ಜೊತೆಗೂಡಿ ಕೆಲಸ ಮಾಡಿದರೆ ಮಾತ್ರ ಯಶಸ್ಸು; ಡಿ.ಕೆ.ಶಿವಕುಮಾರ್
ಬೆಂಗಳೂರು; ಜತೆಗೂಡುವುದು ಆರಂಭ, ಜತೆಗೂಡಿ ಚರ್ಚಿಸುವುದು ಪ್ರಗತಿ, ಜತೆಗೂಡಿ ಕೆಲಸ ಮಾಡುವುದು ಯಶಸ್ಸು. ಅದರಂತೆ ನೀವೆಲ್ಲರೂ ಒಟ್ಟಾಗಿ ಚರ್ಚೆ, ಕೆಲಸ ಮಾಡಿದರೆ ಯಶಸ್ಸು ಕಾಣುತ್ತೀರಿ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಬೆಂಗಳುರಿನಲ್ಲಿ ನಡೆದ ಉದ್ಯಮಿ ಒಕ್ಕಲಿಗರ ಸಮಾವೇಶದಲ್ಲಿ ಅವರು ಮಾತನಾಡಿದರು.ನೀವೆಲ್ಲ ಭೂಮಿ ತಾಯಿ ಮಕ್ಕಳು. ಒಕ್ಕಲಿಗರಾಗಿರುವುದೇ ನಮ್ಮ, ನಿಮ್ಮ ಭಾಗ್ಯ. ಭೂಮಿಗೂ ನಿಮಗೂ ಒಂದು ನಂಟಿದೆ. ಭೂಮಿಯನ್ನು ತಾಯಿ ಎಂದು ಪರಿಗಣಿಸಿರುವವರು ನಾವು. ಈ ಸಮಾಜಕ್ಕೆ ಕೃಷಿಕ, ಕಾರ್ಮಿಕ, ಶಿಕ್ಷಕ, ಸೈನಿಕ ಬಹಳ ಮುಖ್ಯ. ಇವರು ಇದ್ದರಷ್ಟೇ ಸಮಾಜ ಸುಸ್ಥಿರ.
ಒಕ್ಕಲಿಗ ಸಮಾಜದ ಉದ್ಯಮಿಗಳೆಲ್ಲರೂ ಇಲ್ಲಿ ಸೇರಿರುವುದು ಉತ್ತಮ ಬೆಳವಣಿಗೆ. ಹಿಂದೆಯೇ ಆಗಬೇಕಿದ್ದ ಸಮಾವೇಶ ಈಗಲಾದರೂ ನಡೆಯುತ್ತಿರುವುದು ಸಂತೋಷದ ವಿಚಾರ. ನೀವು ನಿಮ್ಮ ರಂಗದಲ್ಲಿ ಬೆಳೆಯಿರಿ. ನಿಮ್ಮೆಲ್ಲರ ಸಹಕಾರ, ಆಶೀರ್ವಾದದಿಂದ ನನಗೆ ನಿಮ್ಮ ಮುಂದೆ ನಿಂತು ಮಾತನಾಡುವ ಶಕ್ತಿ ಬಂದಿದೆ. ಈ ಮಧ್ಯೆ ಸಾಕಷ್ಟು ಪೆಟ್ಟುಗಳನ್ನು ಕೂಡ ತಿಂದಿದ್ದೇನೆ.
ನಾನು ಕಲ್ಲುಗಳ ಭೂಮಿಯಿಂದ ಬಂದಿದ್ದೇನೆ. ಕಲ್ಲು ಪ್ರಕೃತಿ, ಕಡೆದರೆ ಆಕೃತಿ, ಪೂಜಿಸಿದರೆ ಸಂಸ್ಕೃತಿ. ಅದೇ ರೀತಿ ನನಗೆ ಏಟು ಬಿದ್ದು, ನಿಮ್ಮ ಮುಂದೆ ನಿಂತಿದ್ದೇನೆ. ನಿಮ್ಮ ಬಳಿ ಕಲಿಯಲು ನನಗೆ ಆಸೆಯಿದೆ. ಬಿಡುವು ಮಾಡಿಕೊಂಡು ಬಂದು ನಿಮ್ಮ ಪರಿಚಯ ಮಾಡಿಕೊಂಡು ನನ್ನಿಂದಾಗುವ ಸಹಾಯ ಮಾಡುತ್ತೇನೆ. ಡಿ.ಕೆ. ಶಿವಕುಮಾರ್ ನಿಮ್ಮ ಜತೆ ಇದ್ದಾನೆ ಎಂದು ಸಂದೇಶ ರವಾನಿಸಲು ಬಂದಿದ್ದೇನೆ. ಆಹಾರ, ಶಿಕ್ಷಣ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿರುವ ಉದ್ಯಮಿಗಳನ್ನು ನೋಡಿದೆ. ನಮ್ಮ ಸಮಾಜದಲ್ಲಿ ದಯಾನಂದ ಸಾಗರ ಶಿಕ್ಷಣ ಸಂಸ್ಥೆ ಬಿಟ್ಟರೆ ಬೇರಾರೂ ಶಿಕ್ಷಣ ಕ್ಷೇತ್ರದಲ್ಲಿ ಇರಲಿಲ್ಲ. ಆದರೆ ಈಗ ಸುಮಾರು 20-25 ಮಂದಿ ಉತ್ತಮ ಶಿಕ್ಷಣ ಸಂಸ್ಥೆಗಳು, ಇಂಜಿನಿಯರಿಂಗ್ ಹಾಗೂ ಮೆಡಿಕಲ್ ಕಾಲೇಜು ಹೊಂದಿದ್ದಾರೆ. ಇವರೆಲ್ಲರಿಗೂ ಕಷ್ಟಕಾಲದಲ್ಲಿ ಸಹಾಯ ಮಾಡಬೇಕಾಗುತ್ತದೆ. ನಿಮಗೆ ಮಾರ್ಗದರ್ಶನ ಹಾಗೂ ಧೈರ್ಯ ತುಂಬುವ ಕೆಲಸ ಮಾಡಬೇಕಿದೆ.
ಎಸ್ ಎಂ ಕೃಷ್ಣ ಅವರ ಸರ್ಕಾರದಲ್ಲಿ ಶ್ರೀಕಂಠಯ್ಯನವರಿಗೆ ಕಂದಾಯ ಸಚಿವ ಸ್ಥಾನ ನೀಡಲಾಗಿತ್ತು. ಆಗ ಕೃಷ್ಣ ಅವರು ಶ್ರೀಕಂಠಯ್ಯ ಅವರ ಕಿವಿಯಲ್ಲಿ ಒಂದು ಮಾತು ಹೇಳಿದ್ದರು. ನಮ್ಮ ಸಮಾಜದವರು ಯಾರೇ ಸಹಾಯ ಕೇಳಿ ಬಂದರೂ ಅವರಿಗೆ ಸಹಾಯ ಮಾಡಬೇಕು ಎಂದಿದ್ದರು. ಅವರ ಕೈಗೆ ಅಧಿಕಾರ ಕೊಟ್ಟಾಗ ನೂರಾರು ಜನರಿಗೆ ಭೂಮಿಯನ್ನು ಹಂಚಿದ್ದರು. ನೀವು ಬೆಳೆಯಿರಿ, ನಿಮ್ಮ ಜೊತೆಯಲ್ಲಿರುವವರನ್ನೂ ಬೆಳೆಸಿರಿ. ನಾಯಕರುಗಳನ್ನು ಬೆಳೆಸಿರಿ. ಗೊಬ್ಬರ ನೀರು ಹಾಕಿದರಷ್ಟೇ ಗಿಡ ಬೆಳೆಯಲು ಸಾಧ್ಯ.
ನಾನು ರಾಜಕಾರಣಿಯಾದರೂ “By Birth I am an Agriculturist, By Profession I am a Businessman, By Choice I am an Educationist, By Passion I am a Politician. (ನಾನು ಹುಟ್ಟುತ್ತಾ ಕೃಷಿಕ, ವೃತ್ತಿಯಲ್ಲಿ ಉದ್ಯಮಿ, ಆಯ್ಕೆಯಲ್ಲಿ ಶಿಕ್ಷಣತಜ್ಞ, ಆಸಕ್ತಿಯಲ್ಲಿ ರಾಜಕಾರಣಿ)
ಇಂದು ಬೆಂಗಳೂರನ್ನು ವಿಶ್ವ ನೋಡುತ್ತಿದೆ. ಬೆಂಗಳೂರಿನ ಮುಖಾಂತರ ಭಾರತವನ್ನು ನೋಡುತ್ತಿದ್ದಾರೆ. ಇಲ್ಲಿರುವ ಮಾನವ ಸಂಪನ್ಮೂಲ, ನವೋದ್ಯಮ, ಶಿಕ್ಷಣ, ಆರೋಗ್ಯ, ಪರಿಸರ ಎಲ್ಲರ ಆಕರ್ಷಣೆಯಾಗಿದೆ. ಬೆಂಗಳೂರಿಗರು ಮೂವರನ್ನು ಸದಾ ನೆನೆಸಿಕೊಳ್ಳಬೇಕು. ನಾಡಪ್ರಭು ಕೆಂಪೇಗೌಡ, ಕೆಂಗಲ್ ಹನುಮಂತಯ್ಯ ಹಾಗೂ ಎಸ್.ಎಂ ಕೃಷ್ಣ ಅವರು ನಮ್ಮ ಸಮಾಜದವರೇ ಆಗಿದ್ದಾರೆ. ಬಾಲಗಂಗಾಧರನಾಥ ಶ್ರೀಗಳು ತಮ್ಮದೇ ಆದ ರೀತಿಯಲ್ಲಿ ಸಮಾಜಕ್ಕೆ ರಾಜಕೀಯವಾಗಿ ಹಾಗೂ ಇತರ ರೀತಿಯಲ್ಲಿ ಶಕ್ತಿ ತುಂಬಿದ್ದಾರೆ. ಈಗ ನಿರ್ಮಲಾನಂದ ಶ್ರೀಗಳು ಅವರ ಸ್ಥಾನ ತುಂಬಿದ್ದು, ಹಿಂದಿನವರಿಗಿಂತಲೂ ಉತ್ತಮವಾಗಿ ಸಮಾಜವನ್ನು ಬೆಳಗಿಸುವ ವಿಶ್ವಾಸ ನನಗಿದೆ.
ನಿಮ್ಮದು ಗಟ್ಟಿ ಧ್ವನಿಯಾಗಿರಲಿ. ಇಡೀ ಸಮಾಜವನ್ನು ಒಟ್ಟಾಗಿ ತೆಗೆದುಕೊಂಡು ಹೋಗುವ ಕೆಲಸ ಮಾಡಬೇಕು. ನಮ್ಮಂತಹವರು ತಪ್ಪು ಮಾಡಿದರೂ ನೇರವಾಗಿ ತಪ್ಪು ಎಂದು ಹೇಳುವ ಶಕ್ತಿ ನಿಮಗಿದೆ. ಒಕ್ಕಲಿಗರ ಸಂಘದವರನ್ನು ನೋಡಿದೆ. ಜೇನು ತಿನ್ನುತ್ತಾ ಕೂರುವುದು ಕಡಿಮೆಯಾಗಿದೆ. ನೀವು ಮುಂದೆ ಹತ್ತಾರು ಸಂಸ್ಥೆ ಕಟ್ಟಿ ಉದ್ಯೋಗ ಸೃಷ್ಟಿಸಿ, ಮಾರ್ಗದರ್ಶನ ನೀಡಬೇಕು. ಇನ್ನು ನಾಲ್ಕಾರು ಮೆಡಿಕಲ್ ಕಾಲೇಜು ಕಟ್ಟಿ ಎಂದು ಹೇಳಿದ್ದೇನೆ. ಮತ್ತೆ ಕಿತ್ತಾಡಿದರೆ ಆಡಳಿತಾಧಿಕಾರಿ ಬಂದು ಕೂರುತ್ತಾರೆ ಎಂದು ಹೇಳಿದ್ದೇನೆ. ನೀವೇ ನಮಗೆ ಆಸ್ತಿ. ನಿಮಗೆ ಒಳ್ಳೆಯದಾದರೆ ಸಾಕು. ನೀವು ನಾಯಕರಾಗಿ ಬೆಳೆಯುವುದಷ್ಟೇ ನಮಗೆ ಬೇಕು. ನಿಮ್ಮ ಸಮಾಜದ ವ್ಯಕ್ತಿಯಾಗಿ ನಾನಿಲ್ಲಿಗೆ ಬಂದಿದ್ದೇನೆ. ನಿಮ್ಮ ಮೂಲ, ನಿಮ್ಮ ಹಿರಿಯರು, ನಿಮ್ಮ ಕುಲವನ್ನು ಗಮನದಲ್ಲಿಟ್ಟುಕೊಂಡು ಕೆಲಸ ಮಾಡಿ ಎಂದು ಹೇಳಿದರು.