BengaluruCrime

ಪ್ರಿಯತಮೆಯನ್ನು ರಾಡ್‌ನಿಂದ ಹೊಡೆದ ಪಾಪಿ ಪ್ರೇಮಿ

ಬೆಂಗಳೂರು; ಎಂಜಿನಿಯರ್‌ ಒಬ್ಬ ತಾನು ಪ್ರೀತಿಸಿದ ಯುವತಿಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ. ಬೆಂಗಳೂರಿನ ಮೈಕೋ ಲೇಔಟ್‌ನಲ್ಲಿ ಈ ಘಟನೆ ನಡೆದಿದ್ದು, ತೀವ್ರವಾಗಿ ಗಾಯಗೊಂಡಿರುವ ಯುವತಿಯನ್ನು ಆಸ್ಪತ್ರೆಗೆ ಸೇರಿಸಲಾಗಿದೆ.

ಇಂದಿರಾನಗರದಲ್ಲಿ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿರುವ ರವಿಕುಮಾರ್‌ ಎಂಬಾತನೇ ಈ ಕೃತ್ಯ ನಡೆಸಿರುವಾತ. ಅದೇ ಕಂಪನಿಯಲ್ಲಿ ಯುವತಿಯೊಬ್ಬಳು ಇಂಟರ್ನ್‌ಶಿಪ್‌ ಮಾಡುತ್ತಿದ್ದಳು. ಆಕೆಯನ್ನು ರವಿಕುಮಾರ್‌ ಪ್ರೀತಿಸುತ್ತಿದ್ದನಂತೆ. ಆದ್ರೆ ಆ ಯುವತಿ ಬೇರೆ ಕಂಪನಿ ಸೇರಿಕೊಂಡಿದ್ದು, ರವಿಕುಮಾರ್‌ ಕರೆ ಮಾಡಿದರೆ ಸ್ವೀಕರಿಸುತ್ತಿರಲಿಲ್ಲ. ಇದರಿಂದ ಆಕ್ರೋಶಗೊಂಡ ಆತ ಕಬ್ಬಿಣದ ರಾಡ್‌ನಿಂದ ಆಕೆಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ.

ಆಗಸ್ಟ್‌ ೨ರಂದು ತನ್ನ ಪಿಜಿ ಬಳಿ ಆ ಯುವತಿಯನ್ನು ಕರೆಸಿಕೊಂಡಿದ್ದ ಆರೋಪಿ ಜಗಳ ಕಾಯ್ದಿದ್ದಾನೆ. ನಂತರ ಕಬ್ಬಿಣದ ರಾಡ್‌ನಿಂದ ಹಲ್ಲೆ ಮಾಡಿದ್ದಾನೆ. ತಲೆಗೆ ಹೊಡೆದಿದ್ದರಿಂದ ತೀವ್ರ ಗಾಯಗಳಾಗಿದ್ದು, ಈಗ ಆಕೆಯನ್ನು ನಿಮ್ಹಾನ್ಸ್‌ ಆಸ್ಪತ್ರೆಗೆ ದಾಖಲಿಸಲಾಗಿದೆ.

ಸದ್ಯ ಮೈಕೋ ಲೇಔಟ್‌ ಪೊಲೀಸರು ಆರೋಪಿ ರವಿಕುಮಾರ್‌ನನ್ನು ಬಂಧಿಸಿದ್ದು, ವಿಚಾರಣೆ ನಡೆಸುತ್ತಿದ್ದಾರೆ.

Share Post