ಎಐಎಡಿಎಂಕೆ ಮಾಜಿ ಸಚಿವನ ವಿರುದ್ಧ ಲುಕ್‌ಔಟ್ ನೊಟೀಸ್
ತಮಿಳುನಾಡು: ವಂಚನೆ ಪ್ರಕರಣದಲ್ಲಿ ಎಐಎಡಿಎಂಕೆ ಮಾಜಿ ಸಚಿವ ರಾಜೇಂದ್ರ ಬಾಲಾಜಿ ವಿರುದ್ಧ ಲುಕ್‌ಔಟ್ ನೊಟೀಸ್ ಜಾರಿಯಾಗಿದೆ. ಆಗಸ್ಟ್ 2016 ರಿಂದ 2021ರವರೆಗೆ ಕೆ.ಟಿ.ರಾಜೇಂದ್ರ ಬಾಲಾಜಿ ತಮಿಳುನಾಡು ಹಾಲು ಮತ್ತು ಡೈರಿ ಅಭಿವೃದ್ಧಿ ಸಚಿವ ಖಾತೆಯನ್ನು ನಿರ್ವಹಿಸಿದ್ರು.
ಈ ವೇಳೆ ಆವಿನ್‌ನಲ್ಲಿ ಉದ್ಯೋಗ ಕೊಡಿಸುವುದಾಗಿ ನಂಬಿಸಿ ಸುಮಾರು 23ಮಂದಿ ಬಳಿ ಹಣ ಸುಲಿಗೆ ಮಾಡಿದ್ದಾರೆ. ಕೆಲಸ ಭರವಸೆ ನೀಡಿ ವಂಚಿಸಿದ್ದಾಗಿ ಸಚಿವರು ಹಾಗೂ ಸಹಚರರ ವಿರುದ್ಧ ಮೊದಲನೇ ಪ್ರಕರಣ ದಾಖಲಾಯಿತು. ನಂತರ ಇವರ ಬಳಿ ಹಣ ವಸೂಲಿ ಮಾಡುವ ವಿಚಾರವಾಗಿ ನನ್ನನ್ನು ಬಳಸಿಕೊಂಡಿದ್ದಾನೆ ಎಂದು ಸಚಿವನ ಸಹಚರ ನಲ್ಲತಂಬಿ ಎರಡನೇ ಪ್ರಕರಣವನ್ನು ದಾಖಲಿಸಿದ್ದಾರೆ.
ಈ ವಂಚನೆ ಪ್ರಕರಣದಲ್ಲಿ ಬಂಧನದಿಂದ ತಪ್ಪಿಸಿಕೊಳ್ಳಲು ತಲೆಮರೆಸಿಕೊಂಡಿರುವ ಮಾಜಿ ಸಚಿವನ ವಿರುದ್ಧ ವಿರುದನಗರ ಪೊಲೀಸರು ದೇಶ ಬಿಟ್ಟು ಹೋಗದಂತೆ ನೊಟೀಸ್ ಜಾರಿಮಾಡಿದ್ದಾರೆ. ಬಂಧನವಾಗದಂತೆ ಹೈಕೋರ್ಟ್‌ನಲ್ಲಿ ರಾಜೇಂದ್ರ ಅವರು ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಿದ್ರು.
ಹೈಕೋರ್ಟ್‌ನಲ್ಲಿ ಜಾಮೀನು ಅರ್ಜಿ ವಜಾ ಆಗ್ತಿದ್ದಂತೆ ಮಾಜಿ ಸಚಿವ ಎಸ್ಕೇಪ್ ಆಗಿದ್ದಾರೆ. ಈಗ ಅವರಿಗಾಗಿ 8ವಿಶೇಷ ತಂಡಗಳನ್ನು ನಿಯೋಜನೆ ಮಾಡಲಾಗಿದೆ. ಅದರಲ್ಲಿ ಒಂದು ತಂಡ ಬೆಂಗಳೂರಿನಲ್ಲಿ ಬೀಡು ಬಿಟ್ಟಿದೆ. ಈಗಾಗಲೇ ರಾಜೇಂದ್ರ ಅವರ ಎಲ್ಲಾ ಖಾತೆಗಳನ್ನು ಸ್ಥಗಿತಗೊಳಿಸಿ ವಂಚಕ ಸಚಿವನಿಗಾಗಿ ಪೊಲೀಸರು ಬಲೆ ಬೀಸಿದ್ದಾರೆ.