ಮೋದಿ ಸರ್ಕಾರ 20 ಉದ್ಯಮಿಗಳಿಗಾಗಿ ಶ್ರಮಿಸುತ್ತಿದೆ; ರಾಹುಲ್ ಗಾಂಧಿ!
ಮಂಡ್ಯ; ಕೇಂದ್ರ ಮೋದಿ ನೇತೃತ್ವದ ಸರ್ಕಾರ 20-25 ಉದ್ಯಮಿಗಳ ಏಳ್ಗೆಗಾಗಿ ಮಾತ್ರ ಕೆಲಸ ಮಾಡುತ್ತಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆರೋಪ ಮಾಡಿದ್ದಾರೆ.. ಮಂಡ್ಯದಲ್ಲಿ ನಡೆದ ಸಮಾವೇಶದಲ್ಲಿ ಮಾತನಾಡಿದ ಅವರು, ಮೋದಿ ಸರ್ಕಾರ ಉದ್ಯಮಿಗಳ 16 ಲಕ್ಷ ಕೋಟಿ ರೂಪಾಯಿ ಸಾಲ ಮನ್ನಾ ಮಾಡಿದೆ ಎಂದು ಆರೋಪ ಮಾಡಿದ್ದಾರೆ..
ಮೋದಿ ಸರ್ಕಾರ ರೈತರ, ಬಡವರ ಸಾಲ ಮನ್ನಾ ಮಾಡಿ ಅಂದ್ರೆ ಮಾಡುತ್ತಿಲ್ಲ. ಅದರ ಬದಲಾಗಿ ಉದ್ಯಮಿಗಳ ಸಾಲ ಮನ್ನಾ ಮಾಡಿದೆ.. ಬೆಳೆ ವಿಮೆ ಯೋಜನೆಯಲ್ಲೂ ದೇಶದ ರೈತರಿಗೆ ಭಾರಿ ಅನ್ಯಾಯ ಆಗಿದೆ ಎಂದು ರಾಹುಲ್ ಗಾಂಧಿ ಹೇಳಿದರು.. ನಾವು ಅಧಿಕಾರಕ್ಕೆ ಬಂದರೆ ರೈತರಿಗಾಗಿಯೇ ಮೂರು ಯೋಜನೆಗಳನ್ನು ಜಾರಿಗೆ ತರುತ್ತೇವೆ.. ರೈತರ ಫಸಲುಗಳಿಗೆ ಕನಿಷ್ಟ ಬೆಂಬಲ ಬೆಲೆ ಯೋಜನೆ ಜಾರಿ ಮಾಡುತ್ತೇವೆ.. ದೇಶಾದ್ಯಂತ ರೈತರ ಸಾಲ ಮನ್ನಾ ಮಾಡುತ್ತೇವೆ. 30 ದಿನಗಳಲ್ಲಿ ಬೆಳೆ ವಿಮೆ ಪಾವತಿ ಮಾಡುತ್ತೇವೆ ಎಂದು ರಾಹುಲ್ ಗಾಂಧಿ ಹೇಳಿದರು..
ನಾವು ಸಂವಿಧಾನ ರಕ್ಷಣೆಗೆ ಬದ್ಧರಾಗಿದ್ದೇವೆ ಎಂದಿರುವ ರಾಹುಲ್ ಗಾಂಧಿ, ಬಿಜೆಪಿ ಸರ್ಕಾರ ಸಂವಿಧಾನ ವಿರೋಧಿ ನಡೆ ಅನುಸರಿಸುತ್ತಿದೆ ಎಂದು ಆರೋಪ ಮಾಡಿದ್ದಾರೆ.. ಈಗಾಗಲೇ ರಾಜ್ಯದಲ್ಲಿ ನಾವು ನುಡಿದಂತೆ ನಡೆದಿದ್ದೇವೆ.. ಐದು ಗ್ಯಾರೆಂಟಿಗಳನ್ನು ನೀಡಿದ್ದೇವೆ. ಕೇಂದ್ರದಲ್ಲಿ ನಾವೇ ಅಧಿಕಾರಕ್ಕೆ ಬಂದರೆ ಮಹಿಳೆಯರಿಗೆ ವರ್ಷಕ್ಕೆ 1 ಲಕ್ಷ ರೂಪಾಯಿ ಹೆಚ್ಚುವರಿಯಾಗಿ ನೀಡುತ್ತೇವೆ. ಈಗಾಗಲೇ ನಮ್ಮ ರಾಜ್ಯ ಸರ್ಕಾರ 24 ಸಾವಿರ ರೂಪಾಯಿ ವರ್ಷಕ್ಕೆ ನೀಡುತ್ತಿದೆ.. ನಾವು 1 ಲಕ್ಷ ಕೊಟ್ಟರೆ ನಿಮಗೆ ವರ್ಷಕ್ಕೆ 1 ಲಕ್ಷ 24 ಸಾವಿರ ರೂಪಾಯಿ ಸಿಗಲಿದೆ ಎಂದು ರಾಹುಲ್ ಗಾಂಧಿ ಹೇಳಿದರು.
ಮಂಡ್ಯದ ಪಿಇಎಸ್ ಕಾಲೇಜು ಮೈದಾನದಲ್ಲಿ ಕಾಂಗ್ರೆಸ್ ಸಮಾವೇಶ ಆಯೋಜನೆ ಮಾಡಲಾಗಿತ್ತು. ಚುನಾವಣಾ ಬಾಂಡ್ ಕಾನೂನುಬಾಹಿರ ಎಂದು ಸುಪ್ರೀಂಕೋರ್ಟ್ ಹೇಳಿದೆ. ಅದನ್ನು ರದ್ದು ಮಾಡಿದೆ ಎಂದಿರುವ ರಾಹುಲ್ ಗಾಂಧಿ, ಬಿಜೆಪಿಯವರು ಈ ಚುನಾವಣಾ ಬಾಂಡ್ ಮೂಲಕ ಕೋಟ್ಯಂತರ ರೂಪಾಯಿ ಸಂಗ್ರಹ ಮಾಡಿದ್ದಾರೆ. ಇದು ವಿಶ್ವದ ಅತ್ಯಂತ ದೊಡ್ಡ ಹಗರಣವಾಗಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆರೋಪಿಸಿದರು.