Politics

ಪ್ರಜ್ವಲ್ ನ ವಿದೇಶಕ್ಕೆ ಕಳಿಸಿದ್ದೇ ದೇವೇಗೌಡರು; ಸಿದ್ದರಾಮಯ್ಯ ಹೇಳಿಕೆಗೆ HDK ತಿರುಗೇಟು

ಬೆಂಗಳೂರು: ಪ್ರಜ್ವಲ್ ನನ್ನು ವಿದೇಶಕ್ಕೆ ಕಳಿಸಿರುವುದೇ ಅವರ ತಾತ. ವಿದೇಶಕ್ಕೆ ಕಳಿಸಿ ಈಗ ಪತ್ರ ಬರೆದು ಏನು ಮಾಡುತ್ತಾರೆ? ಎಂದು ಮಾಜಿ ಪ್ರಧಾನಿಗಳಾದ ಹೆಚ್.ಡಿ.ದೇವೆಗೌಡರ ಬಗ್ಗೆ ಲಘುವಾಗಿ ಮಾತನಾಡಿರುವ ಸಿಎಂ ಸಿದ್ದರಾಮಯ್ಯ ಅವರ ವಿರುದ್ಧ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಬಗ್ಗೆ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿರುವ ಅವರು; ನಿಮ್ಮ ಆತ್ಮಸಾಕ್ಷಿ ಎನ್ನುವುದು ಅಸ್ತಿತ್ವದಲ್ಲಿ ಇದೆಯಾ? ಎಂದು ಪ್ರಶ್ನಿಸಿದ್ದಾರೆ.

ದಯಮಾಡಿ ವಕೀಲಿಕೆ ಮಾಡಬೇಡಿ

ನಾನು ವಕೀಲನಾಗಿದ್ದೆ, ಹಿಂದೆ ನಾನೂ ವಕೀಲಿಕೆ ಮಾಡುತ್ತಿದ್ದೆ ಎಂದು ಪದೇಪದೆ ಹೇಳಬೇಡಿ. ನಿಮ್ಮ ವಕೀಲಿ ಜ್ಞಾನದ ಮೇಲೆ ಅಗೌರವ ಬರುವಂತೆ ಮಾತನಾಡಬೇಡಿ. ಎಷ್ಟೋ ಮಹಾನುಭಾವರು ಈ ವೃತ್ತಿಗೆ ಕಳಸಪ್ರಾಯರಾಗಿದ್ದಾರೆ. ದಯಮಾಡಿ ಅವರೆಲ್ಲರನ್ನು ಅಪಮಾನಿಸಬೇಡಿ. “ಅತ್ಯಾಚಾರದ ವೀಡಿಯೊ ಹರಿದಾಡಿತು ಎನ್ನುವುದಕ್ಕಿಂತ, ಅತ್ಯಾಚಾರ ಘೋರ ಅಪರಾಧ” ಎನ್ನುವ ಆಣಿಮುತ್ತು ಉದುರಿಸಿದ್ದೀರಿ. ನಿಮ್ಮ ವಕೀಲಿಕೆಯ ಪಾಂಡಿತ್ಯದ ಬಗ್ಗೆ ಈ ನಿಮ್ಮ ಮಾತು ನನ್ನಲ್ಲಿ ಅನೇಕ ಪ್ರಶ್ನೆಗಳನ್ನು ಉಂಟು ಮಾಡಿದೆ ಎಂದು ಸಿಎಂ ಅವರಿಗೆ ಕುಟುಕಿದ್ದಾರೆ ಕುಮಾರಸ್ವಾಮಿ.

ಅತ್ಯಾಚಾರ ಅಮಾನುಷ ಸರಿ, ವಿಡಿಯೋ ಹಂಚುವುದೇನು?

ಅತ್ಯಾಚಾರ ಅಮಾನುಷ ಎನ್ನುವುದರಲ್ಲಿ ಎರಡನೇ ಮಾತಿಲ್ಲ. ಆದರೆ, ಆ ಅಮಾನುಷಕ್ಕೆ ತುತ್ತಾದ ಹೆಣ್ಮಕ್ಕಳ ವಿಡಿಯೋಗಳನ್ನು ಹಂಚಿ ವಿಕೃತಾನಂದ ಅನುಭವಿಸುವುದು ಮಾನುಷವೇ? ಮನುಷ್ಯರು ಹೇಳುವ ಮಾತೇ ಇದು? ದಯಮಾಡಿ ನೀವು ಇನ್ನೆಂದೂ ನಾನು ವಕೀಲಿಕೆ ಮಾಡುತ್ತಿದ್ದೆ ಎನ್ನಬೇಡಿ. ನಿಮ್ಮ ಪಕ್ಕದಲ್ಲಿ ಪೆನ್ ಡ್ರೈವ್ ಹಂಚಿಕೆದಾರ ಕೂತಿದ್ದಾರೆ. ಆ CD ಶಿವು ಚುನಾವಣಾ ಸ್ವಾರ್ಥಕ್ಕಾಗಿ ಹೆಣ್ಮಕ್ಕಳ ಮಾನವನ್ನು ಪೆನ್ ಡ್ರೈವುಗಳಿಗೆ ತುಂಬಿಸಿ ಹಾದಿಬೀದಿಯಲ್ಲಿ ಮಾರಿಕೊಂಡಿದ್ದು ನಿಮಗೆ ಗೊತ್ತಿಲ್ಲವೇ? ಸ್ವಯಂ ಘೋಷಿತ ಸಂವಿಧಾನ ತಜ್ಞ ಬಿರುದಾಂಕಿತರಾದ ನೀವು, ಇಂಥ ಮಾನದ್ರೋಹಿಯನ್ನು ಪಕ್ಕದಲ್ಲೇ ಕೂರಿಸಿಕೊಳ್ಳಲು ನಿಮ್ಮ ಆತ್ಮಸಾಕ್ಷಿ ಒಪ್ಪುತ್ತದೆಯೇ? ಪ್ರಶ್ನೆ ಮಾಡಿಕೊಳ್ಳಿ ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.

ನಿಮ್ಮ ಡಿಸಿಎಂ ಅನ್ನು ಪ್ರಶ್ನಿಸಿದ್ದೀರಾ?

ನಿಮ್ಮ ಉಪ ಮುಖ್ಯಮಂತ್ರಿ ಮಹಾಶಯ ಪೆನ್ ಡ್ರೈವ್ ಹಂಚಿಕೆಯಲ್ಲಿ ಶಾಮೀಲಾಗಿಲ್ಲವೇ? ದೇವರಾಜೆಗೌಡ, ಬ್ರೋಕರ್ ಶಿವರಾಮೇಗೌಡ, ಡಿ.ಕೆ.ಶಿವಕುಮಾರ್ ನಡುವಿನ ಮೊಬೈಲ್ ಸಂಭಾಷಣೆ ನಿಮ್ಮ ಸರಕಾರದ ಮಾನವನ್ನು ಹಾಸನದಲ್ಲಿ ಪೆನ್ ಡ್ರೈವ್ ರೂಪದಲ್ಲಿ ವೋಟಿಗೆ ಹರಾಜಾಗಲಿಲ್ಲವೇ? ಚಾಲಕ ಕಾರ್ತಿಕ್ ಗೌಡ ಆ ನೊಂದ ಮಹಿಳೆಯರ ಅಶ್ಲೀಲ ವಿಡಿಯೋಗಳನ್ನು ತುಂಬಿದ್ದ ಮೊದಲ ಪೆನ್ ಡ್ರೈವನ್ನು ನಿಮಗೆ ತಂದು ಕೊಡಲಿಲ್ಲವೇ? ಎಂದು ನಿಮ್ಮ ಉಪ ಮುಖ್ಯಮಂತ್ರಿಯನ್ನು ಒಮ್ಮೆಯಾದರೂ ಕೇಳಿದ್ದೀರಾ ಮುಖ್ಯಮಂತ್ರಿಗಳೇ..? ಎಂದು ಅವರು ಪ್ರಶ್ನಿಸಿದ್ದಾರೆ.

ಪ್ರಜ್ವಲ್ ರೇವಣ್ಣ ಅವರನ್ನು ನಾನೆಂದೂ ಸಮರ್ಥನೆ ಮಾಡಿಲ್ಲ, ಮಾಡುವುದೂ ಇಲ್ಲ. ಪ್ರಕರಣ ಹೊರಬಂದ ಮೊದಲ ದಿನವೇ ‘ಈ ನೆಲದ ಕಾನೂನಿಗೆ ಎಲ್ಲರೂ ತಲೆ ಬಾಗಲೇಬೇಕು. ಉಪ್ಪು ತಿಂದವರು ನೀರು ಕುಡಿಯಲೇ ಬೇಕು’ ಎಂದು ಹೇಳಿದ್ದೇನೆ. ನನ್ನ ಹೇಳಿಕೆ ನಿಮಗೆ ಗೊತ್ತಾಗಲಿಲ್ಲವೇ? ನಿಮಗೆ ಪತ್ರಿಕೆ ಓದುವ ಅಭ್ಯಾಸ ಇಲ್ಲದಿದ್ದರೆ ನಾನೇನು ಮಾಡಲಿ? ಎಂದಿದ್ದಾರೆ ಅವರು.

ದೇವೇಗೌಡರ ಬಗ್ಗೆ ನೀವು ಕಾರಿಕೊಂಡ ವಿಷದ ಬಗ್ಗೆ ಹೇಳುವುದಾದರೆ; ನನ್ನ ಮಾತಿಗೆ ಗೌರವ ಕೊಟ್ಟು ಪ್ರಜ್ವಲ್ ವಾಪಸ್ ಬಂದು SIT ಮುಂದೆ ಹಾಜರಾಗದಿದ್ದರೆ ಕುಟುಂಬದಿಂದ ಹೊರ ಹಾಕುತ್ತೇನೆ ಎಂದು ದೇವೇಗೌಡರು ಎಚ್ಚರಿಕೆ ನೀಡಿದ್ದಾರೆ. ಅವರ ಮಾತೇ ನಮ್ಮ ಕುಟುಂಬದ ಮಾತು. ಆದರೆ ನೀವು ಹೇಳಿದ್ದೇನು? ಪ್ರಜ್ವಲ್ ನನ್ನು ವಿದೇಶಕ್ಕೆ ಕಳಿಸಿರುವುದೇ ಅವರ ತಾತ. ವಿದೇಶಕ್ಕೆ ಕಳಿಸಿ ಈಗ ಪತ್ರ ಬರೆದು ಏನು ಮಾಡುತ್ತಾರೆ? ಎಂದಿದ್ದೀರಿ! ನಿಮ್ಮ ಆತ್ಮಸಾಕ್ಷಿ ಎನ್ನುವುದು ಅಸ್ತಿತ್ವದಲ್ಲಿ ಇದೆಯಾ? ಎಂದು ತೀಕ್ಷ್ಣವಾಗಿ ಪ್ರಶ್ನಿಸಿದ್ದಾರೆ.

ನಮ್ಮ ಮನೆಗಳ ಮೇಲೆ ಕಳ್ಳಕಿವಿ ಇಟ್ಟಿದ್ದೀರಿ

ಅವನು ದೇವೇಗೌಡರಿಗೆ ಹೇಳಿಯೇ ವಿದೇಶಕ್ಕೆ ಹೋಗಿದ್ದಾನೆ ಎಂದು ಹೇಳಿದ್ದೀರಿ. ನಿಮಗೆ ಹೇಗೆ ಗೊತ್ತು? ನಿಮ್ಮ ಪಕ್ಷದಲ್ಲೇ ಕೂರುವ CD ಶಿವು ಮಾಡುತ್ತಿರುವ ಮಾನಗೇಡಿ ಕೃತ್ಯಗಳು ಗೊತ್ತಾಗೋದಿಲ್ಲ ನಿಮಗೆ!? ಆದರೆ, ದೇವೆಗೌಡರ ಮನೆಯಲ್ಲಿ ನಡೆಯೋದೆಲ್ಲ ನಿಮಗೆ ಗೊತ್ತಾಗುತ್ತದೆಯೇ!? ಅದು ಹೇಗೆ? ನನ್ನ ಮತ್ತು ದೇವೆಗೌಡರ ಮನೆಗೆ ಕಳ್ಳಕಿವಿ ಇಟ್ಟಿದ್ದೀರಿ ಎನ್ನುವ ನನ್ನ ಆರೋಪ ಸತ್ಯ ಎಂದ ಹಾಗಾಯಿತು.. ಅಲ್ಲವೇ? ಅಸತ್ಯ ಹೇಳುವ ಅಗತ್ಯ ನಮಗಿಲ್ಲ. ಅವನು ಕುಟುಂಬದ ಸಂಪರ್ಕದಲ್ಲಿ ಇಲ್ಲ. ಹಿಂದೆಯೂ ಹೇಳಿದ್ದೆ, ಈಗಲೂ ಹೇಳುತ್ತಿದ್ದೇನೆ ಎಂದು ಮಾಜಿ ಮುಖ್ಯಮಂತ್ರಿ ಸ್ಪಷ್ಟಪಡಿಸಿದ್ದಾರೆ.

 ಇಂಟೆಲಿಜೆನ್ಸ್ ಇಟ್ಟುಕೊಂಡಿರುವ ನಿಮಗೇನೂ  ಗೊತ್ತಿಲ್ಲವೇ?

ಪಕ್ಷದ ಅಧ್ಯಕ್ಷನಾಗಿ ಆತನ ವಿರುದ್ಧ ಕ್ರಮ ಕೈಗೊಂಡಿದ್ದೇನೆ. ಆತನ ಮೇಲಿರುವ ಆರೋಪ ಸಾಬೀತಾದರೆ ಪಕ್ಷದಲ್ಲಿ ಆತನಿಗೆ ಸ್ಥಾನವಿಲ್ಲ. ನಿಮಗೆ ಸಂಶಯ ಸಲ್ಲ. ಇನ್ನು, SIT ತನಿಖೆ ಅಂತೀರಾ? SIT ಹೆಸರಿನಲ್ಲಿ ಎಷ್ಟು ಸ್ಲೀಪರ್ ಸೆಲ್ ಗಳು ತನಿಖೆ ಮಾಡುತ್ತಿವೆ ಎಂದು ಬಿಚ್ಚಿಟ್ಟರೆ ನಿಮ್ಮ ಸರಕಾರ ಕಥೆ ಮುಗಿದೇ ಹೋಗುತ್ತದೆ. CD ಶಿವು ಆದೇಶದ ಮೇರೆಗೆ ಪೆನ್ ಡ್ರೈವ್ ಗಳನ್ನು ಹಂಚಿದ ಕಿರಾತಕರೆಲ್ಲ ದಿನ ಬೆಳಗಾದರೆ ಯಾರ ಮನೆಯಲ್ಲಿ ಪ್ರತ್ಯಕ್ಷರಾಗುತ್ತಾರೆ? ವಿಧಾನಸೌಧದಲ್ಲಿ ಯಾರ ಕಚೇರಿಯೊಳಕ್ಕೆ ನುಸಳುತ್ತಾರೆ ಎನ್ನುವುದು ಇಂಟೆಲಿಜೆನ್ಸ್ ಅನ್ನು ಇಟ್ಟುಕೊಂಡಿರುವ ನಿಮಗೇ ಗೊತ್ತಿಲ್ಲದಿದ್ದರೆ ಹೇಗೆ? ಎಂದು ಸಿಎಂಗೆ ಟಾಂಗ್ ಕೊಟ್ಟಿದ್ದಾರೆ.

ಶೋಕದ ಮನೆಯಲ್ಲಿ ರಾಜಕೀಯ ಮಾಡುವ ಜಾಯಮಾನ ನಮ್ಮದಲ್ಲ

ನಿಮ್ಮ ಸುಪುತ್ರ, ದಿವಂಗತ ರಾಕೇಶ್ ಅವರನ್ನು ಟುಮಾರೋ ಲ್ಯಾಂಡ್ ( Tomorrow Land) ಎನ್ನುವ ಅಮಲಿನ ಪಾರ್ಟಿಗೆ ನೀವೇ ಕಳಿಸಿದ್ದೀರಿ, ಅಲ್ಲಿ ಅವರ ಸಾವಿಗೆ ನೀವೇ ಕಾರಣರಾದಿರಿ ಎಂದು ಯಾರಾದರೂ ನಿಮ್ಮನ್ನು ಕೇಳಿದರೆ ನಿಮ್ಮ ಮನಸ್ಸಿಗೆ ಹೇಗಾಗಬೇಡ? ದೇವೇಗೌಡರ ಬಗ್ಗೆ ನೀವು ಕೇಳಿದ್ದು ಕೂಡ ಹಾಗೆಯೇ ಅಲ್ಲವೇ ಮಾನ್ಯ ಮುಖ್ಯಮಂತ್ರಿಗಳೇ.. ಶೋಕದ ಮನೆಯಲ್ಲಿ ರಾಜಕೀಯ ಮಾಡುವ ಜಾಯಮಾನ ನಮ್ಮದಲ್ಲ. ದಯಮಾಡಿ ಅರ್ಥ ಮಾಡಿಕೊಳ್ಳಿ ಕಿಡಿಕಾರಿದ್ದಾರೆ ಕುಮಾರಸ್ವಾಮಿ ಅವರು.

Share Post