ಕೊರೊನಾ ನಿಯಂತ್ರಣಕ್ಕೆ ಲಾಕ್‌ಡೌನ್ ಪರಿಹಾರವಲ್ಲ; ಡಾ.ಕೆ.ಸುಧಾಕರ್
ಬೆಂಗಳೂರು: ಕೊರೊನಾ ನಿಯಂತ್ರಣಕ್ಕೆ ಮುಂಜಾಗ್ರತೆಯೇ ಉತ್ತಮ ಮದ್ದು. ಜನರು ಕೂಡಾ ಸಾಮಾಜಿಕ ಅಂತರ ಕಾಪಾಡಬೇಕು. ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಲಾಕ್‌ಡೌನ್ ಮೂಲಕ ಜನರಿಗೆ ತೊಂದರೆ ಕೊಟ್ಟು ಕೊರೊನಾ ನಿಯಂತ್ರಿಸುವುದು ಸರಿಯಲ್ಲ. ಪ್ರಧಾನಿ ಕೂಡಾ ಇದೇ ಮಾತನ್ನೇ ಹೇಳಿದ್ದು, ಸರ್ಕಾರ ಲಾಕ್‌ಡೌನ್ ಅಸ್ತ್ರ ಬಳಸುವುದಿಲ್ಲ ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಪರೋಕ್ಷವಾಗಿ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಅವರು, ಅನಗತ್ಯವಾಗಿ ಜನರು ಗುಂಪು ಸೇರುವುದು, ದೊಡ್ಡ ದೊಡ್ಡ ಸಮಾರಂಭಗಳನ್ನು ಮಾಡುವುದು ಬೇಡ. ಜನ ಸೇರುವುದರಿಂದಾಗಿ ಕೊರೊನಾ ಹರಡುತ್ತದೆ. ಹೀಗಾಗಿ ಆದಷ್ಟು ಜನ ಈ ರೀತಿ ಮಾಡುವುದನ್ನು ನಿಲ್ಲಿಸಬೇಕು. ಅಗತ್ಯವಿದ್ದರೆ ಮಾತ್ರ ಜನ ಮನೆಯಿಂದ ಹೊರಬರಬೇಕು ಎಂದು ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಹೇಳಿದರು.