ವಿಧಾನಮಂಡಲದಲ್ಲಿ ಇಂದು ಮತಾಂತರ ನಿಷೇಧ ಕಾಯ್ದೆ ಮಂಡನೆ
ಬೆಳಗಾವಿ: ಧಾರ್ಮಿಕ ಸ್ವಾತಂತ್ರ್ಯ ಸಂರಕ್ಷಣೆ ಹಕ್ಕು ಕಾಯ್ದೆ– 2021ಯನ್ನು ಇಂದು ಬೆಳಗಾವಿ ಸುವರ್ಣ ವಿಧಾಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ಮಂಡಿಸಲಾಗುತ್ತದೆ. ರಾಜ್ಯದಲ್ಲಿ ಮತಾಂತರಕ್ಕೆ ತಡೆ ನೀಡುವ ಸಲುವಾಗಿ ಈ ಕಾಯ್ದೆ ಜಾರಿಗೆ ತರಲಾಗುತ್ತಿದೆ. ನಿನ್ನೆ ಈ ಕಾಯ್ದೆ ಸಚಿವ ಸಂಪುಟ ಸಭೆಯಲ್ಲಿ ಅನುಮೋದನೆ ನೀಡಲಾಗಿದೆ. ಹೀಗಾಗಿ ಇಂದು ವಿಧಾನಮಂಡಲದಲ್ಲಿ ಈ ಕಾಯ್ದೆ ಮಂಡನೆ ಮಾಡಲಾಗುತ್ತದೆ.
ವಿರೋಧ ಪಕ್ಷಗಳು ಇದನ್ನು ವಿರೋಧಿಸುತ್ತಿದ್ದು, ಸದನದಲ್ಲಿ ಈ ವಿಚಾರವಾಗಿ ಗದ್ದಲ ಏರ್ಪಡುವ ಸಾಧ್ಯತೆ ಇದೆ.
ಮತಾಂತರ ಮಸೂದೆಯನ್ನು ಕರಡು ರೂಪದಲ್ಲೇ ಮಂಡಿಸಲಾಗುತ್ತದೆ ಎಂದು ಹೇಳಲಾಗುತ್ತಿದೆ. ಈ ಕಾಯ್ದೆ ಜಾರಿಯಾದರೆ, ಎಸ್ಸಿ, ಎಸ್ಟಿ, ಅಪ್ರಾಪ್ತ ವಯಸ್ಕರು, ಮಹಿಳೆಯರು, ಬುದ್ಧಿಮಾಂದ್ಯರನ್ನು ಮತಾಂತರ ಮಾಡಿದವರಿಗೆ ಕನಿಷ್ಠ 3 ವರ್ಷದಿಂದ 10 ವರ್ಷದವರೆಗೆ ಜೈಲು ಶಿಕ್ಷೆಯಾಗಲಿದೆ. ಜೊತೆಗೆ 50 ಸಾವಿರ ರೂಪಾಯಿ ದಂಡ ವಿಧಿಸಲು ಈ ಕಾಯ್ದೆಯಲ್ಲಿ ಅವಕಾಶವಿದೆ.