ಕಾಂಗ್ರೆಸ್ ಪಾದಯಾತ್ರೆಗೆ ನಿಷೇಧ; ತಕ್ಷಣವೇ ಪಾದಯಾತ್ರೆ ನಿಲ್ಲಿಸಲು ಸೂಚನೆ..!
ಬೆಂಗಳೂರು: ಕಾಂಗ್ರೆಸ್ ನಡೆಸುತ್ತಿರುವ ಮೇಕೆದಾಟು ಪಾದಯಾತ್ರೆಯನ್ನು ತಕ್ಷಣವೇ ನಿಲ್ಲಿಸುವಂತೆ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಈ ಬಗ್ಗೆ ಸರ್ಕಾರದ ಮುಖ್ಯ ಕಾರ್ಯದರ್ಶಿ ರವಿಕುಮಾರ್ ಆದೇಶ ಹೊರಡಿಸಿದ್ದು, ತಕ್ಷಣವೇ ಪಾದಯಾತ್ರೆ ನಿಲ್ಲಿಸಬೇಕು. ಇಲ್ಲದಿದ್ದರೆ ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.
ಇಂದು ಬೆಳಗ್ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ್ದ ಹೈಕೋರ್ಟ್, ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿತ್ತು. ನೀವು ಪಾದಯಾತ್ರೆ ನಡೆಸಲು ಹೇಗೆ ಅವಕಾಶ ಕೊಟ್ಟಿದ್ದೀರಿ ಎಂದು ಪ್ರಶ್ನಿಸಿತ್ತು. ನಾಳೆ ಸಂಜೆಯೊಳಗೆ ಅಫಿಡವಿಟ್ ಸಲ್ಲಿಸುವಂತೆ ಸೂಚನೆ ನೀಡಿತ್ತು.
ಈ ಹಿನ್ನೆಲೆಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿಯವರು, ಆನ್‌ಲೈನ್ ಮೂಲಕ ಮುಖ್ಯ ಕಾರ್ಯದರ್ಶಿ ರವಿಕುಮಾರ್ ಅವರ ಜೊತೆ ಮಾತನಾಡಿದ್ದರು. ಇದಾದ ಮೇಲೆ ರವಿಕುಮಾರ್ ಅವರು, ಪಾದಯಾತ್ರೆಯನ್ನು ನಿಲ್ಲಿಸುವಂತೆ ಕಟ್ಟುನಿಟ್ಟಿನ ಆದೇಶ ಹೊರಡಿಸಿದಾರೆ. ಈ ಬಗ್ಗೆ ರಾಮನಗರ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ಸ್ಪಷ್ಟ ಸೂಚನೆ ನೀಡಲಾಗಿದ್ದು, ಪಾದಯಾತ್ರೆ ನಡೆಯದಂತೆ ನಿಲ್ಲಿಸಬೇಕು. ಅವರು ಪಾದಯಾತ್ರೆ ನಿಲ್ಲಿಸದಿದ್ದಕ್ಕೆ ಕಾನೂನು ರೀತ್ಯ ಕ್ರಮ ಕೈಗೊಳ್ಳಿ ಸೂಚಿಸಿದ್ದಾರೆ.