ನಗರದಲ್ಲಿ ರಾಪಿಡೋ ಬೈಕ್‌ಗಳ ಹಾವಳಿ: ಆಟೋ ಟ್ಯಾಕ್ಸಿ ಚಾಲಕರ ಹೋರಾಟ
ಬೆಂಗಳೂರು: ನೋಡಿ ಸ್ವಾಮಿ ನಮಗೇ ದಿನಬೆಳಗಾದ್ರೆ ಒಂದು ಡ್ಯೂಟಿನು ಸಿಗದೆ ಒರೀ ನೂರು/ಇನ್ನೂರು ರೂಪಾಯಿಗೆ ಆಟೋ ಓಡಿಸ್ಕೊಂಡು ಕಾಯುವ ಪರಿಸ್ಥಿತಿ ಅಂತ ಆಟೋ ಚಾಲಕರು ಹೇಳಿದ್ರೆ, ಲಕ್ಷ ಲಕ್ಷ ಸಾಲ ತಗೊಂಡು ಲೋನ್ ಕಟ್ಟೋಕಾಗ್ದೆ ಗಾಡಿ ಸೀಜ್ ಮಾಡೋ ಸ್ಥಿತಿಯಲ್ಲಿದ್ದೇವೆ ಅದರ ಜೊತೆಗೆ ಈ ಕೊರೊನಾ ಬೇರೆ ಅಂತ ಟ್ಯಾಕ್ಸಿ ಚಾಲಕರು ಅಳಲು ತೋಡಿಕೊಂಡಿದ್ದಾರೆ. ಇಷ್ಟಲ್ಲಾ ಯಾಕ್ ಹೇಳ್ತಿದ್ದಿವಿ ಅಂದ್ರೆ ಬೆಂಗಳೂರಿನಲ್ಲಿ ರಾಪಿಡೋ ಬೈಕ್‌ಗಳ ಹಾವಳಿ ಜೋರಾಗಿದೆ. ಇವರು ವೈಟ್ ಬೋರ್ಡ್ ಬೈಕ್‌ಗಳ ಮೂಲಕ ಡ್ಯೂಟಿ ಮಾಡ್ಕೊಂಡು ಕಸ್ಟಮರ್‌ಗಳನ್ನು ಪಿಕಪ್, ಡ್ರಾಪ್ ಮಾಡುವ ಕೆಲಸ ಮಾಡ್ತಿದಾರೆ.
ಇವರ ವಿರುದ್ಧ ಈಗ ಆಟೋ, ಕ್ಯಾಬ್ ಚಾಲಕರು ಸಿಡಿದೆದ್ದಿದ್ದಾರೆ. ನಾವು ಸಾಲ ಸೋಲ ಮಾಡಿ ಆಟೋ ಕ್ಯಾಬ್ ತಗೊಂಡು ಜೀವನ ನಿರ್ವಹಣೆ ಮಾಡಲಾಗದೆ ಪರದಾಡುವ ಪರಿಸ್ಥಿತಿ ಬಂದಿದೆ. ಆದರೆ ಯಾರ ಸಹಕಾರ ತೆಗೆದುಕೊಂಡು ಈ ಬೈಕ್‌ನವರು ರಸ್ತೆಗಿಳಿದು ಕೆಲಸ ಮಾಡ್ತಿದಾರೆ. ನಮಗೆ ದಿನಕ್ಕೆ ನೂರು/ಇನ್ನೂರು ರೂಪಾಯಿ ಆಗಲ್ಲ, ಆದ್ರೆ ಇವರು ಎರಡರಿಂದ ಮೂರು ಸಾವಿರ ಸಂಪಾದನೆ ಮಾಡ್ತಿದಾರೆ. ವೈಟ್ ಬೋರ್ಡ್ ಗಾಡಿಗಳು ವಾಣಿಜ್ಯ ಕೆಲಸಕ್ಕೆ ಬಳಸುವಂತಿಲ್ಲ ಎಂಬ ನಿಯಮವಿದೆ ಆದರೆ ಇವರು ನಾವು ಅನುಮತಿ ಪಡೆದೇ ಕೆಲಸ ಮಾಡ್ತಿದ್ದೇವೆ ಅಂತಾರೆ
ರಾಪಿಡೋ ಕಂಪನಿಗೆ ಫೋನ್ ಮಾಡುದ್ರೆ ನಾವು ಕೋರ್ಟ್‌ನಿಂದ ಅನುಮತಿ ಪಡೆದಿದ್ದೇವೆ ಅಂತ ಸಬೂಬು ಹೇಳ್ತಿದ್ದಾರೆ. ಸಾರಿಗೆ ಇಲಾಖೆ ಈ ಬಗ್ಗೆ ಗಮನ ಹರಿಸಬೇಕು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಶಾಂತಿ ನಗರ ಮತ್ತು ಕಬ್ಬನ್ ಪಾರ್ಕ್ ಪೊಲೀಸ್ ಠಾಣೆ ಬಳಿ ಇಪ್ಪತ್ತಕ್ಕೂ ಹೆಚ್ಚು ಆಟೋ ಚಾಲಕರು ಆಟೋ ನಿಲ್ಲಿಸಿ ಹೋರಾಟ ಮಾಡಿದ್ರು. ಈ ಬಗ್ಗೆ ಮಾತನಾಡಿದ ಸಂಚಾರಿ ಪೊಲೀಸರು ಕೊರೊನಾ ಸಮಯದಲ್ಲಿ ಹೀಗೆ ಗುಂಪು ಗೂಡುವುದು ಸರಿಯಲ್ಲ. ನೀವು ದೂರು ದಾಖಲಿಸಿ, ಅವರ ವಿರುದ್ಧ ನಾವು ಕ್ರಮ ಕೈಗೊಳ್ಳುತ್ತೇವೆ ಎಂದಿದ್ದಾರೆ.
ಇದರ ಬಗ್ಗೆ ರಾಪಿಡೋ ಚಾಲಕರು ಹೇಳೋದೆ ಬೇರೆ ನಮಗೆ ಆಪ್‌ನಿಂದ ಕೆಲಸ ಮಾಡಲು ಅನುಮತಿ ಇದೆ. ನೀವು ಏನಾದರೂ ಕೇಳೋ ಹಾಗಿದ್ರೆ ಕಂಪನಿಯವರನ್ನು ಕೇಳಿ. ಸುಖಾಸುಮ್ಮನೆ ನಮ್ಮ ಗಾಡಿಗಳನ್ನು ಹಿಡಿದು ನಮ್ಮ ಹೊಟ್ಟೆ ಮೇಲೆ ಯಾಕೆ ತಣ್ಣೀರು ಬಟ್ಟೆ ಹಾಕುತ್ತೀರ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.