ಸಿದ್ದರಾಮಯ್ಯ ಮನೆಯ ಬ್ರೇಕ್ ಫಾಸ್ಟ್ ಮೀಟಿಂಗ್‌ನಲ್ಲಿ ನಡೆದಿದ್ದೇನು..?; ಒಗ್ಗಟ್ಟು ಪ್ರದರ್ಶನವಾ..? ಬಿಕ್ಕಟ್ಟು ಪ್ರದರ್ಶನವಾ..?
ಬೆಂಗಳೂರು; ಸಿಎಂ ಸಿದ್ದರಾಮಯ್ಯ ಅವರು ಇಂದು ತಮ್ಮ ನಿವಾಸ ಕಾವೇರಿಯಲ್ಲಿ ಬ್ರೇಕ್ ಫಾಸ್ಟ್ ಮೀಟಿಂಗ್ ಇಟ್ಟುಕೊಂಡಿದ್ದರು. ಇದರಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್ ಸೇರಿ 14ಕ್ಕೂ ಹೆಚ್ಚು ಮಂತ್ರಿಗಳು ಪಾಲ್ಗೊಂಡಿದ್ದರು. ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಈ ಸಭೆಯಲ್ಲಿ ಫುಲ್ ಜೋಶ್‌ನಲ್ಲಿದ್ದರು. ಈ ಸಮಯದಲ್ಲಿ ಒಂದಷ್ಟು ಸ್ವಾರಸ್ಯಕರ ಘಟನೆಗಳು ನಡೆದಿವೆ. ಮೀಟಿಂಗ್‌ನೂ ಮುಂಚೆ ಸಿಎಂ ನಿವಾಸದಲ್ಲಿರುವ ಮೀಟಿಂಗ್ ಹಾಲ್‌ನ್ನು ಡಿಸಿಎಂ ಡಿ.ಕೆ.ಶಿವಕುಮಾರ್ ಕೈಯಲ್ಲಿ ಉದ್ಘಾಟನೆ ಮಾಡಿಸಲಾಯಿತು. ಈ ವೇಳೆ ನಡೆದ ಸನ್ನಿವೇಶ ಸ್ವಾರಸ್ಯಕರವಾಗಿತ್ತು.
ಸಿಎಂ ಸಿದ್ದರಾಮಯ್ಯ ಅವರು, ಕತ್ತರಿಯನ್ನು ಡಿಸಿಎಂ ಡಿ.ಕೆ.ಶಿವಕುಮಾರ್ ಅವರ ಕೈಗೆ ಕೊಟ್ಟು ಟೇಪ್ ಕತ್ತರಿಸುವಂತೆ ಸೂಚಿಸಿದರು. ಅದಕ್ಕೆ ಡಿ.ಕೆ.ಶಿವಕುಮಾರ್ ಅವರ ನನ್ನ ಕೈಯಲ್ಲಿ ಟೇಪ್ ಕಟ್ ಮಾಡಿಸ್ತೀರಾ..? ಎಂದು ಕೇಳಿದರು. ಅದಕ್ಕೆ ಸಿದ್ದರಾಮಯ್ಯ ಅವರು ಹೌದಪ್ಪ ಎಂದು ನಗುತ್ತಾ ಹೇಳಿದರು. ಇದೇ ವೇಳೆ ಡಿ.ಕೆ.ಶಿವಕುಮಾರ್ ಅವರ ಸಚಿವ ಎಂ.ಬಿ.ಪಾಟೀಲ್ ನಿಂತಿದ್ದರು. ಅವರನ್ನು ರಾಜಣ್ಣ ಎಲ್ಲಪ್ಪ ಎಲ್ಲಿ ಎಂದು ಕೇಳಿದರು. ನಿನ್ನೆಯಷ್ಟೇ ರಾಜಣ್ಣ ಅವರು ತುಮಕೂರಿನಲ್ಲಿ ಮಾತನಾಡುತ್ತಾ, ಸಿದ್ದರಾಮಯ್ಯ ಸಿಎಂ ಆಗಿರುತ್ತಾರೆ. ಬದಲಾವಣೆ ಆಗುತ್ತೆ ಅಂದ್ರೆ ಪರಮೇಶ್ವರ್ ಸಿಎಂ ಆಗಲಿ ಎಂದಿದ್ದರು. ಈ ಕಾರಣಕ್ಕೋ ಏನೋ ಡಿ.ಕೆ.ಶಿವಕುಮಾರ್ ಅವರು ರಾಜಣ್ಣ ಅವರ ಬಗ್ಗೆ ಕೇಳಿದರು ಅನಿಸುತ್ತೆ. ಇದೇ ವೇಳೆ ಹಿಂದೆ ಇದ್ದ ಸಚಿವ ಕೆ.ಎನ್.ರಾಜಣ್ಣ ಅವರು, ಏಯ್ ನೋಡಿ ನಮ್ಮನ್ನು ಹೇಗೆ ತಳ್ತಾರೆ ಅಂತ ಹೇಳಿದರು.
ಇನ್ನು ಎಲ್ಲರೂ ಕ್ಲ್ಯಾಪ್ಸ್ ಹೊಡೀರಿ ಎನ್ನುತ್ತಲೇ ಟೇಪ್ ಕತ್ತರಿಸಿದ ಡಿಸಿಎಂ ಡಿ.ಕೆ.ಶಿವಕುಮಾರ್, ನಮ್ಮ ಪಿಡಬ್ಲ್ಯೂಡಿ ಮಿನಿಸ್ಟರ್ ಎಲ್ಲಿ ಎಂದು ಕೇಳಿದರು. ಪಿಡಬ್ಲ್ಯೂಡಿ ಮಿನಿಸ್ಟರ್ ಸತೀಶ್ ಜಾರಕಿಹೊಳಿ ಈ ಸಭೆಗೆ ಗೈರಾಗಿದ್ದರು. ಅವರಿಗೆ ಅನಾರೋಗ್ಯದ ಹಿನ್ನೆಲೆಯಲ್ಲಿ ಮೊದಲೇ ಸಭೆಗೆ ಹಾಜರಾಗಲು ಆಗಲ್ಲ ಎಂದು ಹೇಳಿದ್ದರು ಎಂದು ತಿಳಿದುಬಂದಿದೆ.
ಇನ್ನು ಮೀಟಿಂಗ್ ಹಾಲ್‌ನಲ್ಲಿ ಇರಿಸಲಾಗಿದ್ದ ಗಣಪತಿ ಫೋಟೋಗೆ ಡಿಸಿಎಂ ಡಿ.ಕೆ.ಶಿವಕುಮಾರ್ ಪೂಜೆ ಮಾಡಿ, ಮಂಗಳಾರತಿ ಕೂಡಾ ಮಾಡಿದರು. ಈ ವೇಳೆ ಅವರು ಆಡಿದ ಮಾತುಗಳು ಕೂಡಾ ಬಹಳ ಸ್ವಾರಸ್ಯಕರವಾಗಿದ್ದವು. ಐದು ವರ್ಷ ಚೆನ್ನಾಗಿದ್ದು, 2028ರಲ್ಲೂ ರಿಪೀಟ್ ಆಗುವಂತಹ ಶಕ್ತಿ, ಭಾಗ್ಯ ನಿಮಗೆಲ್ಲಾ ಕೊಡಲಿ ಎಂದು ಡಿ.ಕೆ.ಶಿವಕುಮಾರ್ ಪ್ರಾರ್ಥಿಸಿ ಪೂಜೆ ಮಾಡಿದರು. ಸಿಎಂ ಸಿದ್ದರಾಮಯ್ಯ ಹಾಗೂ ಅವರ ಬೆಂಬಲಿಗರು ಐದು ವರ್ಷ ಸಿದ್ದರಾಮಯ್ಯ ಅವರೇ ಸಿಎಂ ಆಗಿರಬೇಕು ಎಂದು ಹೇಳುತ್ತಿದ್ದರು. ಡಿ.ಕೆ.ಶಿವಕುಮಾರ್ ಈ ಕಾರಣಕ್ಕಾಗಿಯೇ ಈ ರೀತಿಯಲ್ಲಿ ಮಾತನಾಡಿದರಾ ಎಂಬ ಪ್ರಶ್ನೆ ಎದ್ದಿದೆ. ಇನ್ನೊಂದೆಡೆ ಡಿ.ಕೆ.ಶಿವಕುಮಾರ್ ಅವರು ಈ ಮಾತನ್ನು ಹೇಳುತ್ತಲೇ ಕೆಲ ಸಚಿವರು, ಹಾಗೆಯೇ ಲೋಕಸಭಾ ಚುನಾವಣೆಯಲ್ಲೂ ಉತ್ತಮ ಫಲಿತಾಂಶ ಬರಲಿ ಎಂದು ಪ್ರಾರ್ಥಿಸಿ ಎಂದು ಹೇಳುತ್ತಾರೆ. ಆಗ ಡಿ.ಕೆ.ಶಿವಕುಮಾರ್ ನಗುತ್ತಾ ಆಯ್ತು ಎನ್ನುತ್ತಾರೆ. ಅನಂತರ ಆರತಿ ತಟ್ಟೆಗೆ ಐನೂರರ ನೋಟುಗಳನ್ನು ತೆಗೆದು ಹಾಕುತ್ತಾರೆ.
ಒಂದು ಕಡೆ ಡಿ.ಕೆ.ಶಿವಕುಮಾರ್ ನಗುನಗುತ್ತಲೇ ಇದ್ದರೂ, ಅವರು ಆಡಿದ ಕೆಲ ಮಾತುಗಳು ಸಿದ್ದರಾಮಯ್ಯ ಬಣವನ್ನು ಚುಚ್ಚುವಂತೆ ಇದ್ದವು. ಸಚಿವರಾದ ಕೆ.ಎನ್.ರಾಜಣ್ಣ ಅವರು ಸಿದ್ದರಾಮಯ್ಯ ಪರವಾಗಿಯೇ ಬ್ಯಾಟಿಂಗ್ ಮಾಡಿಕೊಂಡು ಬಂದಿದ್ದಾರೆ. ಶುಕ್ರವಾರವೂ ಕೂಡಾ ಅವರು ಸಿದ್ದರಾಮಯ್ಯ ಅವರೇ ಸಿಎಂ ಆಗಿರಬೇಕು ಎಂದಿದ್ದರು. ಸಿದ್ದರಾಮಯ್ಯ ಬಿಟ್ಟರೆ ಪರಮೇಶ್ವರ್ ಅವರನ್ನು ಸಿಎಂ ಮಾಡಬೇಕು ಎಂದಿದ್ದರು. ಈ ಕಾರಣಕ್ಕೋ ಏನೋ ಡಿ.ಕೆ.ಶಿವಕುಮಾರ್ ಅವರು ಎಲ್ಲಿ ನಮ್ಮ ಸಚಿವರು ರಾಜಣ್ಣ ಎಂದು ಕರೆದರು.. ಜೊತೆಗೆ ಗೈರಾಗಿದ್ದ ಸತೀಶ್ ಜಾರಕಿಹೊಳಿಯವರ ಬಗ್ಗೆಯೂ ಕೇಳಿದರು. ಎಲ್ಲಿ ನಮ್ಮ ಪಿಡಬ್ಲ್ಯೂಡಿ ಸಚಿವರು ಎಂದು ಕೇಳಿದರು. ಇದೆಲ್ಲಾ ನಗುತ್ತಲೇ ಹೇಳಿದರೂ, ಈ ಮಾತುಗಳ ಹಿಂದೆ ಬೇರೆನೋ ಅಡಗಿರುವುದು ಕಂಡುಬರುತ್ತಿತ್ತು.
ಇನ್ನು ಸಿಎಂ ಸಿದ್ದರಾಮಯ್ಯ ಅವರು ಡ್ಯಾಮೇಜ್ ಕಂಟ್ರೋಲ್‌ಗೆ ಮುಂದಾದಂತೆ ಕಾಣುತ್ತಿತ್ತು. ಎರಡು ದಿನದ ಹಿಂದೆ ಸಿದ್ದರಾಮಯ್ಯ ಅವರು ಸದ್ಯ ನಾನು ಸಿಎಂ ಆಗಿದ್ದೇನೆ, ನಾನೇ ಮುಂದುವರೆಯುತ್ತೇನೆ ಎಂದು ಹೇಳಿದ್ದರು. ನಂತರ ಶುಕ್ರವಾರ ತಮ್ಮ ಮಾತನ್ನು ಬದಲಿಸಿದ್ದರು. ಇದೀಗ ಅವರು ದಿಢೀರ್ ಅಂತ ಬ್ರೇಕ್ ಫಾಸ್ಟ್ ಮೀಟಿಂಗ್ ಕರೆದು ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳಲು ಮುಂದಾಗಿದ್ದಾರೆ. ಅಷ್ಟೇ ಏಕೆ, ಡಿ.ಕೆ.ಶಿವಕುಮಾರ್ ಕೈಯಿಂದ ಸಿಎಂ ನಿವಾಸದ ಮೀಟಿಂಗ್ ಹಾಲ್ ಉದ್ಘಾಟನೆ ಮಾಡಿಸಿದ್ದಾರೆ. ಇಷ್ಟೆಲ್ಲಾ ನಡೆದರೂ, ಎರಡೂ ಬಣಗಳ ನಡುವೆ ಸಾಮರಸ್ಯ ಇಲ್ಲ ಅನ್ನೋದು ಎದ್ದು ಕಾಣುತ್ತಿತ್ತು.. ಎಲ್ಲರೂ ನಗುನಗುತ್ತಾ ಮಾತನಾಡಿದರೂ, ಆ ನಗುವಿನ ಹಿಂದೆ ಬೇರೇನೋ ರಾಜಕೀಯ ಇದೆ ಅನ್ನೋದು ಎದ್ದು ಕಾಣುತ್ತಿತ್ತು…