ಎರಡು ತಿಂಗಳಲ್ಲಿ ತಮಿಳುನಾಡಿಗೆ ಹರಿದುಹೋದ ನೀರೆಷ್ಟು ಗೊತ್ತೇ..?
ಬೆಂಗಳೂರು; ಪ್ರತಿ ವರ್ಷ ಕಾವೇರಿ ನೀರಿಗಾಗಿ ತಮಿಳುನಾಡು ಕ್ಯಾತೆ ತೆಗೆಯುತ್ತಲೇ ಇರುತ್ತದೆ. ಆದ್ರೆ ಈ ಬಾರಿ ಆ ಪರಿಸ್ಥಿತಿ ಬರೋದಿಲ್ಲ ಅಂತ ಕಾಣುತ್ತೆ. ಯಾಕೆಂದ್ರೆ ಈ ಬಾರಿ ಕೋರ್ಟ್ ಸೂಚನೆಗಿಂತ ಎರಡು ಪಟ್ಟು ಹೆಚ್ಚು ನೀರು ತಮಿಳುನಾಡಿಗೆ ಹರಿದುಹೋಗಿದೆ. ಜೂನ್ ಹಾಗು ಜುಲೈ ತಿಂಗಳಲ್ಲಿ ಒಟ್ಟು 75 ಟಿಎಂಸಿ ನೀರನ್ನು ತಮಿಳುನಾಡಿನ ಮೆಟ್ಟೂರು ಜಲಾಶಯಕ್ಕೆ ಹರಿಯಬಿಡಲಾಗಿದೆ.
ಜೂನ್‌ನಲ್ಲಿ ಸರಿಯಾಗಿ ಮಳೆ ಬರಲಿಲ್ಲ. ಇದರಿಂದ ಈ ಬಾರಿ ನೀರಿನ ಕೊರತೆ ಎದುರಾಗಬಹುದೆಂಬ ಆತಂಕ ಇತ್ತು. ಜುಲೈ ತಿಂಗಳಲ್ಲಿ ಕಾವೇರಿ ಜಲಾನಯನ ಪ್ರದೇಶದಲ್ಲಿ ಭಾರಿ ಮಳೆಯಾಗಿದೆ. ಹೀಗಾಗಿ ಈ ಎರಡು ತಿಂಗಳಲ್ಲಿ ತಮಿಳುನಾಡಿಗೆ ಹರಿಸಬೇಕಾದ ನೀರಿಗಿಂತ ಡಬಲ್ ನೀರನ್ನು ಹರಸಲಾಗಿದೆ. ಸುಪ್ರೀಂಕೋರ್ಟ್ ತೀರ್ಪಿನ ಪ್ರಕಾರ ಜೂನ್ ಮತ್ತು ಜುಲೈ ನಲ್ಲಿ ತಮಿಳುನಾಡಿಗೆ 35 ಟಿಎಂಸಿ ನೀರು ಬಿಡಬೇಕು. ಆದ್ರೆ ಈ ಎರಡು ತಿಂಗಳಲ್ಲಿ 75 ಟಿಎಂಸಿ ನೀರು ತಮಿಳುನಾಡಿಗೆ ಹರಿದು ಹೋಗಿದೆ. ಆಗಸ್ಟ್‌ನಲ್ಲಿ 50 ಟಿಎಂಸಿ ಅಡಿಯಷ್ಟು ನೀರು ಬಿಡ ಬೇಕು. ಒಂದು ವೇಳೆ ಆಗಸ್ಟ್‌ನಲ್ಲಿ ಮಳೆ ಕಡಿಮೆಯಾದರೂ ಜುಲೈನಲ್ಲಿ ಹೆಚ್ಚು ನೀರು ಬಿಟ್ಟಿರುವುದರಿಂದ ಲೆಕ್ಕಾಚಾರ ಸರಿದೂಗಿಸಿದಂತಾಗುತ್ತದೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದರು.
ಕಾವೇರಿ ಜಲಾನಯನ ಪ್ರದೇಶದ ಪ್ರಮುಖ ಜಲಾಶಯಗಳಾದ ಹಾರಂಗಿಯಲ್ಲಿ 7.91 ಟಿಎಂಸಿ ಅಡಿ, ಹೇಮಾವತಿಯಲ್ಲಿ 37.10 ಟಿಎಂಸಿ ಅಡಿ, ಕೆಆರ್‌ಎಸ್‌ನಲ್ಲಿ 49.28 ಟಿಎಂಸಿ ಅಡಿ ಮತ್ತು ಕಬಿನಿಯಲ್ಲಿ 19.40 ಟಿಎಂಸಿ ಅಡಿ ನೀರು ಸಂಗ್ರಹವಾಗಿದೆ.