ದಶಪಥ ರಸ್ತೆ ಉದ್ಘಾಟನೆಗೆ ಕ್ಷಣಗಣನೆ; 11.40ಕ್ಕೆ ಲೋಕಾರ್ಪಣೆ
ಬೆಂಗಳೂರು; ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ವೇ ಉದ್ಘಾಟನೆ ಕ್ಷಣಗಣನೆ ಶುರುವಾಗಿದೆ. ಇಂದು ಬೆಳಗ್ಗೆ 11.10ಕ್ಕೆ ಮೋದಿಯವರು ಮೈಸೂರು ವಿಮಾನ ನಿಲ್ದಾಣಕ್ಕೆ ಆಗಮಿಸಲಿದ್ದಾರೆ. ಅಲ್ಲಿಂದ ವಿಶೇಷ ಹೆಲಿಕಾಪ್ಟರ್‌ನಲ್ಲಿ ಮಂಡ್ಯಕ್ಕೆ ಬರಲಿದ್ದು, ಬೆಳಗ್ಗೆ 11.40ಕ್ಕೆ ಸರಿಯಾಗಿ ಹೆದ್ದಾರಿಯನ್ನು ಪ್ರಧಾಬಿ ಮೋದಿ ಲೋಕಾರ್ಪಣೆ ಮಾಡಲಿದ್ದಾರೆ.
ಮಂಡ್ಯದ ಅಮರಾವತಿ ಹೋಟೆಲ್ ಬಳಿ ದಶಪಥ ರಸ್ತೆಗೆ ಚಾಲನೆ ಸಿಗುತ್ತದೆ. ಅನಂತರ ಮೋದಿಯವರು ಮಂಡ್ಯದಲ್ಲಿ ಸುಮಾರು ಎರಡು ಕಿಲೋ ಮೀಟರ್ ರೋಡ್ ಶೋ ನಡೆಸಲಿದ್ದಾರೆ. ಅನಂತರ ಮದ್ದೂರು ಬಳಿಯ ಗೆಜ್ಜಲಗೆರೆಯಲ್ಲಿ ಮಧ್ಯಾಹ್ನ 12.15ರಿಂದ 1.15ರವರೆಗೆ ವೇದಿಕೆ ಕಾರ್ಯಕ್ರಮ ನಡೆಯಲಿದೆ.
ಈ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿಯವರು ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಲಿದ್ದಾರೆ. 5,700 ಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗುವ ಮಂಡ್ಯ-ಕುಶಾಲನಗರ ಹೆದ್ದಾರಿಗೆ ಪ್ರಧಾನಿ ಮೋದಿ ಭೂಮಿ ಪೂಜೆ ನೆರವೇರಿಸಲಿದ್ದಾರೆ. ಇದರ ಜೊತೆಗೆ ಹಲವು ಕಾಮಗಾರಿಗಳಿಗೆ ಇಲ್ಲಿ ಚಾಲನೆ ದೊರೆಯಲಿದೆ.
ಅನಂತರ ಹೆಲಿಕಾಪ್ಟರ್ ಮೂಲಕ ಮೈಸೂರಿಗೆ ತೆರಳಲಿರುವ ಮೋದಿಯವರು ವಿಮಾನದ ಮೂಲಕ ಮಧ್ಯಾಹ್ನ 1.30ಕ್ಕೆ ಹುಬ್ಬಳ್ಳಿಯತ್ತ ಪ್ರಯಾಣ ಬೆಳೆಸಲಿದ್ದಾರೆ. ಮಧ್ಯಾಹ್ನ 2.45ರ ವೇಳೆಗೆ ಹುಬ್ಬಳ್ಳಿ ವಿಮಾನ ನಿಲ್ದಾಣ ತಲುಪಲಿರುವ ಮೋದಿ, ಅಲ್ಲಿಂದ ವಿಶೇಷ ಹೆಲಿಕಾಪ್ಟರ್ ಮೂಲಕ ಧಾರವಾಡದ ಚಿಕ್ಕಮಲ್ಲಿಗೆವಾಡದ ಐಐಟಿ ನೂತನ ಕ್ಯಾಂಪಸ್‌ಗೆ ಭೇಟಿ ನೀಡಲಿದ್ದಾರೆ.
ಸಂಜೆ 4 ಗಂಟೆಗೆ ‘ಐಐಟಿ ಧಾರವಾಡ’ದ ಕ್ಯಾಂಪಸ್, ಹುಬ್ಬಳ್ಳಿ ರೈಲು ನಿಲ್ದಾಣದಲ್ಲಿ ನಿರ್ಮಾಣಗೊಂಡಿರುವ ವಿಶ್ವದ ಅತಿ ಉದ್ದನೆಯ ಪ್ಲಾಟ್‌ಫಾರ್ಮ್ ನ್ನು ಮೋದಿಯವರು ಉದ್ಘಾಟನೆ ಮಾಡಲಿದ್ದಾರೆ. ಇದೇ ವೇಳೆ ಜಯದೇವ ಹೃದ್ರೋಗ ಆಸ್ಪತ್ರೆಗೆ ಶಂಕುಸ್ಥಾಪನೆ ಹಾಗೂ ವಿವಿಧ ರೈಲುಗಳಿಗೆ ಚಾಲನೆ ನೀಡಲಿದ್ದಾರೆ. ಬಳಿಕ ದೆಹಲಿಎ ವಾಪಸ್ಸಾಗಲಿದ್ದಾರೆ.