ಪ್ರತಿ ಗ್ರಾಮದಲ್ಲಿ ವಿವೇಕಾನಂದ ಹೆಸ್ರಲ್ಲಿ ಸಂಘ ಕಟ್ಟಿ 10 ಲಕ್ಷ ಮಂದಿಗೆ ಉದ್ಯೋಗ; ಸಿಎಂ
ಬೆಂಗಳೂರು; ಪ್ರತಿ ಗ್ರಾಮದಲ್ಲಿ ಸ್ವಾಮಿ ವಿವೇಕಾನಂದ ಹೆಸರಿನಲ್ಲಿ ಸಂಘ ಸ್ಥಾಪಿಸುವ ಮೂಲಕ, 5 ಲಕ್ಷ ಯುವಕರು ಮತ್ತು 5 ಲಕ್ಷ ಯುವತಿಯರಿಗೆ ಕೆಲಸ ಕೊಡಲು ಉದ್ದೇಶಿಸಲಾಗಿದೆ ಸಿಎಂ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ. ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವತಿಯಿಂದ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್‍ನಲ್ಲಿ ಆಯೋಜಿಸಿದ್ದ ಮಾಜಿ ಮುಖ್ಯಮಂತ್ರಿ ಡಿ. ದೇವರಾಜ ಅರಸು ಅವರ 107ನೇ ಜನ್ಮ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬೊಮ್ಮಾಯಿ ಮಾತನಾಡಿದರು.
ಯುವಕ, ಯುವತಿಯರಿಗೆ ಕೆಲಸ ಕೊಡಲು, ಪ್ರತಿ ಗ್ರಾಮದಲ್ಲಿ ಸ್ವಾಮಿ ವಿವೇಕಾನಂದ ಹೆಸರಿನಲ್ಲಿ ಸಂಘ ಸ್ಥಾಪಿಸಿ 10 ಲಕ್ಷದ ಯೋಜನೆ ಮತ್ತು ಮಾರುಕಟ್ಟೆ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ಸಿಎಂ ಹೇಳಿದ್ದು, ಈ ಸಂಘದಲ್ಲಿ ಹಿಂದುಳಿದ ಸಮುದಾಯದ ಯುವಕರಿಗೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದಿದ್ದಾರೆ. ದೇವರಾಜ ಅರಸು ಅವರು ಸಾಮಾಜಿಕ ನ್ಯಾಯದ ನಿಜವಾದ ಹರಿಕಾರ. ನಾನು ಶಿಕ್ಷಣ, ಉದ್ಯೋಗ, ಸಬಲೀಕರಣ ಮೂರು ವಿಚಾರಗಳನ್ನು ಇಟ್ಟುಕೊಂಡು ಕೆಲಸ ಮಾಡುತ್ತಿದ್ದೇನೆ. ಅರಸು ಅವರ ಸಾಮಾಜಿಕ ನ್ಯಾಯದ ಕಲ್ಪನೆ ಈಡೇರಿಸಲು ಬದ್ಧನಾಗಿದ್ದೇನೆ ಎಂದು ಸಿಎಂ ಇದೇ ವೇಳೆ ಹೇಳಿದ್ದಾರೆ.