ಇಬ್ಬರ ಸಿಂಡಿಕೇಟ್ ನಾಮನಿರ್ದೇಶನ ರದ್ದು; ಸಾಮೂಹಿಕ ರಾಜೀನಾಮೆಗೆ ಉಳಿದ ಸದಸ್ಯರ ತೀರ್ಮಾನ
ಬೆಂಗಳೂರು: ಬೆಂಗಳೂರು ವಿಶ್ವವಿದ್ಯಾಲಯದ ನಾಮನಿರ್ದೇಶಿತ ಇಬ್ಬರು ಸಿಂಡಿಕೇಟ್ ಸದಸ್ಯರ ಸದಸ್ಯತ್ವ ರದ್ದುಪಡಿಸಿರುವುದಕ್ಕೆ ಉಳಿದ ನಾಮನಿರ್ದೇಶಿತ ಸದಸ್ಯರು ಆಕ್ರೋಶಗೊಂಡಿದ್ದಾರೆ. ರಾಜ್ಯ ಸರ್ಕಾರದ ಈ ನಿರ್ಧಾರ ಖಂಡಿಸಿ, ಸಿಂಡಿಕೇಟ್ ನಾಮನಿರ್ದೇಶಿತ ಸದಸ್ಯರು ಸಾಮೂಹಿಕವಾಗಿ ರಾಜೀನಾಮೆ ನೀಡಲು ಮುಂದಾಗಿದ್ದಾರೆ.
ಈ ಬಗ್ಗೆ ಇಂದು ಸುದ್ದಿಗೋಷ್ಠಿ ನಡೆಸಿದ ಸದಸ್ಯರಾದ ಟಿ.ವಿ. ರಾಜು ಮತ್ತು ಗೋಪಿನಾಥ್, ನಾಮನಿರ್ದೇಶಿತ ಸದಸ್ಯರ ಸದಸ್ಯತ್ವ ರದ್ದು ಮಾಡುವ ಅಧಿಕಾರ ಸರ್ಕಾರಕ್ಕಿಲ್ಲ. ಆದರೂ ಸರ್ಕಾರ ಇಬ್ಬರು ಸದಸ್ಯರ ಸದಸ್ಯತ್ವ ರದ್ದು ಮಾಡಿದೆ. ಪ್ರೇಮ್ ಸೋಹನ್‌ಲಾಲ್ ಮತ್ತು ಗೋವಿಂದರಾಜು ಅವರ ನಾಮನಿರ್ದೇಶನವನ್ನು ರದ್ದುಪಡಿಸಿರುವ ರಾಜ್ಯ ಸರ್ಕಾರ, ಇವರ ಸ್ಥಾನಕ್ಕೆ ಡಾ.ಸಿ.ಆರ್. ಮಹೇಶ್ ಮತ್ತು ಡಾ. ಅನಿಲ್ ಕುಮಾರ್ ಈಸೋ ಅವರನ್ನು ನೇಮಿಸಿದೆ. ಇದು ಸರಿಯಲ್ಲ. ಹೀಗಾಗಿ ನಾವು ಸಾಮೂಹಿಕವಾಗಿ ರಾಜೀನಾಮೆ ನೀಡುತ್ತಿದ್ದೇವೆ ಎಂದು ಹೇಳಿದ್ದಾರೆ.