ದಕ್ಷಿಣ ಕನ್ನಡ, ಉಡುಪಿಯಲ್ಲಿ ಪಡಿತರದಲ್ಲಿ ಕುಚ್ಚಲಕ್ಕಿ ವಿತರಣೆ; ಕೇಂದ್ರ ಅನುಮೋದನೆ
ಮಂಗಳೂರು: ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳ ಜನ ಸಾಮಾನ್ಯ ಅಕ್ಕಿಯ ಬದಲಾಗಿ ಕುಚ್ಚಲಕ್ಕಿ ಊಟ ಮಾಡುತ್ತಾರೆ. ಅಲ್ಲಿನ ಹವಾಮಾನಕ್ಕೆ ಅವರಿಗೆ ಕುಚ್ಚಲಕ್ಕಿಯೇ ಬೇಕು. ಆದ್ರೆ ಪಡಿತರ ರೂಪದಲ್ಲಿ ಸರ್ಕಾರ ಇದುವರೆಗೂ ಸಾಮಾನ್ಯ ಅಕ್ಕಿಯನ್ನೇ ಇಲ್ಲೂ ನೀಡಲಾಗುತ್ತಿತ್ತು. ಆದ್ರೆ ಇದೀಗ ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಪಡಿತರದಲ್ಲಿ ಕುಚ್ಚಲಕ್ಕಿ ನೀಡಲು ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ.
ಕೇಂದ್ರ ನೀಡಿರುವ ಅನುಮೋದನೆ ಪತ್ರದೊಂದಿಗೆ ಈ ವಿಚಾರವನ್ನು ಚಿಕ್ಕಮಗಳೂರು-ಉಡುಪಿ ಕ್ಷೇತ್ರದ ಸಂಸದೆ ಶೋಭಾ ಕರಂದ್ಲಾಜೆ ಟ್ವೀಟ್ ಮಾಡಿದ್ದಾರೆ. ಸ್ಥಳೀಯ ರೈತರ ಹಾಗೂ ದಕ್ಷಿಣ ಕನ್ನಡ, ಉಡುಪಿ ಜನರ ಬಹುಕಾಲದ ಬೇಡಿಕೆಯನ್ನು ಕೇಂದ್ರ ಸರ್ಕಾರ ಈಡೇರಿಸಿದೆ. ಹೀಗಾಗಿ ಕೇಂದ್ರ ಸರ್ಕಾರಕ್ಕೆ ಹಾಗೂ ಸಚಿವ ಪಿಯೂಷ್ ಗೋಯಲ್ ಅವರಿಗೆ ಶೋಭಾ ಕರಂಜ್ಲಾಜೆ ಧನ್ಯವಾದ ತಿಳಿಸಿದ್ದಾರೆ.
ದಕ್ಷಿಣ ಕನ್ನಡ ಹಾಗೂ ಉಡುಪಿ ಭಾಗದಲ್ಲಿ ಕಜೆ, ಜಯಾ, ಜ್ಯೋತಿ, ಪಂಚಮುಖಿ, ಸಹ್ಯಾದ್ರಿ ಹಾಗೂ ಉಮಾ ಸೇರಿದಂತೆ ಹಲವು ರೀತಿಯ ಕುಚ್ಚಲಕ್ಕಿ ತಳಿಯ ಭತ್ತವನ್ನು ಬೆಳೆಯುತ್ತಾರೆ. ಆದರೆ ಈ ಅಕ್ಕಿಯನ್ನು ಈ ಭಾಗದ ಜನರು ಮಾತ್ರ ತಿನ್ನುತ್ತಾರೆ. ಹೀಗಾಗಿ ಹೆಚ್ಚಿನ ಆದಾಯ ಕಡಿಮೆ. ಹೀಗಾಗಿ ಕೇಂದ್ರ ಸರ್ಕಾರವೇ ಕನಿಷ್ಠ ಬೆಂಬಲ ಬೆಲೆಗೆ ಈ ಕುಚ್ಚಲಕ್ಕಿಯನ್ನು ಖರೀದಿ ಮಾಡುತ್ತದೆ. ಅನಂತರ ಪಡಿತರದ ಮೂಲಕ ಬಡವರಿಗೆ ಉಚಿತವಾಗಿ ಕುಚಲಕ್ಕಿ ಹಂಚಲಾಗುತ್ತದೆ ಎಂದು ತಿಳಿದುಬಂದಿದೆ.