BengaluruPolitics

ಸಿದ್ದರಾಮೋತ್ಸವಕ್ಕೆ ಅದ್ದೂರಿ ಸಿದ್ಧತೆ; ಕಾಂಗ್ರೆಸ್‌ ಹೈಕಮಾಂಡ್‌ ಕೆಂಗಣ್ಣು..!

ಬೆಂಗಳೂರು; ಕರ್ನಾಟಕದಲ್ಲಿ ವಿಧಾನಸಭಾ ಚುನಾವಣೆಗಳು ಹತ್ತಿರವಾಗುತ್ತಿವೆ. ಈ ಹಿನ್ನೆಲೆಯಲ್ಲಿ ಚುನಾವಣೆಗೆ ಎಲ್ಲಾ ಪಕ್ಷಗಳೂ ಸಿದ್ಧತೆ ನಡೆಸುತ್ತಿವೆ. ಅದರಂತೆ ಕಾಂಗ್ರೆಸ್‌ ಕೂಡಾ ಕಳೆ ಬುಧವಾರ ರಾಜ್ಯ ನಾಯಕರನ್ನು ದೆಹಲಿಗೆ ಕರೆಸಿಕೊಂಡು ಮೀಟಿಂಗ್‌ ನಡೆಸಿತ್ತು. ಕರ್ನಾಟಕ ಉಸ್ತುವಾರಿ ರಣದೀಪ್ ಸುರ್ಜೇವಾಲಾ ಅವರ ಸಮ್ಮುಖದಲ್ಲಿ ರಾಹುಲ್ ಗಾಂಧಿ ಅವರು ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಮತ್ತು ಸಿಎಲ್ಪಿ ನಾಯಕ ಸಿದ್ದರಾಮಯ್ಯ ಅವರೊಂದಿಗೆ ಮಾತುಕತೆ ನಡೆಸಿದ್ದರು. ಇದೇ ವೇಳೆ ಕಾಂಗ್ರೆಸ್‌ನಲ್ಲಿನ ಗುಂಪುಗಾರಿಕೆ ಬಗ್ಗೆಯೂ ಚರ್ಚೆ ನಡೆಸಲಾಗಿತ್ತು. ಈ ಹಿನ್ನೆಲೆಯಲ್ಲಿ ಈ ಸಭೆಯನ್ನು ಡಿಕೆಶಿ ಮತ್ತು ಸಿದ್ದು ನಡುವೆ ಶಾಂತಿ ಸಭೆ ಎಂದೇ ಬಿಂಬಿಸಲಾಗಿತ್ತು.

ಆದರೆ, ದೆಹಲಿಯಲ್ಲಿ ರಾಹುಲ್‌ ಗಾಂಧಿ ಸಭೆ ಮಾಡಿ ಕೆಲ ದಿನಗಳಷ್ಟೇ ಆಗಿದೆ. ಈ ನಡುವೆಯೇ ಸಿದ್ದರಾಮಯ್ಯನವರ 75ನೇ ಹುಟ್ಟುಹಬ್ಬವನ್ನು ಆಗಸ್ಟ್‌ 12ರಂದು ಪಕ್ಷದ ಹೊರತಾಗಿ ಆಚರಿಸಲು ಸಿದ್ದು ಪಾಳಯ ಭರ್ಜರಿ ಪ್ಲಾನ್‌ ಮಾಡುತ್ತಿರುವುದು ಕೌಂಟರ್‌ ಪ್ರೊಡಕ್ಟಿವ್‌ ಆಗಿರುವಂತಿದೆ.

ಕಳೆದ ಬುಧವಾರ ನಡೆದ ಸಭೆಯಲ್ಲಿ, ಸಿದ್ದರಾಮಯ್ಯನವರು ತಮ್ಮನ್ನು ಪಕ್ಷದ ಮುಖ್ಯಮಂತ್ರಿ ಅಭ್ಯರ್ಥಿ ಎಂದು ಬಿಂಬಿಸಿಕೊಳ್ಳಲು ಹೇಗೆ ಪ್ರಯತ್ನ ನಡೆಸುತ್ತಿದ್ದಾರೆ..?,  ಪಕ್ಷದ ಬ್ಯಾನರ್‌ನ ಹೊರಗೆ ಅಹಿಂದ (ಅಲ್ಪಸಂಖ್ಯಾತರು/ಎಸ್‌ಸಿ/ಎಸ್‌ಟಿ ಒಬಿಸಿ) ಕಾರ್ಯಕ್ರಮಗಳನ್ನು ಹೇಗೆ ಆಯೋಜಿಸುತ್ತಿದ್ದಾರೆ..? ಎಂಬುದನ್ನು ಪಕ್ಷದ ಗಮನಕ್ಕೆ ತರಲಾಗಿತ್ತು. ಇದರಿಂದ ಪಕ್ಷಕ್ಕೆ ಲಾಭವಿಲ್ಲ. ಯಾರೂ ಪಕ್ಷಕ್ಕಿಂತ ಮೇಲಲ್ಲ ಮತ್ತು ಎಲ್ಲಾ ಕಾರ್ಯಕ್ರಮಗಳು ಪಕ್ಷದ ಬ್ಯಾನರ್ ಅಡಿಯಲ್ಲಿ ನಡೆಯಬೇಕು ಎಂಬ ಸಂದೇಶವನ್ನು ಕಾಂಗ್ರೆಸ್‌ ವರಿಷ್ಠ ಸಿದ್ದರಾಮಯ್ಯ ಅವರಿಗೆ ಸ್ಪಷ್ಟವಾಗಿ ರವಾನೆ ಮಾಡಿದ್ದರು. ಹೀಗಿದ್ದರೂ, ಸಿದ್ದರಾಮಯ್ಯ ಅವರ ನಿಷ್ಠಾವಂತ ಬೆಂಬಲಿಗ ನಾಯಕರನ್ನೊಳಗೊಂಡ ಸಮಿತಿಯೊಂದನ್ನು ರಚನೆ ಮಾಡಲಾಗಿದ್ದು, ಸಿದ್ದರಾಮಯ್ಯ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ನೆರವೇರಿಸಲು ಸಿದ್ಧತೆ ಮಾಡಲಾಗುತ್ತಿದೆ.

ಸಿದ್ದರಾಮಯ್ಯ – 75 ಅಮೃತಮಹೋತ್ಸವ ಸಮಿತಿಯಲ್ಲಿ ಮಾಜಿ ಕೈಗಾರಿಕಾ ಸಚಿವ ಆರ್‌.ವಿ. ದೇಶಪಾಂಡೆ, ದೇವೇಗೌಡರನ್ನು 4 ಜನ ಹೊತ್ತುಕೊಂಡು ಹೋಗುತ್ತಾರೆ ಎಂದು ನಾಲಿಗೆ ಹರಿಬಿಟ್ಟಿದ್ದ  ಕೆ.ಎನ್. ರಾಜಣ್ಣ, ಮಾಜಿ ಲೋಕೋಪಯೋಗಿ ಸಚಿವ ಎಚ್‌.ಸಿ. ಮಹದೇವಪ್ಪ  ಮುಂತಾದವರು ಇದ್ದಾರೆ. ಸಿದ್ದರಾಮೋತ್ಸವದ ಕುರಿತು ಮಾಹಿತಿ ನೀಡಲು ಅವರು ನಾಳೆ ಅಂದರೆ ಮಂಗಳವಾರ ಬೆಂಗಳೂರಿನ ಪ್ರತಿಷ್ಠಿತ ಹೋಟೆಲ್‌ನಲ್ಲಿ ಸುದ್ದಿಗೋಷ್ಠಿ ಕೂಡಾ ಕರೆದಿದ್ದಾರೆ.

ಈ ಪತ್ರಿಕಾಗೋಷ್ಠಿಯ ಬಗ್ಗೆ ಕಾಂಗ್ರೆಸ್‌ ಪಕ್ಷಕ್ಕೆ ತಿಳಿದಿಲ್ಲ ಎಂದು ಕೆಪಿಸಿಸಿ ಮೂಲಗಳು ತಿಳಿಸಿವೆ. ಈ ಹಿನ್ನೆಲೆಯಲ್ಲಿ ಈ ವಿಷಯ ಈಗ ದೆಹಲಿಯ ನಾಯಕರ ಬಳಿಗೆ ಹೋಗುತ್ತಿದೆ. “ಕಳೆದ ವರ್ಷ ಬಿ.ಎಸ್. ಯಡಿಯೂರಪ್ಪ ಅವರಿಗೆ 77 ವರ್ಷ ತುಂಬಿದಾಗ ಅವರು ಹಾಲಿ ಸಿಎಂ ಆಗಿದ್ದರು. ಜೊತೆಗೆ  ಪಕ್ಷದ ಬ್ಯಾನರ್ ಅಡಿಯಲ್ಲಿ ಕಾರ್ಯಕ್ರಮ ನಡೆಯಿತು. ಆದರೆ ಇಲ್ಲಿ ಪದೇ ಪದೇ ಸಿದ್ದರಾಮಯ್ಯನವರು ತಮ್ಮನ್ನು ತಾವು ಅನಿವಾರ್ಯ ಎಂಬಂತೆ ಬಿಂಬಿಸಿಕೊಳ್ಳಲು ಮತ್ತು ಪ್ರತಿಷ್ಠಾಪಿಸಲು ಕಾರ್ಯಕ್ರಮಗಳನ್ನು ನಡೆಸುತ್ತಿದ್ದಾರೆ. ಡಿಕೆಶಿಗೆ ಉಸ್ತುವಾರಿ ನೀಡಿದ ನಂತರ ಪಕ್ಷದಲ್ಲಿ ಯಾವುದೇ ಚಟುವಟಿಕೆ ನಡೆಸದ ಅವರು, ಇದೀಗ ಬ್ಲಾಕ್ ಮೇಲ್ ತಂತ್ರಕ್ಕೆ ಮೊರೆ ಹೋಗಿದ್ದಾರೆ” ಎಂದು ಮೂಲಗಳು ತಿಳಿಸಿವೆ.

ಮಂಗಳವಾರದ ಸುದ್ದಿಗೋಷ್ಠಿ ಬಗ್ಗೆ ಸಿದ್ದರಾಮಯ್ಯ ಅವರ ಗುಂಪಿನಿಂದ ಈಗಾಗಲೇ ಪತ್ರಿಕಾ ಪ್ರಕಟಣೆ ಹೊರಬಿದ್ದಿದೆ.  ಪಕ್ಷದ ಹೈಕಮಾಂಡ್ ಸಿದ್ದರಾಮಯ್ಯನವರ ಗುಂಪಿನ ಈ ನಿರ್ಧಾರಕ್ಕೆ ಸೊಪ್ಪು ಹಾಕುತ್ತದಾ ಅಥವಾ ಕ್ರಮ ಕೈಗೊಳ್ಳುತ್ತದಾ ಕಾದುನೋಡಬೇಕು.

 

Share Post