನೆ

ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ದೆಹಲಿಯಲ್ಲಿ ಪ್ರತಿಭಟನೆ ನಡೆಯುತ್ತಿದ್ದರೆ, ಇತ್ತ ರಾಜ್ಯ ಬಿಜೆಪಿ ನಾಯಕರು ಕೂಡಾ ಪ್ರತಿಭಟನೆಗಿಳಿದಿದ್ದರು. ವಿಧಾನಸೌಧದ ಆವರಣದಲ್ಲಿರುವ ಗಾಂಧಿ ಪ್ರತಿಮೆ ಬಳಿ ರಾಜ್ಯ ಬಿಜೆಪಿ ನಾಯಕರೆಲ್ಲಾ ಸೇರಿ ಧರಣಿ ನಡೆಸಿದರು. ಕಾಂಗ್ರೆಸ್ ಸರ್ಕಾರದ ವೈಫಲ್ಯಗಳನ್ನು ಖಂಡಿಸಿ  ಈ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಆರ್‌.ಅಶೋಕ್‌, ಯಡಿಯೂರಪ್ಪ, ವಿಜಯೇಂದ್ರ ಸೇರಿದಂತೆ ಹಲವು ನಾಯಕರು ಪಾಲ್ಗೊಂಡಿದ್ದರು.

ರೈತರಿಗೆ ಬರ ಪರಿಹಾರ ನೀಡದೆ ಮೋಸ ಆರೋಪ

ರಾಜ್ಯದಲ್ಲಿ ಸರಿಯಾಗಿ ಮಳೆಯಾಗದೆ 222 ತಾಲ್ಲೂಕುಗಳು ಬರಪೀಡಿತವಾಗಿವೆ. ಆದ್ರೆ ರಾಜ್ಯ ಸರ್ಕಾರ ಪರಿಹಾರ ನೀಡಿಲ್ಲ. ಇದರಿಂದಾಗಿ ರೈತರು ಆತ್ಮಹತ್ಯೆ ಮಾಡಿಕೊಳ್ಳುವಂತಹ ಪರಿಸ್ಥಿತಿ ಬಂದಿದೆ. ಇದರ ಜೊತೆಗೆ ಹಾಲು ಉತ್ಪಾದಕರಿಗೆ ಪ್ರೋತ್ಸಾಹ ಧನ ನೀಡುವಲ್ಲಿ ಕೂಡಾ ಕಾಂಗ್ರೆಸ್‌ ಸರ್ಕಾರ ವಿಫಲವಾಗಿದೆ ಎಂದು ಬಿಜೆಪಿ ನಾಯಕರು ಆರೋಪಿಸಿದರು. ಕಾಂಗ್ರೆಸ್ ಸರಕಾರವನ್ನು ಖಂಡಿಸಿ ಘೋಷಣಾ ಫಲಕಗಳನ್ನು ಹಿಡಿದು ಪ್ರತಿಭಟನೆ ನಡೆಸಲಾಯಿತು.

ಸರ್ಕಾರದ ವೈಫಲ್ಯ ಮುಚ್ಚಿಕೊಳ್ಳಲು ದೆಹಲಿಯಲ್ಲಿ ಪ್ರತಿಭಟನೆ

ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕರ್ನಾಟಕ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್.ಅಶೋಕ, ವಿಧಾನಪರಿಷತ್ ವಿರೋಧ ಪಕ್ಷದ ನಾಯಕ ಕೋಟ ಶ್ರೀನಿವಾಸ ಪೂಜಾರಿ ಸೇರಿದಂತೆ ಹಲವು ಮಾಜಿ ಸಚಿವರು ಧರಣಿಯಲ್ಲಿ ಪಾಲ್ಗೊಂಡಿದ್ದರು. ಇದೇ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ಬಿಜೆಪಿ ಸಂಸದ ಬಿ ವೈ ರಾಘವೇಂದ್ರ, ಕಾಂಗ್ರೆಸ್ ಸರ್ಕಾರ ತನ್ನ ವೈಫಲ್ಯವನ್ನು ಮುಚ್ಚಿಕೊಳ್ಳಲು ರಾಜಕೀಯ ನಾಟಕ ಮಾಡುತ್ತಿದೆ ಎಂದು ಆರೋಪಿಸಿದರು.

ಕರ್ನಾಟಕದ ಮತದಾರರು ಸಾಕಷ್ಟು ನಿರೀಕ್ಷೆಗಳೊಂದಿಗೆ ಕಾಂಗ್ರೆಸ್ ಅನ್ನು ಅಧಿಕಾರಕ್ಕೆ ತಂದಿದ್ದಾರೆ ಆದರೆ ಕೇವಲ ಆರು ತಿಂಗಳಲ್ಲಿ ರಾಜ್ಯದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆಯದ ಕಾರಣ ಜನರು ಮತ್ತು ಆಡಳಿತ ಪಕ್ಷದ ಶಾಸಕರು ಸರ್ಕಾರದ ಮೇಲೆ ಭರವಸೆ ಕಳೆದುಕೊಂಡಿದ್ದಾರೆ ಎಂದು ಹೇಳಿದರು. ಮುಂಬರುವ ಲೋಕಸಭಾ ಚುನಾವಣೆಯನ್ನು ಎದುರಿಸುವ ಸ್ಥಿತಿಯಲ್ಲಿ ಸರ್ಕಾರ ಇಲ್ಲ, ತಮ್ಮ ವೈಫಲ್ಯಗಳಿಂದ ಜನಮನವನ್ನು ಬೇರೆಡೆಗೆ ಸೆಳೆಯಲು ಯತ್ನಿಸುತ್ತಿದ್ದಾರೆ, ತಮ್ಮ ವೈಫಲ್ಯವನ್ನು ಮುಚ್ಚಿಕೊಳ್ಳಲು ಕೇಂದ್ರದತ್ತ ಬೊಟ್ಟು ಮಾಡುವ ರಾಜಕೀಯ ನಾಟಕವಾಡುತ್ತಿದ್ದಾರೆ ಎಂದು ರಾಘವೇಂದ್ರ ಹೇಳಿದರು. ಎಂದು ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರ ಪುತ್ರ ಹೇಳಿದ್ದಾರೆ.

ಸಿಎಂ ಕಚೇರಿಗೆ ಬೀಗ ಹಾಕಲು ಮುಂದಾದ ನಾಯಕರು

ಪ್ರತಿಭಟನೆ ವೇಳೆಯೇ ವಿಪಕ್ಷ ನಾಯಕ ಆರ್‌.ಅಶೋಕ್‌ ವಿಧಾನಸೌಧದ ಸಿಎಂ ಕಚೇರಿಗೆ ಬೀಗ ಹಾಕಲು ಪ್ರಯತ್ನಿಸಿದ್ದಾರೆ. ಆರ್‌.ಅಶೋಕ್‌ ನೇತೃತ್ವದಲ್ಲಿ ಹಲವು ಶಾಸಕರು ಓಡೋಡಿ ಹೋಗಿ ಮೂರನೇ ಮಹಡಿಯಲ್ಲಿ ಸಿಎಂ ಕಚೇರಿಗೆ ಬೀಗ ಹಾಕಲು ಪ್ರಯತ್ನಿಸಿದ್ದಾರೆ. ಆದ್ರೆ, ಇದನ್ನು ಪೊಲೀಸರೆ ತಡೆದಿದ್ದಾರೆ. ಎಲ್ಲಾ ನಾಯಕನ್ನೂ  ಕಬ್ಬನ್‌ಪಾರ್ಕ್‌ ಠಾಣೆ ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರ ಕಚೇರಿ ವಿಧಾನಸೌಧದ 3ನೇ ಮಹಡಿಯಲ್ಲಿದೆ. ಈ ಕಚೇರಿಗೆ ಬಿಜೆಪಿ ನಾಯಕರು ಬೀಗ ಹಾಕಲು ಯತ್ನಿಸಿದಾಗ ಪೊಲೀಸರು ತಡೆದು ನಿಲ್ಲಿಸಿದ್ದಾರೆ.

 

Share Post