BengaluruCinema

ನಟಿ ಪ್ರಣೀತಾ ಸೀಮಂತ ಶಾಸ್ತ್ರ; ಹಳದಿ ಸೀರೆಯಲ್ಲಿ ಮಿಂಚಿದ ಸ್ಟಾರ್‌ ನಟಿ

ಬೆಂಗಳೂರು: ಕಳೆದ ವರ್ಷವಷ್ಟೇ ಮದುವೆಯಾಗಿದ್ದ ನಟಿ ಪ್ರಣಿತಾ ತಾಯಿಯಾಗುತ್ತಿದ್ದಾರೆ. ಅವರು ಇತ್ತೀಚೆಗೆ ಸೀಮಂತ ಮಾಡಿಸಿಕೊಂಡಿದ್ದಾರೆ. ಅದರ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದು, ತಮಗೆ ಮಗುವಾಗುತ್ತಿರುವ ಬಗ್ಗೆ ಖುಷಿ ಹಂಚಿಕೊಂಡಿದ್ದಾರೆ.

‘ಪೊರ್ಕಿ’ ಚಿತ್ರದ ಮುಖಾಂತರ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಅವರಿಗೆ ನಾಯಕಿಯಾಗಿ ಪ್ರಣೀತಾ ಚಂದನವನಕ್ಕೆ ಕಾಲಿಟ್ಟಿದ್ದರು. 2021ರ ಮೇ 30ರಂದು ಉದ್ಯಮಿ ನಿತಿನ್ ರಾಜು ಅವರ ಜೊತೆ ಪ್ರಣೀತಾ ಮದುವೆ ನಡೆದಿತ್ತು. ಬೆಂಗಳೂರು ಹೊರವಲಯದಲ್ಲಿನ ರೆಸಾರ್ಟ್‌ ಒಂದರಲ್ಲಿ ನಡೆದಿದ್ದ ಮದುವೆ ಸಮಾರಂಭದಲ್ಲಿ ಕುಟುಂಬದ ಆಪ್ತರು ಹಾಗೂ ಆಪ್ತ ಸ್ನೇಹಿತರಷ್ಟೇ ಭಾಗವಹಿಸಿದ್ದರು. ಚಂದನವನದಲ್ಲಿ ತಮ್ಮ ಬಣ್ಣದ ಲೋಕದ ಪಯಣ ಆರಂಭಿಸಿದ್ದ ಪ್ರಣೀತಾ, ನಂತರದಲ್ಲಿ ಟಾಲಿವುಡ್‌ ಹಾಗೂ ಕಾಲಿವುಡ್‌ನಲ್ಲಿ ಮಿಂಚಿದ್ದರು. ಪವನ್‌ ಕಲ್ಯಾಣ್ ಅವರ ಜೊತೆ ನಟಿಸಿದ ‘ಅತ್ತಾರೆಂಟಿಕಿ ದಾರೇದಿ’ ಪ್ರಣೀತಾಗೆ ಮತ್ತಷ್ಟು ಖ್ಯಾತಿ ತಂದಿತ್ತು.

ಕನ್ನಡದಲ್ಲಿ ‘ಜರಾಸಂಧ’, ‘ಬ್ರಹ್ಮ’, ‘ಭೀಮಾ ತೀರದಲ್ಲಿ’, ‘ಮಾಸ್‌ ಲೀಡರ್‌’ ಮುಂತಾದವು ಪ್ರಣೀತಾ ನಟನೆಯ ಪ್ರಮುಖ ಚಿತ್ರಗಳು. ಇತ್ತೀಚೆಗೆ ಬಾಲಿವುಡ್‌ಗೂ ಕಾಲಿಟ್ಟಿದ್ದ ಪ್ರಣೀತಾ, ‘ಹಂಗಾಮ–2’ ಹಾಗೂ ಅಜಯ್‌ ದೇವ್‌ಗನ್‌ ನಟನೆಯ ‘ಭುಜ್‌–ದಿ ಪ್ರೈಡ್‌ ಆಫ್‌ ಇಂಡಿಯಾ’ ಸಿನಿಮಾದಲ್ಲಿ ನಟಿಸಿದ್ದರು.

Share Post