ಶ್ರೀಲಂಕಾ ನೌಕಾಪಡೆ ವಶಕ್ಕೆ ತಮಿಳುನಾಡು ಮೀನುಗಾರರು
ರಾಮೇಶ್ವರಂ: ತಮಿಳುನಾಡು ಮೂಲದ 55ಮೀನುಗಾರರು ಹಾಗೂ 8ದೋಣಿಗಳನ್ನು ಶ್ರೀಲಂಕಾ ನೌಕಾಪಡೆ ವಶಪಡಿಸಿಕೊಂಡಿರುವ ಘಟನೆ ಭಾರತ-ಲಂಕಾ ಜಲಗಡಿಯಲ್ಲಿ ನಡೆದಿದೆ. ಗಡಿಯಲ್ಲಿ ತಮ್ಮಷ್ಟಕ್ಕೆ ಮೀನುಗಾರಿಕೆ ಮಾಡ್ತಿದ್ದವರನ್ನು ಶ್ರೀಲಂಕಾ ನೌಕಾಪಡೆಯ ಸಿಬ್ಬಂದಿ ವಶಕ್ಕೆ ಪಡೆದಿದೆ ಜೊತೆಗೆ ಮೀನುಗಾರಿಕೆಗೆ ಬಳಸುತ್ತಿದ್ದ 8ಬೋಟ್‌ಗಳನ್ನೂ ಸಹ ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಕೂಡಲೇ ಸ್ಪಂದಿಸಿದ್ದಾರೆ. ವಿದೇಶಾಂಗ ಸಚಿವ ಎಸ್.ಜೈಶಂಕರ್ ಅವರೊಂದಿಗೆ ಮಾತುಕತೆ ನಡೆಸಿ, ಶ್ರೀಲಂಕಾ ನೌಕಪಡೆ ವಶದಲ್ಲಿರುವ ಮೀನುಗಾರರು ಹಾಗೂ ದೋಣಿಗಳನ್ನು ಬಿಡಲು ಕ್ರಮ ಕೈಗೊಳ್ಳುವಂತೆ ನಮವಿ ಮಾಡಿಕೊಂಡಿದ್ದಾರೆ. ಸ್ಟಾಲಿನ್ ಮನವಿಗೆ ಸ್ಪಂದಿಸಿದ ವಿದೇಶಾಂಗ ಸಚಿವರು ಕೂಡಲೇ ಬಿಡುಗಡೆಗೆ ಸಕಲ ಸಿದ್ಧತೆ ಮಾಡುವುದಾಗಿ ಭರವಸೆ ಕೂಡ ನೀಡಿದ್ದಾರೆ. ಮೊದಲು ರಾಮೇಶ್ವರಂನಿಂದ 43ಮೀನುಗಾರರು 6ಬೋಟ್‌ಗಳನ್ನು ವಶಪಡಿಸಿಕೊಂಡ ನೌಕಾಪಡೆ ಬಳಿಕ ಮಂಡಪಂ ಬಳಿ 12ಮೀನುಗಾರರು 2 ದೋಣಿಗಳನ್ನು ತಮ್ಮ ಸುಪರ್ದಿಗೆ ತೆಗೆದುಕೊಂಡಿದೆ. ಈ ಬಗ್ಗೆ ಮಂಡಪಂ ಬಳಿಯಿರುವ ಮೀನುಗಾರರ ಸಂಘ ವಶಪಡಿಸಿಕೊಂಡಿರುವ ಮೀನುಗಾರರು ಹಾಗೂ ದೋಣಿಗಳನ್ನು ಬಿಡುವಂತೆ ಪ್ರತಿಭಟನೆ ಕೂಡಾ ಮಾಡಿದ್ದಾರೆ. ಬಿಡದಿದ್ದಲ್ಲಿ ಅನಿರ್ದಿಷ್ಟಾವಧಿ ಮುಷ್ಕರ ನಡೆಸುವುದಾಗಿ ಎಚ್ಚರಿಕೆ ನೀಡಿದ್ದಾರೆ. ಇನ್ನು ವಶಪಡಿಸಿಕೊಂಡಿರುವ ಮೀನಗಾರರನ್ನು ದ್ವೀಪ ರಾಷ್ಟ್ರದ ಕಂಗೆಸಂತುರೈ ಶಿಬಿರಕ್ಕೆ ಕರೆದೊಯ್ದಿದ್ದಾರೆ ಎಂದು ಮೀನುಗಾರರ ಸಂಘದ ನಾಯಕ ಮತ್ತು ಅಧಿಕಾರಿಗಳು ತಿಳಿಸಿದ್ದಾರೆ.