ಭಾರಿ ಮಳೆ ಹಿನ್ನೆಲೆ; ಬೆಂಗಳೂರಿನಲ್ಲಿ ಶಾಲೆಗಳಿಗೆ ರಜೆ
ಬೆಂಗಳೂರು; ಬೆಂಗಳೂರಿನಲ್ಲಿ ಕಳೆದ ಭಾರೀ ಮಳೆಯಾಗಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ.. ಜೊತೆಗೆ ಇಂದು ಬೆಳಗ್ಗೆಯೂ ಮಳೆಯಾಗುತ್ತಿದೆ.. ಈ ಹಿನ್ನೆಲೆಯಲ್ಲಿ ನಗರದಲ್ಲಿರುವ ಎಲ್ಲಾ ಅಂಗನವಾಡಿ ಹಾಗೂ ಶಾಲೆಗಳಿಗೆ ರಜೆ ಘೋಷಣೆ ಮಾಡಿ ಬೆಂಗಳೂರು ನಗರ ಜಿಲ್ಲಾಧಿಕಾರಿ ಆದೇಶ ಹೊರಡಿಸಿದ್ದಾರೆ..
ಅಂಗನವಾಡಿ, ಎಲ್ಕೆಜಿ, ಯುಕೆಜಿಯಿಂದ ಹತ್ತನೇ ತರಗತಿವರೆಗೆ ರಜೆ ಘೋಷಣೆ ಮಾಡಲಾಗಿದೆ.. ಖಾಸಗಿ ಹಾಗೂ ಸರ್ಕಾರಿ ಶಾಲೆಗಳಿಗೆ ಈ ಆದೇಶ ಅನ್ವಯವಾಗಲಿದೆ.. ಇವತ್ತು ಒಂದು ದಿನ ಮಾತ್ರ ರಜೆ ಘೋಷಣೆ ಮಾಡಲಾಗಿದೆ.. ನಾಳಿನ ಪರಿಸ್ಥಿತಿ ನೋಡಿಕೊಂಡು ನಂತರ ತೀರ್ಮಾನ ಮಾಡಲಾಗುತ್ತದೆ..
ಇನ್ನು ಮಳೆ ವಿಪರೀತವಾಗುತ್ತಿರುವುದರಿಂದ ಹಳೆಯ ಕಟ್ಟಡಗಳು, ಶಿಥಿಲಗೊಂಡ ಮನೆಗಳ ಗೋಡೆಗಳು ಸಾಕಷ್ಟು ನೆನೆದಿರುತ್ತವೆ.. ಹೀಗಾಗಿ ಅಂತಹ ಕಟ್ಟಡ ಕೊಠಡಿಗಳನ್ನು ಪಾಠ ಮಾಡಲು ಬಳಸಬಾರದು ಎಂದು ಜಿಲ್ಲಾಧಿಕಾರಿ ಆದೇಶದಲ್ಲಿ ತಿಳಿಸಿದ್ದಾರೆ.. ಇನ್ನು ಮಳೆಯಿಂದಾಗಿ ರಜೆ ನೀಡಿದ್ದರಿಂದ ಪಾಠ ಪ್ರವಚನಗಳು ಕುಂಠಿತವಾಗುವುದಾದರೆ ಶನಿವಾರ ಮಧ್ಯಾಹ್ನ ಅಥವಾ ಭಾನುವಾರ ಹೆಚ್ಚುವರಿ ತರಗತಿ ನಡೆಸಬಹುದು ಎಂದು ಜಿಲ್ಲಾಧಿಕಾರಿ ಸೂಚನೆ ನೀಡಿದ್ದಾರೆ..
ಇನ್ನು ಸಾರ್ವಜನಿಕರು ಅಗತ್ಯವಿದ್ದರೆ ಮಾತ್ರ ಮನೆಯಿಂದ ಹೊರಬನ್ನಿ ಎಂದು ಬಿಬಿಎಂಪಿ ಮನವಿ ಮಾಡಿಕೊಂಡಿದೆ.. ಆದಷ್ಟು ಮನೆಯಲ್ಲೇ ಇದ್ದು, ಕಿಟಕಿ, ಬಾಗಿಲು ಮುಚ್ಚಿ ಎಂದು ಬಿಬಿಎಂಪಿ ಅಧಿಕಾರಿಗಳು ಹೇಳಿದ್ದಾರೆ.. ಸುರಕ್ಷಿತ ಸ್ಥಳಗಳಲ್ಲಿ ಆಶ್ರಯ ಪಡೆಯಬೇಕು, ಮರಗಳ ಕೆಳಗೆ ನಿಲ್ಲಬೇಡಿ, ಕಾಂಕ್ರೀಟ್ ಗೋಡೆಗಳಿಗೆ ಒರಗಬೇಡಿ, ತಗ್ಗುಪ್ರದೇಶಗಳು, ನೀರು ಹರಿಯುತ್ತಿರುವ ಪ್ರದೇಶಗಳಿಗೆ ಹೋಗಬೇಡಿ ಎಂದು ಸೂಚನೆ ನೀಡಲಾಗಿದೆ..