Politics

ಸಂಸತ್‌ ಪ್ರವೇಶಿಸುತ್ತಿರುವ ಐವರು ಮಾಜಿ ಮುಖ್ಯಮಂತ್ರಿಗಳು; ಮೂವರು ಮಾಜಿ ಸಿಎಂಗಳಿಗೆ ಸೋಲು!

ನವದೆಹಲಿ; ಈ ಬಾರಿ ಎಂಟು ಮಾಜಿ ಮುಖ್ಯಮಂತ್ರಿಗಳು ಲೋಕಸಭೆಗೆ ಆಯ್ಕೆ ಬಯಸಿ ಚುನಾವಣಾ ಅಖಾಡಕ್ಕೆ ಇಳಿದಿದ್ದರು.. ಅದರಲ್ಲಿ ಕರ್ನಾಟಕದ ಮೂವರು ಮಾಜಿ ಸಿಎಂಗಳು ಕೂಡಾ ಅಖಾಡದಲ್ಲಿದ್ದರು.. ಕರ್ನಾಟಕದ ಮೂವರು ಮಾಜಿ ಮುಖ್ಯಮಂತ್ರಿಗಳು ಸೇರಿ ಐದು ಮಂದಿ ಗೆಲುವು ಸಾಧಿಸಿದ್ದಾರೆ.. ಉಳಿದ ಮೂವರು ಹೀನಾಯವಾಗಿ ಸೋತು ಮನೆ ಸೇರಿದ್ದಾರೆ.. ಅವರು ಯಾರು ಯಾರು ಅಂತ ನೋಡೋಣ ಬನ್ನಿ..

ಕರ್ನಾಟಕದ ಮಾಜಿ ಮುಖ್ಯಮಂತ್ರಿಗಳಾದ ಹೆಚ್‌.ಡಿ.ಕುಮಾರಸ್ವಾಮಿ, ಬಸವರಾಜ ಬೊಮ್ಮಾಯಿ ಮತ್ತು ಜಗದೀಶ್ ಶೆಟ್ಟರ್ ಎನ್‌ಡಿಎ ಅಭ್ಯರ್ಥಿಗಳಾಗಿ ಕಣಕ್ಕಿಳಿದಿದ್ದರು. ಮಂಡ್ಯದಿಂದ ಸ್ಪರ್ಧಿಸಿದ್ದ ಜೆಡಿಎಸ್ ನಾಯಕ ಕುಮಾರಸ್ವಾಮಿ, ಕಾಂಗ್ರೆಸ್ ಅಭ್ಯರ್ಥಿ ವಿರುದ್ಧ ಎರಡೂವರೆ ಲಕ್ಷ ಮತಗಳಿಂದ ಗೆಲುವು ಸಾಧಿಸಿದ್ದಾರೆ. ಇನ್ನು ಕಳೆದ ಬಾರಿ ಬಿಜೆಪಿ ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿದ್ದ ಬಸವರಾಜ ಬೊಮ್ಮಾಯಿ ಹಾವೇರಿಯಿಂದ ಸಂಸದರಾದರೆ, ಜಗದೀಶ ಶೆಟ್ಟರ್ ಬೆಳಗಾವಿಯಿಂದ  ಗೆದ್ದಿದ್ದಾರೆ.

ಇನ್ನು ಮಧ್ಯಪ್ರದೇಶದ ಮುಖ್ಯಮಂತ್ರಿಯಾಗಿ ಸುದೀರ್ಘ ಕಾಲ ಸೇವೆ ಸಲ್ಲಿಸಿದ್ದ ಶಿವರಾಜ್ ಸಿಂಗ್ ಚೌಹಾಣ್ ಸಂಸದರಾಗಿ ಸಂಸತ್ ಪ್ರವೇಶಿಸಲಿದ್ದಾರೆ. ಅವರು ವಿದಿಶಾ ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಕಾಂಗ್ರೆಸ್ ಅಭ್ಯರ್ಥಿ ಪ್ರತಾಪ್ ಭಾನು ಶರ್ಮಾ ವಿರುದ್ಧ 8 ಲಕ್ಷಕ್ಕೂ ಹೆಚ್ಚು ಮತಗಳಿಂದ ಗೆದ್ದಿದ್ದಾರೆ. ಅಸ್ಸಾಂನ ಮಾಜಿ ಮುಖ್ಯಮಂತ್ರಿ ಸರ್ಬಾನಂದ ಸೋನೋವಾಲ್ ಅವರು ಅಸ್ಸಾಂನ ದಿಬ್ರುಗಢದಿಂದ ಸಂಸದರಾಗಿ ಗೆದ್ದಿದ್ದಾರೆ.

ಇನ್ನು ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿಗಳಾಗಿ ಸೇವೆ ಸಲ್ಲಿಸಿದ ಒಮರ್ ಅಬ್ದುಲ್ಲಾ (ಬಾರಾಮುಲ್ಲಾ) ಮತ್ತು ಮೆಹಬೂಬಾ ಮುಫ್ತಿ (ಅನಂತನಾಗ್ – ರಾಜೌರಿ) ಅವರು ಸಂಸತ್ತಿಗೆ ಸ್ಪರ್ಧಿಸಿ ಸೋಲು ಅನುಭವಿಸಿದ್ದಾರೆ.. ಇತ್ತ ರಾಜಗಢದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದ ಮಾಜಿ ಮುಖ್ಯಮಂತ್ರಿ ದಿಗ್ವಿಜಯ್ ಸಿಂಗ್ ಕೂಡ ಸೋತಿದ್ದಾರೆ.

Share Post