BengaluruPolitics

ಚನ್ನಪಟ್ಟಣವನ್ನು ಡಿಕೆಶಿ ಪ್ರತಿಷ್ಠೆಯಾಗಿ ತೆಗೆದುಕೊಂಡಿರುವುದೇಕೆ..?; ನಿಜವಾಗಿಯೂ ಸ್ಪರ್ಧೆ ಮಾಡ್ತಾರಾ..?

ಬೆಂಗಳೂರು;  ಮಾಜಿ ಸಿಎಂ ಹಾಗೂ ಕೇಂದ್ರ ಸಚಿವ ಕುಮಾರಸ್ವಾಮಿಯವರು ಮಂಡ್ಯ ಲೋಕಸಭಾ ಕ್ಷೇತ್ರದಿಂದ ಗೆದ್ದಿದ್ದರಿಂದ ಚನ್ನಪಟ್ಟಣ ಕ್ಷೇತ್ರದ ತಮ್ಮ ವಿಧಾನಸಭಾ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದಾರೆ.. ಹೀಗಾಗಿ ಇಲ್ಲಿ ಉಪಚುನಾವಣೆ ನಡೆಯಲಿದೆ.. ಚುನಾವಣೆ ದಿನಾಂಕ ಇನ್ನೂ ಘೋಷಣೆಯಾಗಿಲ್ಲ.. ಆದ್ರೆ ಚನ್ನಪಟ್ಟಣದಲ್ಲಿ ಅದಾಗಲೇ ರಾಜಕೀಯ ಚಟುವಟಿಕೆ ಚುರುಕುಗೊಂಡಿದೆ.. ಡಿಸಿಎಂ ಡಿ.ಕೆ.ಶಿವಕುಮಾರ್‌ ಈಗಾಗಲೇ ಚನ್ನಪಟ್ಟಣಕ್ಕೆ ಭೇಟಿ ನೀಡಿ, ಅಲ್ಲಿನ ಕಾರ್ಯಕರ್ತರೊಂದಿಗೆ ಚರ್ಚೆ ನಡೆಸಿದ್ದರು.. ಅವರೇ ಚನ್ನಪಟ್ಟಣದಿಂದ ಸ್ಪರ್ಧೆ ಮಾಡಿ ಗೆಲ್ಲುವುದು, ಅನಂತರ ಕನಕಪುರವನ್ನು ಡಿ.ಕೆ.ಸುರೇಶ್‌ ಬಿಟ್ಟುಕೊಡಲಾಗುತ್ತದೆ ಎಂಬ ಮಾತುಗಳು ಕೇಳಿಬರುತ್ತಿವೆ.. ಇದಕ್ಕೆ ಪುಷ್ಠಿ ಎಂಬಂತೆ ಡಿ.ಕೆ.ಶಿವಕುಮಾರ್‌ ಇಂದು ಮತ್ತೆ ಚನ್ನಪಟ್ಟಣಕ್ಕೆ ಭೇಟಿ ನೀಡುತ್ತಿದ್ದಾರೆ.. ಹೀಗಾಗಿ ಅಲ್ಲಿನ ರಾಜಕೀಯ ಚಟುವಟಿಕೆ ಸಾಕಷ್ಟು ಕುತೂಹಲಕ್ಕೆ ಕಾರಣವಾಗುತ್ತಿದೆ..

ಈ ಮೊದಲು ಸಾತನೂರು ವಿಧಾನಸಭಾ ಕ್ಷೇತ್ರವಿದ್ದಾಗ ಚನ್ನಪಟ್ಟಣದ ಕೆಲ ಪ್ರದೇಶಗಳು ಆ ಕ್ಷೇತ್ರಕ್ಕೆ ಸೇರಿದ್ದವು.. ಆಗ ಸಾತನೂರು ವಿಧಾನಸಭಾ ಕ್ಷೇತ್ರವನ್ನು ಡಿ.ಕೆ.ಶಿವಕುಮಾರ್‌ ಅವರೇ ಪ್ರತಿನಿಧಿಸುತ್ತಿದ್ದರು.. ಹೀಗಾಗಿ ಉಪಚುನಾವಣೆಯಲ್ಲಿ ಸ್ಪರ್ಧೆ ಮಾಡಿದರೆ ಗೆಲುವು ತಮ್ಮದಾಗಬಹುದು ಎಂಬ ಲೆಕ್ಕಾಚಾರ ಡಿ.ಕೆ.ಶಿವಕುಮಾರ್‌ ಅವರದ್ದಾಗಿರಬಹುದು.. ಆದ್ರೆ ಚನ್ನಪಟ್ಟಣದಲ್ಲಿ ಸದ್ಯದ ಪರಿಸ್ಥಿತಿಯಲ್ಲಿ ಬಿಜೆಪಿ ಹಾಗೂ ಜೆಡಿಎಸ್‌ ಪಕ್ಷಗಳು ಸ್ಟ್ರಾಂಗ್‌ ಇವೆ.. ಎರಡೂ ಪಕ್ಷಗಳು ಸೇರಿ ಒಬ್ಬ ಅಭ್ಯರ್ಥಿಯನ್ನು ಕಣಕ್ಕಿಳಿಸುತ್ತವೆ.. ಆ ಅಭ್ಯರ್ಥಿಯನ್ನು ಎದುರಿಸುವುದು ಕಷ್ಟ ಎಂದೇ ಹೇಳಲಾಗುತ್ತಿದೆ.. ಇದರ ನಡುವೆಯೂ ಡಿ.ಕೆ.ಶಿವಕುಮಾರ್‌ ರಾಜಕೀಯ ತಂತ್ರಗಾರಿಕೆ ಶುರು ಮಾಡಿದ್ದಾರೆ.. ತಮ್ಮ ಸಹೋದರನ ಸೋಲಿಗೆ ಕುಮಾರಸ್ವಾಮಿ ಹಾಗೂ ಯೋಗೇಶ್ವರ್‌ ಕಾರಣ.. ಹೀಗಾಗಿ, ಚನ್ನಪಟ್ಟಣದಲ್ಲಿ ಅವರಿಗೆ ಸೋಲುಣಿಸಿ ಸೇಡು ತೀರಿಸಿಕೊಳ್ಳಲು ಡಿ.ಕೆ.ಶಿವಕುಮಾರ್‌ ಸರ್ಕಸ್‌ ನಡಸುತ್ತಿರುವಂತೆ ಕಾಣುತ್ತಿದೆ..

ಒಂದು ಮೂಲದ ಪ್ರಕಾರ ನಾನೇ ಚನ್ನಪಟ್ಟಣದಲ್ಲಿ ಸ್ಪರ್ಧೆ ಮಾಡುತ್ತೇನೆ ಎಂದು ಡಿ.ಕೆ.ಶಿವಕುಮಾರ್‌ ಹೇಳಿದ್ದರೂ ಕೂಡಾ ಸಹೋದರ ಡಿ.ಕೆ.ಸುರೇಶ್‌ಗೆ ಅಖಾಡ ರೆಡಿ ಮಾಡಿಕೊಡಲು ಈ ತಂತ್ರ ಹೂಡಿದ್ದಾರೆ ಎನ್ನಲಾಗಿದೆ.. ಲೋಕಸಭಾ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದಲ್ಲಿ ಕುಮಾರಸ್ವಾಮಿ ಸ್ಪರ್ಧೆ ಮಾಡೋದಿಲ್ಲ ಎಂದು ಹೇಳುತ್ತಾ ಬಂದಿದ್ದರು.. ಮೊದಲಿಗೆ ನಿಖಿಲ್‌ ಕುಮಾರಸ್ವಾಮಿ ಹೆಸರನ್ನು ಮುನ್ನೆಲೆಗೆ ತರಲಾಗಿತ್ತು.. ಅನಂತರ ಪುಟ್ಟರಾಜು ಹೆಸರನ್ನು ಚಾಲ್ತಿಗೆ ತರಲಾಗಿತ್ತು.. ಕೊನೆ ಕ್ಷಣದಲ್ಲಿ ಕುಮಾರಸ್ವಾಮಿಯವರು ಅಖಾಡಕ್ಕಿಳಿದರು.. ಇದೇ ತಂತ್ರಗಾರಿಕೆಯನ್ನು ಡಿ.ಕೆ.ಶಿವಕುಮಾರ್‌ ಬಳಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ..

ಚನ್ನಪಟ್ಟಣದಲ್ಲಿ ಸ್ವತಃ ಡಿ.ಕೆ.ಶಿವಕುಮಾರ್‌ ಅವರೇ ಹೋಗಿ ಕಾರ್ಯಕರ್ತರನ್ನು ಒಗ್ಗೂಡಿಸುವುದು, ಸಾಧ್ಯವಾದರೆ ಆಪರೇಷನ್‌ ಹಸ್ತ ಮಾಡುವುದು ಮಾಡಿ ಪಕ್ಷವನ್ನು ಬಲವರ್ದಿಸುವ ಪ್ರಯತ್ನ ನಡೆಸಲಾಗುತ್ತದೆ.. ಡಿ.ಕೆ.ಶಿವಕುಮಾರ್‌ ನಾನೇ ಅಭ್ಯರ್ಥಿ ಎಂದು ಹೇಳುತ್ತಾ ಜೆಡಿಎಸ್‌, ಬಿಜೆಪಿ ನಾಯಕರ ದಿಕ್ಕು ತಪ್ಪಿಸಿ ಕೊನೆಗೆ ಡಿ.ಕೆ.ಸುರೇಶ್‌ ಅವರನ್ನೇ ಕಣಕ್ಕಿಳಿಸಲು ಗೆಲ್ಲಿಸಿಕೊಂಡು ಬರುವ ತಂತ್ರಗಾರಿಕೆ ನಡೆಯುತ್ತಿದೆ ಎಂದು ಹೇಳಲಾಗುತ್ತಿದೆ..

ಲೋಕಸಭಾ ಚುನಾವಣೆಯಲ್ಲಿ ಸೋತಿರುವುದರಿಂದ ಡಿ.ಕೆ.ಸುರೇಶ್‌ ಬಗ್ಗೆ ಸಿಂಪಥಿ ಸಿಗಲಿದೆ.. ಇದರ ಜೊತೆ ರಾಮನಗರ ನನ್ನ ಕರ್ಮಭೂಮಿ ಇಲ್ಲಿ ಬಿಟ್ಟು ಎಲ್ಲಿಗೂ ಹೋಗಲ್ಲ ಎನ್ನುತ್ತಿದ್ದ ಕುಮಾರಸ್ವಾಮಿ ರಾಮನಗರ ಬಿಟ್ಟು ಮಂಡ್ಯಕ್ಕೆ ಹೋಗಿದ್ದಾರೆ.. ಈ ವಿಚಾರವನ್ನು ಮುಂದಿಟ್ಟುಕೊಂಡು ಕಾಂಗ್ರೆಸ್‌ ಸಂಘಟನೆಗೆ ಮುಂದಾಗಿದೆ ಎಂದು ಹೇಳಲಾಗುತ್ತಿದೆ.. ಹೀಗಾಗಿ ಇಂದು ಡಿ.ಕೆ.ಶಿವಕುಮಾರ್‌ ನಡೆಸುವ ಸಭೆ ಮಹತ್ವ ಪಡೆದುಕೊಂಡಿದೆ..

Share Post