ಸಿಲಿಕಾನ್ ಸಿಟಿ ಈಗ ಥಂಡಾ ಥಂಡಾ ಕೂಲ್ ಕೂಲ್
ಬೆಂಗಳೂರು: ನಗರದಲ್ಲಿ ಇಷ್ಟು ದಿನ ಮಳೆ ಸುರಿಯುತಿತ್ತು. ಸ್ವಲ್ಪ ದಿನಗಳಿಂದ ಬಿಡುವು ಕೊಟ್ಟಿದೆ. ಹೀಗಾಗಿ ಎಲ್ಲೆಡೆ ವಿಪರೀತ ಚಳಿ ಆವರಿಸಿಕೊಂಡಿದೆ. ಈ ಮೂರು ದಿನಗಳಿಂದ ನಗರಲ್ಲಿ ತುಂಬಾ ಚಳಿಯಿದ್ದು, ಜನರು ಹೈರಾಣು ಆಗಿದ್ದಾರೆ. ಇಂಥ ಚಳಿ ನೋಡಿ ಬಹುತೇಕ ಜನರಿಗೆ ದೆಹಲಿ ಅಥವಾ ಹಿಮಾಚಲ ಪ್ರದೇಶದಲ್ಲಿ ಇದ್ದೇವೆ ಅನಿಸುವುದು ಸಹಜ. ಚಳಿ ಹೆಚ್ಚಾಗಿರುವುದರಿಂದ ವೈರಲ್ ಜ್ವರ, ಶೀತ, ತಲೆನೋವು, ಉಸಿರಾಟದ ತೊಂದರೆ, ಮೈಕೈ ನೋವು ಮುಂತಾದ ಆರೋಗ್ಯ ಸಮಸ್ಯೆಗಳೂ ಹೆಚ್ಚಾಗುತ್ತಿದೆ. ಕರ್ನಾಟಕದಲ್ಲಿ ಮಳೆ ಕಡಿಮೆಯಾಗಿದ್ದರೂ ಬೇರೆ ರಾಜ್ಯಗಳಲ್ಲಿ ಇನ್ನೂ ಮಳೆ ಸಂಪೂರ್ಣವಾಗಿ ಕಡಿಮೆಯಾಗಿಲ್ಲ.
ರಾಜ್ಯಗಳಲ್ಲಿ ಇಂದಿನಿಂದ 3 ದಿನಗಳ ಕಾಲ ಮಳೆಯಾಗಲಿದೆ ಎಂದು ಭಾರತ ಹವಾಮಾನ ಇಲಾಖೆ ತಿಳಿಸಿದೆ.ಅರುಣಾಚಲ ಪ್ರದೇಶ, ಅಸ್ಸಾಂ, ಮೇಘಾಲಯ, ನಾಗಾಲ್ಯಾಂಡ್, ಮಣಿಪುರ, ಮಿಜೋರಾಂ ಮತ್ತು ತ್ರಿಪುರಾದಲ್ಲಿ ಮಳೆಯಾಗಲಿದೆ. ಹೀಗಾಗಿ ಜಮ್ಮು ಮತ್ತು ಕಾಶ್ಮೀರ, ಲಡಾಖ್, ಗಿಲ್ಗಿಟ್-ಬಾಲ್ಟಿಸ್ತಾನ್, ಮುಜಫರಾಬಾದ್ ಮತ್ತು ಹಿಮಾಚಲ ಪ್ರದೇಶದಲ್ಲಿ ಮಳೆ ಮತ್ತು ಹಿಮಪಾತದ ಸಾಧ್ಯತೆಯಿದೆ.
ಇನ್ನು ಕೊಡಗು, ಶಿವಮೊಗ್ಗ, ಬೆಂಗಳೂರು, ಮೈಸೂರು, ಉತ್ತರ ಕನ್ನಡ, ದಕ್ಷಿಣ ಕನ್ನಡ, ಉಡುಪಿ, ಹಾಸನ ಜಿಲ್ಲೆಗಳಲ್ಲಿ ಚಳಿ ವಿಪರೀತ ಹೆಚ್ಚಾಗಿದೆ. ಸದಾ ಬಿಸಿಲಿನಿಂದ ಕೂಡಿರುವ ಉತ್ತರ ಕರ್ನಾಟಕದಲ್ಲೂ ಚಳಿ ವಿಪರೀತವಾಗಿದೆ. ಉತ್ತರ ಕರ್ನಾಟಕದ ಧಾರವಾಡ, ಹುಬ್ಬಳ್ಳಿ, ಬೀದರ್, ಕಲಬುರ್ಗಿ, ರಾಯಚೂರು, ಕೊಪ್ಪಳ, ವಿಜಯಪುರ, ಬಾಗಲಕೋಟೆಯಲ್ಲಿ ಇನ್ನೂ 3 ದಿನ ಚಳಿ ಹೆಚ್ಚಾಗಲಿದೆ.
ಇಂದಿನಿಂದ ಡಿಸೆಂಬರ್ 25ರವರೆಗೆ ಪಶ್ಚಿಮ ಹಿಮಾಲಯನ್ ಪ್ರದೇಶದಲ್ಲಿ ಲಘುವಾಗಿ ಮಳೆ ಮತ್ತು ಹಿಮಪಾತವಾಗುವ ಸಾಧ್ಯತೆಯಿದೆ. ಇಂದಿನಿಂದ ಡಿಸೆಂಬರ್ 25ರವರೆಗೆ ಪಂಜಾಬ್ ಮತ್ತು ಹರಿಯಾಣದ ಕೆಲವು ಭಾಗಗಳಲ್ಲಿ ಮತ್ತು ಡಿಸೆಂಬರ್ 24 ಮತ್ತು 25ರಂದು ಪಶ್ಚಿಮ ರಾಜಸ್ಥಾನದ ಮೇಲೆ ದಟ್ಟವಾದ ಮಂಜು ಇರುತ್ತದೆ.