ಎಂ.ಬಿ.ಪಾಟೀಲರನ್ನು ಸಚಿವ ಅಶ್ವತ್ಥನಾರಾಯಣ ಭೇಟಿಯಾಗಿದ್ದರು; ಡಿ.ಕೆ.ಶಿವಕುಮಾರ್
ಬೆಂಗಳೂರು: ತಮ್ಮ ಇಲಾಖೆಗಳಲ್ಲಿ ನಡೆದಿರುವ ಹಗರಣಗಳ ವಿರುದ್ಧ ಧ್ವನಿ ಎತ್ತದಂತೆ ಮನವೊಲಿಸುವುದಕ್ಕಾಗಿ ಕಾಂಗ್ರೆಸ್ ನಾಯಕ ಎಂ.ಬಿ.ಪಾಟೀಲ್ ಅವರನ್ನು ಉನ್ನತ ಶಿಕ್ಷಣ ಸಚಿವ ಡಾ.ಸಿ.ಎನ್.ಅಶ್ವತ್ಥ ನಾರಾಯಣ ಅವರು ಭೇಟಿಮಾಡಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಆರೋಪಿಸಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ತಮ್ಮನ್ನು ತಾವು ರಕ್ಷಣೆ ಮಾಡಿಕೊಳ್ಳವುದಕ್ಕಾಗಿ ಸಚಿವ ಅಶ್ವತ್ಥನಾರಾಯಣ್ ಅವರು, ಎಂ.ಬಿ.ಪಾಟೀಲರ ಮನೆಗೆ ಹೋಗಿ ಬಂದಿದ್ದಾರೆ. ಈಗ ಬೇರೆ ಸಬೂಬು ಹೇಳಬಹುದು. ಶಿಕ್ಷಣ ಸಂಸ್ಥೆಗಳನ್ನು ಹೊಂದಿರುವ ಎಂ.ಬಿ. ಪಾಟೀಲರ ಸಲಹೆ ಪಡೆಯಲು ಹೋಗಿದ್ದಾಗಿಯೂ ಹೇಳಬಹುದು ಎಂದರು.
ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಬಿ.ಕೆ.ಹರಿಪ್ರಸಾದ್ ಅವರು ಹನುಮಾನ್ ಚಾಲೀಸಾ ಪಠಿಸುವವರು ಹಿಂದೂ ಭಯೋತ್ಪಾದಕರು ಎಂದು ಟೀಕಿಸಿರುವ ಬಗ್ಗೆ ಪ್ರತಿಕ್ರಿಯಿಸಿದ ಡಿ.ಕೆ.ಶಿವಕುಮಾರ್ ಅವರು, ಹರಿಪ್ರಸಾದ್ ಹಿರಿಯ ನಾಯಕರು. ಮಾಧ್ಯಮಗಳು ಅವರ ಹೇಳಿಕೆಯನ್ನು ತಿರುಚಬಾರದು. ಶಾಂತಿ ಕದಡುವವರು ಭಯೋತ್ಪಾದಕರು ಎಂದಷ್ಟೇ ಅವರು ಹೇಳಿರುವುದು ಎಂದರು.