National

ಕಾಶಿ ವಿಶ್ವನಾಥ ದೇಗುಲ ಸಿಬ್ಬಂದಿಗೆ ಉಲ್ಲನ್‌ ಚಪ್ಪಲಿ ಕಳುಹಿಸಿದ ಪ್ರಧಾನಿ ಮೋದಿ

ವಾರಾಣಸಿ: ಇಲ್ಲಿ ಕಾಶಿ ವಿಶ್ವನಾಥ ಮಂದಿರದಲ್ಲಿ ಕೆಲಸ ಮಾಡುವ ನೂರಕ್ಕೂ ಹೆಚ್ಚು ಸಿಬ್ಬಂದಿಗೆ ಪ್ರಧಾನಿ ನರೇಂದ್ರ ಮೋದಿ ಉಡುಗೊರೆ ಕಳುಹಿಸಿಕೊಟ್ಟಿದ್ದಾರೆ. ಕಾಶಿ ವಿಶ್ವನಾಥ ಮಂದಿರದಲ್ಲಿ ಕೆಲಸ ಮಾಡುವವರು ಬರಿಗಾಲಲ್ಲಿ ಓಡಾಡುತ್ತಿರುವುದನ್ನು ನೋಡಿದ್ದ ಪ್ರಧಾನಿ ಮೋದಿಯವರು, ಉಲ್ಲನ್‌ ನಲ್ಲಿ ತಯಾರು ಮಾಡಿದ, ದೇಗುಲಗಳಲ್ಲಿ ಓಡಾಡಬಹುದಾದ ಚಪ್ಪಲಿಗಳನ್ನು ಕಳುಹಿಸಿಕೊಟ್ಟಿದ್ದಾರೆ.

ಚಪ್ಪಲಿ ತಯಾರಿಸುವವರಿಗೆ ಹೇಳಿ, ಉಲ್ಲನ್‌ನಲ್ಲಿ ಮೃದುವಾಗಿರುವ ಚಪ್ಪಲಿಗಳನ್ನು ಮಾಡಿಸಿ, ಸುಮಾರು ನೂರು ಜೊತೆ ಚಪ್ಪಲಿಗಳನ್ನು ಪ್ರಧಾನಿ ಮೋದಿ ಕಳುಹಿಸಿಕೊಟ್ಟಿದ್ದಾರೆ. ಇಂದು ದೇಗುಲದ ಸಿಬ್ಬಂದಿ ಈ ಚಪ್ಪಲಿಗಳನ್ನು ವಿತರಿಸಲಾಗಿದೆ. ದೇಗುಲದ ಆವರಣದಲ್ಲಿ ರಬ್ಬರ್‌ ಅಥವಾ ಚರ್ಮದ ಚಪ್ಪಲಿಗಳನ್ನು ಧರಿಸುವಂತಿಲ್ಲ. ಹೀಗಾಗಿ ಸಿಬ್ಬಂದಿ ಬರಿಗಾಲಲ್ಲಿ ಓಡಾಡುತ್ತಿದ್ದರು. ದೇಗುಲದ ಆವರಣದಲ್ಲಿ ಬಿಸಿಲಿದ್ದಾಗ ಓಡಾಡುವುದ ಕಷ್ಟ. ಹೀಗಾಗಿ ಉಲ್ಲನ್‌ ಚಪ್ಪಲಿಗಳನ್ನು ಧರಿಸುವಂತೆ ಪ್ರಧಾನಿ ಮೋದಿ ಸೂಚಿಸಿದ್ದು, ನೂರು ಜೊತೆ ಚಪ್ಪಲಿಗಳನ್ನು ಕಳುಹಿಸಿದ್ದಾರೆ.

ಇತ್ತೀಚೆಗಷ್ಟೇ ವಾರಾಣಸಿಯಲ್ಲಿ ಕಾಶಿ ವಿಶ್ವನಾಥ್‌ ದೇಗುಲ ಸೇರಿ ಹಲವು ದೇಗುಲಗಳನ್ನು ಪುನರ್‌ ಅಭಿವೃದ್ಧಪಡಿಸಲಾಗಿದೆ. ಇದಕ್ಕಾಗಿ ಮುನ್ನೂರು ಕೋಟಿ ರೂಪಾಯಿಗೂ ಹೆಚ್ಚು ಖರ್ಚು ಮಾಡಲಾಗಿತ್ತು. ಇತ್ತೀಚೆಗಷ್ಟೇ ಇದರ ಉದ್ಘಾಟನೆ ಕಾರ್ಯಕ್ರಮವೂ ನಡೆದಿತ್ತು. ಈ ವೇಳೆ ದೇಗುಲದ ಸಿಬ್ಬಂದಿ ಬರಿಗಾಲಲ್ಲಿ ನಡೆಯುತ್ತಿರುವುದನ್ನು ಪ್ರಧಾನಿ ನರೇಂದ್ರ ಮೋದಿ ವೀಕ್ಷಿಸಿದ್ದರು.

Share Post