ʼಗೋಲ್ಡನ್ ಗ್ಯಾಂಗ್ʼ ಇಂದಿನಿಂದ ಜೀ ಕನ್ನಡದಲ್ಲಿ
ಬೆಂಗಳೂರು : ಗೋಲ್ಡನ್ ಸ್ಟಾರ್ ಗಣೇಶ್ ಅವರ ಹೊಸ ರಿಯಾಲಿಟಿ ಶೋ ಒಂದು ಇಂದಿನಿಂದ ಪ್ರಸಾರವಾಗಲಿದೆ. ಗೋಲ್ಡನ್ ಗ್ಯಾಂಗ್ ಶೀರ್ಷಿಕೆ ಹೊತ್ತು ಬರುತ್ತಿರುವ ಈ ಶೋ ಪ್ರಸಾರ ಆಗೋದು ಜೀ ಕನ್ನಡದಲ್ಲಿ. ಗಣೇಶ್ ಅವರ ನಿರೂಪಣೆಯಲ್ಲಿ ಬರುತ್ತಿರುವ ಹೊಸ ಶೋ ಇದಾಗಿದ್ದು ಸಾಕಷ್ಟು ಹೈಪ್ ಕ್ರಿಯೇಟ್ ಮಾಡಿದೆ.
ಸ್ನೇಹಿತರ ನಡುವಿನ ಸ್ವಾರಸ್ಯಕರ ವಿಷಯಗಳನ್ನು ಮೆಲುಕು ಹಾಕೋ ಶೋ ಇದಾಗಿದ್ದು, ಇಂದು ರಾತ್ರಿ ೯ರಿಂದ ಪ್ರತಿ ವಾರಾಂತ್ಯ ಪ್ರಸಾರವಾಗಲಿದೆ. ಸ್ನೇಹಿತರ ನಡುವೆ ನಡೆದ ತರ್ಲೆ, ತಮಾಷೆ, ತುಂಟಾಟ, ಮನಸ್ತಾಪ, ಜಗಳ ಎಲ್ಲವನ್ನು ಇಲ್ಲಿ ಹೇಳಲಾಗುವುದು.
ಸಿನಿಮಾ ಸಾಧಕರಿಂದ ಹಿಡಿದು, ಕ್ರೀಡಾ ಸಾಧಕರು, ರಾಜಕೀಯ ಗಣ್ಯರು, ಜನ ಸಾಮಾನ್ಯರು ಎಲ್ಲರನ್ನೂ ಇಲ್ಲಿ ಕರೆಸಿ ಅವರ ಸ್ನೇಹ ಜೀವನವನ್ನು ಸಂಭ್ರಮಿಸುವ ಕಾರ್ಯಕ್ರಮ ಇದಾಗಿದೆ.
ಇನ್ನು ಗೋಲ್ಡನ್ ಸ್ಟಾರ್ ಗಣೇಶ್ ಅವರು ಮೊದಲ ಬಾರಿಗೆ ಜೀ ಕನ್ನಡದಲ್ಲಿ ಶೋ ಮಾಡುತ್ತಿದ್ದಾರೆ. ಮೊದಲ ಸಂಚಿಕೆಗೆ ಅಥಿತಿಯಾಗಿ ತರುಣ್ ಸುಧೀರ್, ಪ್ರೇಮ್, ಶರಣ್ ಆಗಮಿಸಿದ್ದಾರೆ. ಈಗಾಗಲೇ ಪ್ರೋಮೊ ಬಿಡುಗಡೆಯಾಗಿದ್ದು ಸಾಕಷ್ಟು ಒಳ್ಳೆ ರೆಸ್ಪಾನ್ಸ್ ಬರುತ್ತಿದೆ.
ಗಣೇಶ್ ಅವರಿಗೆ ಕ್ರಿಕೆಟರ್ ಜಾವಗಲ್ ಶ್ರೀನಾಥ್, ಕುಂಬ್ಳೆ, ಸುನೀಲ್ ಜೋಶಿ, ಮತ್ತು ಇನ್ನು ಇತರರ ಸ್ನೇಹ ಕಥೆ ಕೇಳಲು ಕಾತುರರಾಗಿದ್ದಾರಂತೆ. ಇದಕ್ಕೆ ಸಂಬಂಧಿಸಿದಂತೆ ಈಗಾಗಲೇ ಕ್ರೀಡಾಪಟುಗಳ ಸಂಪರ್ಕ ಮಾಡುತ್ತಿದ್ದು ಸದ್ಯದಲ್ಲಿಯೇ ಸಾಧ್ಯವಾಗಿಸುವ ಬಗ್ಗೆ ಗಣೇಶ್ ಹೇಳಿಕೊಂಡಿದ್ದಾರೆ.
ಜೀ ಕನ್ನಡದ ಜನಪ್ರೀಯ ಕಾರ್ಯಕ್ರಮವಾದ ವೀಕೆಂಡ್ ರಮೇಶ್ ಸಾಕಷ್ಟು ಹೆಸರು ಮಾಡಿತ್ತು. ಈಗ ಮತ್ತೆ ಅಂತಹದ್ದೇ ಜನಪ್ರೀಯತೆ ಗಳಿಸಲು ಗೋಲ್ಡನ್ ಗ್ಯಾಂಗ್ ಸಜ್ಜಾದಂತೆ ಕಣಿಸುತ್ತಿದೆ. ಈ ಕಾರ್ಯಕ್ರಮ ರೂಪಿಸಲು ಗಣೇಶ್ ಸೇರಿದಂತೆ ತಂಡದವರೆಲ್ಲರೂ 8 ತಿಂಗಳು ಕೆಲಸ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.